Advertisement

ಎನ್‌ಐಆರ್‌ಎಫ್‌: ಕುವೆಂಪು ವಿವಿಗೆ 73ನೇ ರ್‍ಯಾಂಕ್‌

01:38 PM Jun 12, 2020 | Naveen |

ಶಿವಮೊಗ್ಗ: ನವದೆಹಲಿಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಅವರು ಗುರುವಾರ ಬಿಡುಗಡೆಗೊಳಿಸಿರುವ 2020ರ ಪ್ರತಿಷ್ಠಿತ ರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಗಳ ರ್‍ಯಾಂಕಿಂಗ್‌ (ಎನ್‌ಐಆರ್‌ಎಫ್‌)ನಲ್ಲಿ 1.85 ಅಂಕ ವೃದ್ಧಿಸಿಕೊಂಡಿರುವ ಕುವೆಂಪು ವಿಶ್ವವಿದ್ಯಾಲಯವು 73ನೇ ರ್‍ಯಾಂಕ್‌ ಪಡೆದಿದ್ದು, ಸ್ಥಿರತೆ ಕಾಯ್ದುಕೊಂಡಿದೆ. ರಾಜ್ಯಗಳ ಸಾಂಪ್ರದಾಯಿಕ ವಿವಿಗಳ ಪೈಕಿ ಮೂರನೇ ಸ್ಥಾನ ಪಡೆದಿದೆ.

Advertisement

ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನಡೆಸುವ ದೇಶದ ಶೈಕ್ಷಣಿಕ ಸಂಸ್ಥೆಗಳ ಶ್ರೇಷ್ಠತಾ ಶ್ರೇಯಾಂಕದಲ್ಲಿ 4,100ಕ್ಕೂ ಹೆಚ್ಚು ಸಂಸ್ಥೆಗಳು ಭಾಗವಹಿಸಿದ್ದವು. ಈ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಕುವೆಂಪು ವಿ.ವಿ. 42.45 (ಕಳೆದ ಬಾರಿಗಿಂತ 1.85 ಹೆಚ್ಚಳ) ಅಂಕಗಳನ್ನು ಪಡೆಯುವ ಮೂಲಕ ಇಡೀ ದೇಶದ ವಿಶ್ವವಿದ್ಯಾಲಯಗಳಲ್ಲಿಯೇ 73ನೇ ಸ್ಥಾನ ಪಡೆದಿದೆ.

2017ರಲ್ಲಿ 150ರಿಂದ 200ರ ವರ್ಗದಲ್ಲಿ ಸ್ಥಾನ ಪಡೆದಿದ್ದ ವಿಶ್ವವಿದ್ಯಾಲಯ, 2018ರಲ್ಲಿ ಭಾರಿ ಜಿಗಿತ ಕಂಡಿದ್ದು 78ನೇ ಸ್ಥಾನಕ್ಕೇರಿತ್ತು. 2019ರಲ್ಲಿ ಮತ್ತೆ ಐದು ಸ್ಥಾನ ಮೇಲೆರಿದ್ದು 73ನೇ ಸ್ಥಾನ ಪಡೆದಿದಿತ್ತು. ಪ್ರಸ್ತುತ ಸಾಲಿನಲ್ಲಿ 1.85 ಅಂಕ ವೃದ್ಧಿಸಿಕೊಂಡಿದ್ದು, ಸ್ಥಾನದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಇದು ವಿ.ವಿ.ಯ ಶೈಕ್ಷಣಿಕ ಮತ್ತು ಸಂಶೋಧನಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

ಕೇಂದ್ರೀಯ ವಿಶ್ವವಿದ್ಯಾಲಯಗಳು, ಕೇಂದ್ರ ಸರ್ಕಾರದ ಉನ್ನತ ಶೈಕ್ಷಣಿಕ ಸಂಸ್ಥೆಗಳು, ಎಂಜಿನಿಯರಿಂಗ್‌ನಂತಹ ವೃತ್ತಿಪರ ಕೋರ್ಸ್ ಗಳನ್ನು ನಡೆಸುವ ಖಾಸಗಿ ವಿಶ್ವವಿದ್ಯಾಲಯಗಳು, ಡೀಮ್ಡ್ ವಿಶ್ವವಿದ್ಯಾಲಯಗಳು ಸೇರಿದಂತೆ ದೇಶಾದ್ಯಂತ (4,100) ಶಿಕ್ಷಣ ಸಂಸ್ಥೆಗಳು ಈ ಸಾಲಿನಲ್ಲಿ ಶ್ರೇಣೀಕರಣಕ್ಕೆ ಒಳಪಟ್ಟಿವೆ. ಕರ್ನಾಟಕದ ವಿಶ್ವವಿದ್ಯಾಲಯಗಳ ಪೈಕಿ ಮೈಸೂರು ವಿಶ್ವವಿದ್ಯಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಕ್ರಮವಾಗಿ 27 ಮತ್ತು 68ನೇ ರ್‍ಯಾಂಕ್‌ ಪಡೆಯುವುದರೊಂದಿಗೆ ರಾಜ್ಯಮಟ್ಟದಲ್ಲಿ ಮೊದಲೆರಡು ಸ್ಥಾನ ಪಡೆದಿವೆ.

