ಶಿವಮೊಗ್ಗ: ಲಾಕ್‌ಡೌನ್ ಸಂಬಂಧ ಶಿವಮೊಗ್ಗದಲ್ಲಿ ಜನರು ಮತ್ತು ವ್ಯಾಪಾರಿಗಳ ನಡುವೆ ಗೊಂದಲ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ವಿಭಿನ್ನ ಆದೇಶ ಹೊರಡಿಸುತ್ತಿರುವುದೇ ಗೊಂದಲಕ್ಕೆ ಕಾರಣವಾಗಿದೆ.
ಶಿವಮೊಗ್ಗದಲ್ಲಿ ಕೊರೊನಾ ಪಾಸಿಟಿವ್ ಕೇಸುಗಳಿಲ್ಲ. ಹಾಗಾಗಿ ಜಿಲ್ಲೆ ಗ್ರೀನ್ ಜೋನ್‌ನಲ್ಲಿದೆ. ಇದೇ ಕಾರಣಕ್ಕೆ ಜಿಲ್ಲೆಯಲ್ಲಿ ಹಲವು ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಸಂಬಂಧ ಜಿಲ್ಲಾಡಳಿತದ ನಿರ್ಧಾರವೊಂದು, ಪೊಲೀಸರ ನಡೆಯೊಂದು ಆಗಿದೆ. ಇದು ವ್ಯಾಪಾರಿಗಳನ್ನು ಗೊಂದಲಕ್ಕೀಡು ಮಾಡಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಿಕೆ ಇಲ್ಲ. ಆದರೂ ಗುರುವಾರದಿಂದ ಹೆಚ್ಚುವರಿಯಾಗಿ ಕೆಲವು ಸೇವೆ ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ.
ಜ್ಯೂಸ್, ಐಸ್ ಕ್ರೀಂ ಅಂಗಡಿ, ಕೃಷಿ ಸಂಬಂಧಿ ತ ಉತ್ಪನ್ನಗಳು, ಎಲೆಕ್ಟಿÅಕಲ್, ಹಾರ್ಡ್‌ವೇರ್, ತರಕಾರಿ ಮಾರಾಟ ಮಳಿಗೆ ತೆರೆಯಲು ಅವಕಾಶವಿದೆ ಎಂದು ಜಿಲ್ಲಾ ಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದ್ದಾರೆ. ಅದರಂತೆ ಅಂಗಡಿ ಬಾಗಿಲು ತೆರೆಯುತ್ತಿದ್ದಂತೆ ಪೊಲೀಸರು ಬಂದು ಬಾಗಿಲು ಹಾಕಿಸುತ್ತಿದ್ದಾರೆ. ಇವತ್ತು ಬೆಳಗ್ಗೆ 10 ಗಂಟೆಯಿಂದಲೇ ಪೊಲೀಸರು ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದಾರೆ.
ಇದು ವ್ಯಾಪಾರಿಗಳಲ್ಲಿ ಆಕ್ರೋಶ ಮತ್ತು ಗೊಂದಲ ಸೃಷ್ಟಿಸಿದೆ. ಗ್ರೀನ್ ಜೋನ್‌ನಲ್ಲಿ ಎಲ್ಲ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಟಿವಿ ಮಾಧ್ಯಮಗಳಲ್ಲಿ ಬೆಳಗ್ಗೆಯಿಂದ ವರದಿ ಪ್ರಕಟವಾಗುತ್ತಿದೆ. ಇತ್ತ ಪೊಲೀಸರು ಅಂಗಡಿಗಳನ್ನು ಮುಚ್ಚಿಸುತ್ತಿದ್ದಾರೆ. ಮೊಬೈಲ್ ರೀಚಾರ್ಜ್ ಅಂಗಡಿ ತೆರೆಯಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಬೆಳಗ್ಗೆ ಅಂಗಡಿ ತೆಗೆದು ಸ್ವಲ್ಪ ಹೊತ್ತಿಗೆ ಪೊಲೀಸರು ಬಂದು ಅಂಗಡಿ ಮುಚ್ಚಿಸಿದ್ದಾರೆ. ಯಾಕೆ ಈ ಗೊಂದಲ? ಎಂದು ಪ್ರಶ್ನಿಸುತ್ತಾರೆ ಭದ್ರಾವತಿಯ ನವೀನ್.
ಈ ಗೊಂದಲದ ಲಾಭ ಪಡೆದುಕೊಂಡು ಕೆಲವರು ಅನಗತ್ಯವಾಗಿ ಸುತ್ತಾಡುತ್ತಿದ್ದಾರೆ. ಇವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ. ಪ್ರಮುಖ ಸರ್ಕಲ್ ಮತ್ತು ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದ್ದು, ವಾಹನಗಳ ತಪಾಸಣೆ ಮುಂದುವರಿದಿದೆ.