ಬೆಂಗಳೂರು: ಉಪ ಲೋಕಾಯುಕ್ತ ನ್ಯಾ.ವೀರಪ್ಪ ಅವರು ಬಿಬಿಎಂಪಿ ಕಚೇರಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದ ವೇಳೆ ಕರ್ತವ್ಯ ಲೋಪ ಎಸಗಿದ್ದ ಸೌತ್ ಎಂಡ್ ಸರ್ಕಲ್ ಬಳಿ ಇರುವ ಬಿಬಿಎಂಪಿ ದಕ್ಷಿಣ ವಲಯ ಕಚೇರಿಯ ದ್ವಿತೀಯ ದರ್ಜೆ ನೌಕರ ಸೇರಿದಂತೆ ಇಬ್ಬರು ಪಾಲಿಕೆ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಕವಿತಾ ಮತ್ತು ಎಆರ್‌ಒ ಸುಜಾತ ಅಮಾನತುಗೊಂಡವರು. ಉಪ ಲೋಕಾಯುಕ್ತರ ದಿಢೀರ್ ಭೇಟಿ ವೇಳೆ ತಮ್ಮ ಬದಲಿಗೆ ಮಗನನ್ನು ಕಚೇರಿಯಲ್ಲಿ ಕೂರಿಸಿ ಹೊರಗಡೆ ತೆರಳಿದ್ದ ದ್ವಿತೀಯ ದರ್ಜೆ ನೌಕರೆ ಹಾಗೂ ಕರ್ತವ್ಯ ಲೋಪ ಎಸಗಿರುವ ಸಹಾಯಕ ಕಂದಾಯ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.
ಕಳೆದ ಕೆಲವು ದಿನಗಳ ಹಿಂದಷ್ಟೇ ಬಿಬಿಎಂಪಿಯ 54 ಕಚೇರಿಗಳ ಮೇಲೆ ಲೋಕಾಯುಕ್ತ ಪೋಲಿಸರು ಏಕಾಏಕಿ ದಾಳಿ ನಡೆಸಿದ್ದರು. ಸೌತ್ ಎಂಡ್ ಸರ್ಕಲ್ ನಲ್ಲಿರುವ ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಕಚೇರಿಯಲ್ಲಿ ತಪಾಸಣೆ ನಡೆಸಿದಾಗ ಅಲ್ಲಿ ಕೆಲಸ ಮಾಡಬೇಕಾಗಿದ್ದ ಅಧಿಕಾರಿ ಇರಲಿಲ್ಲ. ಬದಲಾಗಿ ಆ ಮಹಿಳಾ ಅಧಿಕಾರಿ ತನ್ನ ಬದಲಿಗೆ ತಮ್ಮ ಪುತ್ರನನ್ನು ಕಚೇರಿಯಲ್ಲಿ ಇರಿಸಿ ಕಾರ್ಯ ನಿರ್ವಹಿಸುತ್ತಿದದ್ದು ಬೆಳಕಿಗೆ ಬಂದಿತ್ತು. ಜತೆಗೆ ತಾಯಿ ಬದಲಾಗಿ ಕಚೇರಿ ಲಾಗಿನ್ ಐಡಿ ಪಡೆದು ಮಗ ಕೆಲಸ ಮಾಡುತ್ತಿರುವುದು ಪತ್ತೆಯಾಗಿತ್ತು.
ಈ ಸಂಬಂಧ ಲೋಕಾಯುಕ್ತ ಅಧಿಕಾರಿಗಳು ಸಿದ್ದಾಪುರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಚೇರಿಯಲ್ಲಿ ಅನ ಧಿಕೃತವಾಗಿ ಕೆಲಸ ಮಾಡುತ್ತಿದ್ದು ನವೀನ್ ಎಂಬಾತನನ್ನ ಬಂಧಿಸಿ ವಿಚಾರಣೆ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಅಧಿಕಾರದ ದುರುಪಯೋಗ ಮತ್ತು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಇಬ್ಬರನ್ನೂ ಅಮಾನತುಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ.