Advertisement
ಕೇರಳದ ಶ್ಯಾಮ್ ಥಾಮಸ್ (59), ಜೋಶ್ ಎಂ. ಕರುವಿಲ್ಲಾ (62), ಜೆಪಿನಗರದ ಜೀನ್ ಕಮಲ್ (45), ಮುಂಬಯಿಯ ವಿಜಯ್ ವಾಮನ್ ಚಿಪ್ಲೂಂಕರ್ (45), ಬೆಂಗಳೂರು ಹೆಣ್ಣೂರಿನ ಊರ್ವಶಿ ಗೋಸ್ವಾಮಿ (34), ಜಾಫರ್ ಸಾದೀಕ್ (39), ವಿದ್ಯಾರಣ್ಯಪುರದ ಅಮೀತ್ ಮಹೇಶ್ ಗಿಡ್ವಾನಿ (40) ಬಂಧಿತರು. ಸುಂಕದಕಟ್ಟೆಯ ಶ್ರೀನಿವಾಸ ನಗರದ ನಿವಾಸಿ ನವೀನ್ (34) ವಂಚನೆಗೊಳಗಾದವರು. ತಲೆಮರೆಸಿಕೊಂಡಿರುವ ದಿಲ್ಲಿ, ಗುಜರಾತ್ ಹಾಗೂ ಮಧ್ಯಪ್ರದೇಶ ಮೂಲದ ಐವರಿಗೆ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಆರೋಪಿಗಳಿಂದ 44 ಲಕ್ಷ ರೂ. ನಗದು, ನೋಟು ಎಣಿಕೆ ಯಂತ್ರ ಹಾಗೂ 5 ಮೊಬೈಲ್ ಜಪ್ತಿ ಮಾಡಲಾಗಿದೆ.
ನವೀನ್ ಅವರನ್ನು ಸಂಪರ್ಕಿಸಿದ್ದ ಆರೋಪಿಗಳು ಮಲೇಶ್ಯಾ ಮೂಲದ ಎಂಇಡಿಬಿ ಕ್ಯಾಪಿಟಲ್ ಬೇರ್‌ಹೆಡ್ ಎಂಬ ಖಾಸಗಿ ಕಂಪೆನಿಯಲ್ಲಿ 2 ಕೋಟಿ ರೂ. ಹೂಡಿಕೆ ಮಾಡಿದರೆ ಆ ಕಂಪೆನಿಯಿಂದ 3.50 ಕೋಟಿ ರೂ.ನಷ್ಟು ಆರ್‌ಟಿಜಿಎಸ್/ಎನ್‌ಇಎಫ್ಟಿ ಮೂಲಕ ಒಂದೇ ದಿನದಲ್ಲಿ ಲಾಭ ನೀಡುವುದಾಗಿ ನಂಬಿಸಿದ್ದರು.
ಆರೋಪಿಗಳ ಸೂಚನೆಯಂತೆ ನವೀನ್ ಅವರು ಕಬ್ಬನಪೇಟೆ, 11ನೇ ಕ್ರಾಸ್‌ನಲ್ಲಿರುವ ಪಟೇಲ್ ಎಂಟರ್ ಪ್ರೈಸಸ್ ಎಂಬ ಕಚೇರಿಗೆ ತೆರಳಿ ಹೂಡಿಕೆ ಮಾಡುವ ಸಲುವಾಗಿ ಮಲೇಶ್ಯಾ ಮೂಲದ ಕಂಪೆನಿಯ ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿಗೆ 2 ಕೋಟಿ ರೂ. ನೀಡಿದ್ದರು. ಆ ಕಂಪನಿಯ ಪ್ರತಿನಿಧಿಯು ನೋಟು ಎಣಿಕೆ ಮಾಡುವ ಯಂತ್ರದಿಂದ ಹಣವನ್ನು ಎಣಿಕೆ ಮಾಡಿಕೊಂಡಿದ್ದ. ಬಳಿಕ ಬ್ಯಾಂಕ್ ಖಾತೆಗೆ ಕಂಪೆನಿ ವತಿಯಿಂದ 9,780 ರೂ. ವರ್ಗಾವಣೆ ಮಾಡಿ ಉಳಿದ ಹಣ ಆದಷ್ಟು ಬೇಗ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ ಎಂದು ನವೀನ್ ಅವರನ್ನು ನಂಬಿಸಿದ್ದ. ಆ ಪ್ರತಿನಿಧಿಯು ಈ ಕಚೇರಿಯಲ್ಲಿ ಹಣ ಇಡಲು ಸುರಕ್ಷೆ ಇಲ್ಲವಾದ್ದರಿಂದ, ಮತ್ತೂಂದು ಕಚೇರಿಯ ಲಾಕರ್‌ನಲ್ಲಿಡುವುದಾಗಿ ದೂರುದಾರರನ್ನು ನಂಬಿಸಿ ಹಣವನ್ನು ತೆಗೆದುಕೊಂಡು ಹೋಗಿದ್ದ. ಅನಂತರ ನವೀನ್‌ಗೆ ಯಾವುದೇ ರೀತಿಯ ಲಾಭವನ್ನಾಗಲಿ, ಹೂಡಿಕೆ ಮಾಡಿದ ಹಣವನ್ನಾಗಲಿ ವಾಪಸ್ ನೀಡದೇ ವಂಚಿಸಿದ್ದ. ವಂಚನೆಗೊಳಗಾದ ವ್ಯಕ್ತಿ ಹಲಸೂರು ಗೇಟ್ ಪೊಲೀಸರಿಗೆ ದೂರು ನೀಡಿದ್ದರು.