ದೇಶದ ಶೈಕ್ಷಣಿಕ ಸಂಸ್ಥೆಗಳ ಗುಣಮಟ್ಟವನ್ನು ಉತ್ತಮಪಡಿಸಲು ಮತ್ತು ಒಟ್ಟಾರೆ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ 2015ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಎನ್‌ಐಆರ್‌ಎಫ್‌ ರ್‍ಯಾಂಕಿಂಗ್‌ ಪ್ರಾರಂಭಿಸಿದ್ದು, ಈಗ ಐದನೇ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಎಂಜಿನಿಯರಿಂಗ್‌, ಮ್ಯಾನೇಜ್‌ಮೆಂಟ್‌, ವೈದ್ಯಕೀಯ, ವಾಸ್ತುಶಿಲ್ಪ, ಕಾನೂನು ವಿಷಯಗಳ ಶಿಕ್ಷಣ ಸಂಸ್ಥೆಗಳ ಜೊತೆಗೆ ವಿಶ್ವವಿದ್ಯಾಲಯಗಳ ಶ್ರೇಣೀಕರಣವನ್ನು ಎನ್‌ಐಆರ್‌ಎಫ್‌ ಅಡಿಯಲ್ಲಿ ಮಾನವ ಸಂಪನ್ಮೂಲ ಇಲಾಖೆ ಪ್ರತಿ ವರ್ಷ ಕೈಗೊಳ್ಳುತ್ತದೆ. ವಿಶ್ವವಿದ್ಯಾಲಯದ ಈ ಸಾಧನೆಗೆ ಸಂತಸ ವ್ಯಕ್ತಪಡಿಸಿದ ಕುಲಪತಿ ಪ್ರೊ. ಬಿ.ಪಿ ವೀರಭದ್ರಪ್ಪ, ಕೋವಿಡ್‌-19ನಂತಹ ಮಹಾಮಾರಿಯು ದೇಶದ ಶೈಕ್ಷಣಿಕ ರಂಗವನ್ನು ತೀವ್ರವಾಗಿ ಬಾಧಿಸುತ್ತಿದ್ದರೂ, ವಿಶ್ವವಿದ್ಯಾಲಯದ ಅಧ್ಯಾಪಕರು ಗುಣಮಟ್ಟದ ಸಂಶೋಧನಾ ಚಟುವಟಿಕೆಗಳನ್ನು ಮುಂದುವರೆಸಿರುವುದರ ಮೂಲಕ ಅನುಕರಣೀಯ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ರ್‍ಯಾಂಕಿಂಗ್‌ ಉತ್ತಮಪಡಿಸುವ ನಿಟ್ಟಿನಲ್ಲಿ ಸರ್ವಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

Advertisement

ಕುಲಸಚಿವ ಪ್ರೊ.ಎಸ್‌.ಎಸ್‌.ಪಾಟೀಲ್‌ ಪ್ರತಿಕ್ರಿಯಿಸಿ, ‘ರಾಜ್ಯ ಮತ್ತು ರಾಷ್ಟ್ರದ ಖ್ಯಾತ ಸಂಶೋಧನಾ ಸಂಸ್ಥೆಗಳು ಮತ್ತು ಖಾಸಗಿ ವಿಶ್ವವಿದ್ಯಾಲಯಗಳ ಜೊತೆ ಸ್ಪರ್ಧಿಸಿ ಸರ್ಕಾರಿ ಸಂಯೋಜಿತ ವಿಶ್ವವಿದ್ಯಾಲಯವೊಂದು ಇಂತಹ ಉನ್ನತ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ. ಎನ್‌ಐಆರ್‌ಎಫ್‌ ಅಷ್ಟೇ ಅಲ್ಲದೆ ಸೈಮಾಗೋನಂತಹ ಇತರ ರ್‍ಯಾಂಕಿಂಗ್‌ಗಳಲ್ಲಿಯೂ ವಿವಿ ಗಮನಾರ್ಹ ಸಾಧನೆ ಮುಂದುವರೆಸಿದೆ ಎಂದರು.

ರಾಜ್ಯದ ಉನ್ನತ ಶಿಕ್ಷಣದ ಶೈಕ್ಷಣಿಕ ಸಂಸ್ಥೆಗಳ ಪೈಕಿ 7ನೇ ಸ್ಥಾನ ಪಡೆದಿದೆ. ಬೆಂಗಳೂರಿನ ಇಂಡಿಯನ್‌ ಇನ್ಟಿಟ್ಯೂಟ್‌ ಆಫ್‌ ಸೈನ್ಸ್‌ (1), ಮಣಿಪಾಲದ ಮಣಿಪಾಲ ಅಕಾಡೆಮಿ ಆಫ್‌ ಹೈಯರ್‌ ಎಜ್ಯುಕೇಶನ್‌ (8), ಮೈಸೂರಿನ ಮೈಸೂರು ವಿಶ್ವವಿದ್ಯಾಲಯ (27), ಮೈಸೂರಿನ ಜೆ.ಎಸ್‌.ಎಸ್‌. ಅಕಾಡೆಮಿ ಆಫ್‌ ಹೈಯರ್‌ ಎಜ್ಯುಕೇಶನ್‌ ಆ್ಯಂಡ್‌ ರಿಸರ್ಚ್‌ (33), ಬೆಂಗಳೂರಿನ ಬೆಂಗಳೂರು ವಿಶ್ವವಿದ್ಯಾಲಯ (68), ಬೆಳಗಾವಿಯ ಕೆಎಲ್‌ಇ ಅಕಾಡೆಮಿ ಆಫ್‌ ಹೈಯರ್‌ ಎಜ್ಯುಕೇಶನ್‌ ಆ್ಯಂಡ್‌ ರಿಸರ್ಚ್‌ (70) ಸ್ಥಾನ ಪಡೆದಿವೆ.

Advertisement

Udayavani is now on Telegram. Click here to join our channel and stay updated with the latest news.

Next