ಶಿವಮೊಗ್ಗ: ಜಿಲ್ಲೆಯ ಜನರ ಆಶೋತ್ತರ ಹಾಗೂ ನಿರೀಕ್ಷೆಗಳಿಗೆ ಪೂರಕವಾಗಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಸಾಧ್ಯವಾಗುವ ಎಲ್ಲಾ ಕ್ರಮಗಳನ್ನು ಅನುಸರಿಸಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಭಾನುವಾರ ಜಿಲ್ಲೆಯ ಸರ್ವಾಂಗೀಣ ವಿಕಾಸಕ್ಕಾಗಿ ಹಾಗೂ ಮುಂದಿನ 2ದಶಕಗಳ ಅವಧಿಯ ದೂರದೃಷ್ಟಿಯನ್ನಿಟ್ಟುಕೊಂಡು ಕೈಗೊಳ್ಳಬಹುದಾದ ಯೋಜನೆಗಳ ಕುರಿತು ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು, ವ್ಯಾಪಾರಿಗಳು, ವಿದ್ಯಾವಂತ ಯುವಜನರು, ಸಮಾಜಸೇವೆ, ಶಿಕ್ಷಣ ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಖ್ಯಾತನಾಮರಾಗಿರುವ ಗಣ್ಯರೊಂದಿಗೆ “ನಮ್ಮ ಕನಸಿನ ಶಿವಮೊಗ್ಗ’ ತಂಡವು ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವ ಉದ್ದೇಶದಿಂದಾಗಿ ಆಯೋಜಿಸಿದ್ದ ಡಿಜಿಟಲ್ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಜನಸಂಪರ್ಕಕ್ಕೆ ಅತ್ಯಗತ್ಯವಾಗಿರುವ ವಿಮಾನ ನಿಲ್ದಾಣ, ರೈಲು ಸಂಪರ್ಕ, ರಸ್ತೆ ಸಾರಿಗೆ ಹಾಗೂ ಬೃಹತ್ ಸೇತುವೆಗಳ ನಿರ್ಮಾಣ, ಶಿಕ್ಷಣ, ಪ್ರವಾಸೋದ್ಯಮ, ನೀರಾವರಿ, ಕೈಗಾರಿಕೆ ಮುಂತಾದ ಕ್ಷೇತ್ರಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ ಎಂದರು. ಸತತ 25 ವರ್ಷಗಳ ನಂತರ ರಾಜ್ಯ ಮತ್ತು ಕೇಂದ್ರದಲ್ಲಿ ಏಕರೀತಿಯ ಸರ್ಕಾರ ರಚನೆಯಾಗಿರುವುದು ಕೂಡ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಹಾಯಕವಾಗಿದೆ ಎಂದ ಅವರು, ಶಿವಮೊಗ್ಗದಲ್ಲಿ ರೈಲ್ವೆ ಕೋಚಿಂಗ್ ಸೆಂಟರ್ ಮತ್ತು ಟರ್ಮಿನಲ್ ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಿಂದಾಗಿ ಸಾಕಷ್ಟು ಜನರಿಗೆ ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ಇಷ್ಟೇ ಅಲ್ಲದೆ ಈಗಾಗಲೇ ತಿರುಪತಿ, ಚೆನ್ನೈನಂತಹ ಮೆಟ್ರೊಪಾಲಿಟನ್ ಸಿಟಿಗಳಿಗೆ ರೈಲು ಸಂಪರ್ಕ ಕಲ್ಪಿಸಲಾಗಿದೆ. ಆದಾಗ್ಯೂ ರೈಲು ವೇಳಾಪಟ್ಟಿಯಲ್ಲಿ ಜನರಿಗೆ ಅನುಕೂಲವಾಗುವಂತೆ ಸಮಯ ಹೊಂದಾಣಿಕೆ ಮಾಡಬೇಕಾದ ತುರ್ತು ಅಗತ್ಯವಿದೆ. ಇದಲ್ಲದೆ ಮಲೆನಾಡಿನಿಂದ ಬಯಲು ಸೀಮೆಗೆ ರೈಲು ಸಂಪರ್ಕ ಕಲ್ಪಿಸಲು ಉದ್ದೇಶಿಸಿದ್ದು ಶಿವಮೊಗ್ಗ- ರಾಣೇಬೆನ್ನೂರು ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ವರ್ತುಲ ರಸ್ತೆ ಕಾಮಗಾರಿ ಭರದಿಂದ ಸಾಗಿದೆ. ರೈಲ್ವೆ ನಿಲ್ದಾಣದ ಎದುರು