Advertisement

ಆದೇಶಕ್ಕಿಲ್ಲ ಕಿಮ್ಮತ್ತು ; ಆಟೋಗಳಿಂದ ಕೋವಿಡ್ ಆಪತ್ತು!

06:33 PM Jun 05, 2020 | Naveen |

ಶಿವಮೊಗ್ಗ: ಕೋವಿಡ್ ತಡೆಗಾಗಿ ಆಟೋಗಳಲ್ಲಿ ಪ್ರಯಾಣಿಕರು ಮತ್ತು ಚಾಲಕರ ನಡುವೆ ಕಡ್ಡಾಯವಾಗಿ ಪಾರದರ್ಶಕ ಫೈಬರ್‌ ಶೀಟ್‌ ಅಳವಡಿಸುವಂತೆ ಜಿಲ್ಲಾಡಳಿತ ಆದೇಶಿಸಿದೆ. ಆದರೆ, ನಗರದ ಶೇ.90ಕ್ಕೂ ಅಧಿಕ ಆಟೋ ಚಾಲಕರು ಈ ಆದೇಶ ಪಾಲಿಸಿಲ್ಲ.

Advertisement

ರಾಜ್ಯದ ನಾನಾ ಭಾಗಗಳಲ್ಲಿ ಕೋವಿಡ್ ಸೋಂಕಿತರು ಆಟೋದಲ್ಲಿ ಪ್ರಯಾಣಿಸಿದ್ದರ ಫಲವಾಗಿ ಚಾಲಕರಿಗೂ ಸೋಂಕು ತಗುಲಿ ಅವರಿಂದ ಇತರ ಪ್ರಯಾಣಿಕರಿಗೂ ಹಬ್ಬಿದ ಘಟನೆಗಳು ನಡೆದಿವೆ. ಇದನ್ನು ಮನಗಂಡು ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಹಾಗೂ ಸಾರಿಗೆ ಇಲಾಖೆಯಿಂದ ಮೇ 22ರಂದು ಹೊಸ ಆದೇಶ ಹೊರಡಿಸಲಾಗಿದೆ. ಅದರಂತೆ, ಪ್ರತಿ ಆಟೋದಲ್ಲಿ ಚಾಲಕರು ಮತ್ತು ಪ್ರಯಾಣಿಕರ ಮಧ್ಯೆ ಖಾಲಿ ಇರುವ ಜಾಗದಲ್ಲಿ ಫೈಬರ್‌ ಶೀಟ್‌ ಹಾಕಬೇಕು. 2000 ನೇ ಇಸ್ವಿಯಿಂದ ಇದುವರೆಗೆ ನೋಂದಣಿಯಾಗಿರುವ ಅಂಕಿ
ಅಂಶದನ್ವಯ ಜಿಲ್ಲೆಯಲ್ಲಿ 7,891 ಆಟೋಗಳು ಸಂಚರಿಸುತ್ತಿವೆ. ಆದರೆ, ಶೇ.80ರಷ್ಟು ಆಟೋಗಳಿಗೆ ಇದುವರೆಗೆ ಫೈಬರ್‌ ಶೀಟ್‌ ಹಾಕಿಲ್ಲ. ಅಲ್ಲದೆ ಕೆಲವರು ಪ್ಲಾಸ್ಟಿಕ್‌ ಶೀಟ್‌ ಅಳವಡಿಸಿದ್ದಾರೆ.

ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದ್ದು, ಯಾವುದೇ ರೋಗ ಲಕ್ಷಣವಿಲ್ಲದ ವ್ಯಕ್ತಿಯಲ್ಲೂ ಸೋಂಕು ದೃಢಪಟ್ಟಿದೆ. ಪರಿಸ್ಥಿತಿ ಹೀಗಿರುವಾಗ, ಆಟೋ ಚಾಲಕರು ತಮ್ಮ ಮತ್ತು ಪ್ರಯಾಣಿಕರ ಯೋಗಕ್ಷೇಮ ಮರೆತು ಕೆಲಸ ಮಾಡುತ್ತಿದ್ದಾರೆ. ಸಾಕಷ್ಟು ಜನ ಬೆಂಗಳೂರಿನಿಂದ ಸಾರಿಗೆ ಸಂಸ್ಥೆ ಬಸ್‌ ಮೂಲಕವೇ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಈಗಾಗಲೇ ರಾಜಧಾನಿಯಿಂದ ವಾಪಸ್‌ ಆದವರಲ್ಲೂ ಕೋವಿಡ್ ವೈರಸ್‌ ಪತ್ತೆಯಾಗಿದೆ. ಬಸ್‌ ಗಳಲ್ಲಿ ಬಂದವರು ಆಟೋ ಏರಿ ಮನೆಗೆ ತೆರಳ್ಳೋದು ಸಹಜ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಆಟೋಗಳಲ್ಲಿ ಸುರಕ್ಷಿತ ಕ್ರಮ ಅನುಸರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದರೆ, ಯಾರೂ ಅದರ ಬಗ್ಗೆ ತಲೆಯೇ ಕೆಡಿಸಿಕೊಂಡಿಲ್ಲ.

