ಶಿವಮೊಗ್ಗ: ಮಳೆ ನೆಪ ಮಾಡಿ ಬಡವರಿಗೆ ಕೆಲಸ ನೀಡದಿದ್ದರೆ ಅಂತಹ ತಾಂತ್ರಿಕ ಸಹಾಯಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಎಚ್ಚರಿಕೆ ನೀಡಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಬುಧವಾರ ನಡೆದ ಅಂತರ್ಜಲ ಕಾಮಗಾರಿ ಹಾಗೂ ಮಹಾತ್ಮಗಾಂಧಿ ನರೇಗಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಮುಂದಿನ ತಿಂಗಳಲ್ಲಿ ಪಿಡಿಒಗಳು ನರೇಗಾ ಕೆಲಸದಲ್ಲಿ ಪ್ರಗತಿ ಸಾಧಿ ಸದಿದ್ದರೆ ಕ್ರಮ ನಿಶ್ಚಿತ. ಮಳೆಗಾಲದ ನೆಪದಲ್ಲಿ ಸಾಧನೆ ಕಡಿಮೆ ಮಾಡಬಾರದು. ಹೀಗಾಗಿ ಏನೇನು ಸಾಧ್ಯವೋ ಹುಡುಕಿ ಕೆಲಸ ನೀಡುವಂತೆ ಸೂಚಿಸಿದರು. ಯಾವೊಬ್ಬ ಬಡವನೂ ಕೆಲಸವಿಲ್ಲದೆ ಪರದಾಡಬಾರದು. ಕಾಮಗಾರಿ ಏನೇನು ಮಾಡಿಸಬೇಕೋ ಅದು ಈ ತಿಂಗಳ ನಡೆಯುತ್ತಿದೆ. ಅದೇ ರೀತಿ ಮುಂದಿನ ತಿಂಗಳಲ್ಲಿ ಯಾವ ಕಾಮಗಾರಿ ಕೈಗೊಳ್ಳಬೇಕು ಎಂಬುದನ್ನು ಈಗಲೇ ಪಟ್ಟಿ ಮಾಡಿ ಸಿಇಒ ಜೊತೆ ಚರ್ಚಿಸಿ. ನೀವೇ ಕೆಲಸವನ್ನು ಆಯ್ಕೆ ಮಾಡಿಕೊಂಡಲ್ಲಿ ಗುರಿ ನಿಗದಿ ಪಡಿಸುವುದಿಲ್ಲ ಎಂದರು.
ಖಾತ್ರಿ ಯೋಜನೆಗಾಗಿ ಒಟ್ಟು 1 ಲಕ್ಷ ಕೋಟಿ ಅನುದಾನ ಬಿಡುಗಡೆ ಆಗಿದೆ. ಮೆಟೀರಿಯಲ್, ಲೇಬರ್ ಹಣ ಬಿಡುಗಡೆ ಆಗಿದೆ. ಈ ಬಾರಿ ಯಾವುದೂ ಬಾಕಿ ಇಲ್ಲ. ಹಣ ಖಾತೆಗೆ ಬರುತ್ತಿದೆ. ಹಾಗಾಗಿ ಕಾಮಗಾರಿಗಳ ಗುರಿ ಸಿದ್ಧಪಡಿಸಿಕೊಳ್ಳಿ. ಈ ಬಾರಿ ನಡೆದ ಕಾಮಗಾರಿಯಲ್ಲಿ 10 ಗ್ರಾಮ ಪಂಚಾಯತ್ ಗಳ ಕಾಮಗಾರಿ ಮೆಚ್ಚಿಕೊಳ್ಳಬಹುದಾಗಿದೆ. ಆದರೆ ಉಳಿದ ಗ್ರಾಪಂ ವ್ಯಾಪ್ತಿಯಲ್ಲಿ ನಡೆದ ಕೆಲಸ ಸಮಾಧಾನಕರವಾಗಿಲ್ಲ ಎಂದರು.
ಅಂತರ್ಜಲ ಮತ್ತು ನರೆಗಾ ಯೋಜನೆಯಲ್ಲಿ ಶಿವಮೊಗ್ಗ ಪೈಲೆಟ್ ಪ್ರಾಜೆಕ್ಟ್ ಆಗಿದ್ದು ಇತರೆ ಜಿಲ್ಲೆಗಳಿಗೆ ರಾಜ್ಯದಲ್ಲೇ ಶಿವಮೊಗ್ಗ ಮಾದರಿಯಾಗಬೇಕು. ಹೀಗಾಗಿ ಮುಂದಿನ ದಿನಗಳಲ್ಲಿ ಗುರಿ ನಿಗದಿಪಡಿಸಿಕೊಂಡು ಕಾಮಗಾರಿ ಕೈಗೊಳ್ಳಿ. ಪ್ರತಿ ತಿಂಗಳು ಸಭೆ ನಡೆಸಿ ಪ್ರಗತಿ ಪರಿಶೀಲಿಸಲಾಗುವುದು ಎಂದರು. ಕೆಲವು ಪಿಡಿಒಗಳಲ್ಲಿ ಕಾಮಗಾರಿ ಬಗ್ಗೆ ಅಸಡ್ಡೆ ಇದೆ. ಈ ಅಸಡ್ಡೆ ಸಲ್ಲದು. ಹಾಗಾಗಿ ಪ್ರತಿ ತಿಂಗಳು ಈ ಕಾಮಗಾರಿ ಕುರಿತು ಸಭೆ ನಡೆಸಬೇಕೆಂದರು.ಸಭೆಯಲ್ಲಿ ಜಿಪಂ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯ್ ಕುಮಾರ್, ಜಿಪಂ ಸಿಇಒ ಎಂ.ಎಲ್. ವೈಶಾಲಿ ಮೊದಲಾದವರಿದ್ದರು