ಭಾಗದಲ್ಲಿ ನಿಂತೇ ಹೋಗಿದ್ದ ರಿಂಗ್ ರೋಡ್ ಕಾಮಗಾರಿ ಆರಂಭಗೊಂಡಿದೆ. ಅದಕ್ಕಾಗಿ ಸರ್ಕಾರ ಈಗಾಗಲೇ 12ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆ. ಅಲ್ಲದೆ ಶಿವಮೊಗ್ಗ ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾಮಗಾರಿಯನ್ನೂ ಕೈಗೆತ್ತಿಕೊಳ್ಳಲಾಗಿದೆ. ಅಲ್ಲದೆ ಹೊಸನಗರ- ಸಾಗರ- ತೀರ್ಥಹಳ್ಳಿ ತಾಲೂಕುಗಳಿಗೆ ಸಂಪರ್ಕ ಒದಗಿಸುವ ಅರಸಾಳು ರೈಲು ನಿಲ್ದಾಣವನ್ನು 400 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ ಸುಮಾರು 25 ಕೋಟಿ ವೆಚ್ಚದಲ್ಲಿ ಮಾಲ್ಗುಡಿ ಹೆರಿಟೇಜ್ ಬಿಲ್ಡಿಂಗ್ ನಿರ್ಮಾಣ ಮಾಡಲಾಗಿದೆ. ಇನ್ನು ಒಂದೆರೆಡು ದಿನಗಳಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಆರಂಭಗೊಳ್ಳಲಿದೆ. ಮುಖ್ಯಮಂತ್ರಿಗಳ ತವರು ಜಿಲ್ಲೆಯಿಂದ ರಾಜಧಾನಿಗೆ ಸಂಪರ್ಕ ಕಲ್ಪಿಸುವ 5000 ಕೋಟಿ ರೂ. ಗಳ ವೆಚ್ಚದ ಶಿವಮೊಗ್ಗ-ತುಮಕೂರು ಚತುಷ್ಪಥ ರಸ್ತೆಯ ಅಂತಿಮ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. 600 ಕೋಟಿ ವೆಚ್ಚದ ಚಿತ್ರದುರ್ಗ – ಶಿವಮೊಗ್ಗ ಹೆದ್ದಾರಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.
ಕೋವಿಡ್ ಸೋಂಕಿನಿಂದಾಗಿ ದೂರದ ಊರುಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯುವ ಉದ್ಯೋಗಿಗಳು ತಮ್ಮ ತವರಿಗೆ ಹಿಂದಿರುಗಿ ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ. ಅಂತಹವರಿಗೆ ಇಂಟರ್ ನೆಟ್ ಸೇವೆ ಒದಗಿಸಲು ಕ್ರಮ ವಹಿಸಲಾಗಿದೆ. ಅಲ್ಲದೆ ಜಿಯೊ. ಏರ್ಟೆಲ್ ಮತ್ತು ವೊಡಾಫೋನ್‌ನಂತಹ ಖಾಸಗಿ ಟೆಲಿಕಾಂ ಕಂಪನಿಗಳೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಈಗಾಗಲೇ 60 ಟವರ್‌ಗಳು ಸ್ಥಾಪನೆಗೊಂಡಿವೆ. ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ವಿಶೇಷ ಗಮನ ಹರಿಸಲಾಗಿದೆ. ಜೋಗದ ಅಭಿವೃದ್ಧಿಗಾಗಿ ಪ್ರಾ ಧಿಕಾರಕ್ಕೆ 10 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ. ಅಲ್ಲದೆ ಉಡುಗುಣಿ, ನಗರ ಕೋಟೆ, ಶಿವಪ್ಪ ನಾಯಕನ ಅರಮನೆ, ಕವಲೇದುರ್ಗ ಮುಂತಾದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ ಎಂದರು.
ಸಂವಾದದಲ್ಲಿ ಉದ್ಯಮಿಗಳಾದ ಲಕ್ಷ್ಮೀ ನಾರಾಯಣ ಕಾಶಿ, ವಾಸುದೇವ, ಶರತ್ ಭೂಪಾಳಂ, ಡಾ| ಲಕ್ಷ್ಮೀ ದೇವಿ ಗೋಪಿನಾಥ್, ರಾಜೇಶ್ ಭದ್ರಾವತಿ ಇತರರಿದ್ದರು.