ಶಿವಮೊಗ್ಗ: ಜಿಲ್ಲೆಯ ತಾಲೂಕುಗಳನ್ನು ಕಾಡುತ್ತಿರುವ ಕೆಎಫ್‌ಡಿ ಸಮರ್ಪಕ ನಿಯಂತ್ರಣಕ್ಕಾಗಿ ವಿಶೇಷ ಸಭೆಯನ್ನು ಕರೆದು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ತಿಳಿಸಿದರು.
ಶನಿವಾರ ಡಿಸಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಜಿಲ್ಲೆಯಲ್ಲಿ ಕೋವಿಡ್ ಹಾಗೂ ಕೆಎಫ್‌ಡಿ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಪರಿಶೀಲಿಸಿ ಮಾತನಾಡಿದ ಅವರು, ಕೆಎಫ್‌ಡಿ ಬಗ್ಗೆ ಈಗಾಗಲೇ ಜಿಲ್ಲೆಯ ಶಾಸಕರು ವಿಧಾನಸಭೆಯಲ್ಲಿ ಸಮಗ್ರ ಮಾಹಿತಿ ನೀಡಿದ್ದಾರೆ. ಕೆಎಫ್‌ಡಿಗೆ ಸೂಕ್ತ ಔಷಧ ಕಂಡು ಹಿಡಿಯುವುದು ಸೇರಿದಂತೆ ಈ ನಿಟ್ಟಿನಲ್ಲಿ ಆಗಬೇಕಾದ ಸಂಶೋಧನೆಗಳು ಇತ್ಯಾದಿಗಳ ಕುರಿತು ಸಮಾಲೋಚನೆ ನಡೆಸಲು ಉನ್ನತ ಮಟ್ಟದ ಸಭೆ ಕರೆಯಲಾಗುವುದು ಎಂದರು.
ಜಿಲ್ಲೆಯಲ್ಲಿ ಪ್ರಸ್ತುತ ವರ್ಷ 168 ಕೆಎಫ್‌ಡಿ ಪ್ರಕರಣಗಳು ವರದಿಯಾಗಿದ್ದು, ತೀರ್ಥಹಳ್ಳಿಯಲ್ಲಿ 132 ಹಾಗೂ ಸಾಗರದಲ್ಲಿ 36 ಪ್ರಕರಣ ವರದಿಯಾಗಿದೆ. ಪ್ರಸ್ತುತ 12 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಲ್ಲಿ 5 ಸಾವಿರ ರಕ್ತ ಪರಿಶೋಧನೆ ನಡೆಸಲಾಗಿದೆ. 2 ಮಂಗಗಳಲ್ಲಿ ಪಾಸಿಟಿವ್ ಕಂಡು ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕೋವಿಡ್ ನಿಯಂತ್ರಣ: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಿಗಿ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಕೋವಿಡ್ ಜಿಲ್ಲೆಗೆ ಕಾಲಿರಿಸಿಲ್ಲ. ಆದರೆ ಈ ಬಗ್ಗೆ ನಿರ್ಲಕ್ಷ್ಯ ತೋರಬಾರದು. ಕೋವಿಡ್ ವಿರುದ್ಧ ದೀರ್ಘಕಾಲೀನ ಹೋರಾಟ ನಡೆಸಬೇಕಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಾ ಇನ್ನೂ 6-7 ತಿಂಗಳ ಕಾಲ ಕೋವಿಡ್ ನೊಂದಿಗೆ ಬದುಕಲು ಮಾನಸಿಕವಾಗಿ ಸನ್ನದ್ಧರಾಗಬೇಕಿದೆ ಎಂದು ಸಚಿವರು ಹೇಳಿದರು. ಕೊರೊನಾ ಚಿಕಿತ್ಸೆಗೆ ಪ್ಲಾಸ್ಮಾ ಥೆರಪಿ ಪ್ರಸ್ತುತ ಕ್ಲಿನಿಕಲ್ ಟೆಸ್ಟಿಂಗ್ ಹಂತದಲ್ಲಿದ್ದು, ಯಶಸ್ವಿಯಾದರೆ ಎಲ್ಲಾ ಜಿಲ್ಲೆಗಳಲ್ಲಿ ಅದನ್ನು ಚಿಕಿತ್ಸೆಗಾಗಿ
ಅನುಸರಿಸಲಾಗುವುದು ಎಂದರು.
ಎಲ್ಲಾ ಜಿಲ್ಲೆಗಳಲ್ಲಿರುವ ಬ್ಲಿಡ್ ಬ್ಯಾಂಕ್ ಗಳಲ್ಲಿ ರಕ್ತ ಸಂಗ್ರಹ ಕಡಿಮೆಯಾಗುತ್ತಿದ್ದು, ರಕ್ತ ನೀಡಲು ದಾನಿಗಳು ಮುಂದೆ ಬರಬೇಕು. ಇದಕ್ಕಾಗಿ ಜಿಲ್ಲೆಗಳಲ್ಲಿ ರಕ್ತದಾನ ಶಿಬಿರ ಆಯೋಜಿಸಬೇಕು ಎಂದರು. ಬಾಕಿ ವೇತನ ಪಾವತಿಗೆ ಕ್ರಮ: ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಸಿಬ್ಬಂದಿ ಸೇರಿದಂತೆ ಸಿಬ್ಬಂದಿಗೆ ಬಾಕಿ ಇರಿಸಿರುವ ವೇತನ ಪಾವತಿಗೆ ಈಗಾಗಲೆ 80ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದೇ ರೀತಿ ಇಲಾಖೆಯಲ್ಲಿ ವಿವಿಧ ಹಂತದಲ್ಲಿ ಸಿಬ್ಬಂದಿ ವೇತನ ತಾರತಮ್ಯ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಕೋವಿಡ್ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿ, ಲಾಕ್‌ಡೌನ್ ಅವ ಧಿಯಲ್ಲಿ 842 ವಲಸೆ ಕಾರ್ಮಿಕರಿಗೆ ಜಿಲ್ಲೆಯ 20 ಕಡೆಗಳಲ್ಲಿ ವಸತಿ ಕಲ್ಪಿಸಲಾಗಿದೆ. ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಅವರನ್ನು ಸ್ವಂತ ಊರುಗಳಿಗೆ ಕಳುಹಿಸಲಾಗುತ್ತಿದೆ ಎಂದರು. ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಅರಗ ಜ್ಞಾನೇಂದ್ರ, ಹರತಾಳು ಹಾಲಪ್ಪ, ಆಯನೂರು ಮಂಜುನಾಥ, ಡಿಸಿ ಕೆ.ಬಿ.ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.