ನಿರ್ದೇಶನ ನೀಡಿ ಹತ್ತು ದಿನ ಗತಿಸಿದೆ. ಇದುವರೆಗೆ ಆದೇಶ ಪಾಲಿಸದೇ ಇರುವ ಆಟೋ ರೀಕ್ಷಾ ಮಾಲೀಕರ ವಿರುದ್ಧ ಕ್ರಮ ಕೈಗೊಂಡಿಲ್ಲ. ದಿನದಿಂದ ದಿನಕ್ಕೆ ಕೋವಿಡ್ ವೈರಾಣು ತನ್ನ ಕಬಂಧಬಾಹುಗಳನ್ನು ಚಾಚುತ್ತಿದ್ದು, ಈಗಲೇ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು. ರಾಜ್ಯದ ವಿವಿಧೆಡೆಯಿಂದ ನಗರಕ್ಕೆ ಬರುವವರು ಆಟೋ ಚಾಲಕರೊಂದಿಗೆ ಮೊದಲ ಸಂಪರ್ಕ ಹೊಂದುವ ಸಾಧ್ಯತೆಯೇ ಅಧಿಕವಾಗಿರುವುದರಿಂದ ಪ್ರಯಾಣಿಕರು, ಚಾಲಕರ ಹಿತಕ್ಕಾಗಿ ಆಡಳಿತ ವರ್ಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಆಗ್ರಹವಾಗಿದೆ.

ಹೇಗಿರಬೇಕು ಫೈಬರ್‌?
ಈ ಮುಂಚೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸೂಚನೆ ನೀಡಿರುವಂತೆ ಪಾರದರ್ಶಕ ವಾಲ್‌ ಅಳವಡಿಸಿಕೊಳ್ಳುವಂತೆ ತಿಳಿಸಿತ್ತು. ಅದಕ್ಕೆ ಪೂರಕವಾಗಿ ಕೆಲವು ಆಟೋ ಚಾಲಕರು ಪ್ಲಾಸ್ಟಿಕ್‌ ಶೀಟ್‌ಗಳನ್ನು ಅಳವಡಿಸಿಕೊಂಡಿದ್ದಾರೆ. ಆದರೆ, ಅದೂ ಸುರಕ್ಷಿತವಲ್ಲ. ಹೀಗಾಗಿ, ಜಿಲ್ಲಾಡಳಿದ ಮಾರ್ಗಸೂಚಿ ಅನ್ವಯ, ಫ್ಲೆಕ್ಸಿಬಲ್‌ ಆದ ಫೈಬರ್‌ ಹಾಕಬೇಕು. ಅಪಘಾತವಾದಲ್ಲಿ ಚಾಲಕ ಮತ್ತು ಪ್ರಯಾಣಿಕರಿಗೆ ಹಾನಿಯಾಗಬಾರದು. ಗ್ಲಾಸ್‌ ಅಳವಡಿಸಿದ್ದಲ್ಲಿ ಅದರ ಚೂರುಗಳು ಪ್ರಯಾಣಿಕರಿಗೆ ತಾಕುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ, ಕಡಿಮೆ ಗೇಜ್‌ನ ಫೈಬರ್‌ಗೆ ಮೊರೆಹೋಗಬೇಕು. ಶಾರ್ಪ್‌ ಎಡ್ಜಸ್‌ ಇರಬಾರದು. ಬಿದ್ದರೂ ಒಡೆಯುವಂತಿರಬಾರದು. 2 ಎಂಎಂ ಇರಬೇಕು.

Advertisement

ಕಷ್ಟಕಾಲದಲ್ಲಿ ಹೊರೆ
ಕೋವಿಡ್ ಲಾಕ್‌ಡೌನ್‌ನಿಂದ ಆಟೋ ಚಾಲಕರು ತತ್ತರಿಸಿದ್ದಾರೆ. ಇದನ್ನೇ ನಂಬಿ ಬದುಕು ನಡೆಸುತ್ತಿರುವ ಕುಟುಂಬಗಳು ಬೀದಿಗೆ ಬಿದ್ದಿವೆ. ಹೀಗಿರುವಾಗ, ಮಾರ್ಗಸೂಚಿಯಂತೆ ಫೈಬರ್‌ ಶೀಟ್‌ ಅಳವಡಿಕೆಗೆ ಕನಿಷ್ಠವೆಂದರೂ 2 ಸಾವಿರ ರೂ. ಖರ್ಚಾಗಲಿದೆ. ಶೀಟ್‌ ಅಳವಡಿಕೆ ಕಷ್ಟ. ಇದರ ಬಗ್ಗೆಯೂ ಆಡಳಿತ ವರ್ಗ ಯೋಚಿಸಬೇಕು ಎಂಬುದು ಆಟೋ ಚಾಲಕರ ಅಳಲಾಗಿದೆ.

ಸರಕಾರಿ ಬಸ್‌ ಗಳಲ್ಲಿ ಯಾವುದೇ ವಾಲ್‌ ಹಾಕದೇ ಜನರನ್ನು ಕರೆದೊಯ್ಯಲಾಗುತ್ತಿದೆ. ನಮಗೆ ಮಾತ್ರ ವಾಲ್‌ ಹಾಕಿ ಎನ್ನುತ್ತಿದ್ದಾರೆ. ಎಲ್ಲರಿಗೂ ಒಂದೇ ನಿಯಮ ಅನ್ವಯವಾಗಲಿ.
ಅಜ್ಗರ್‌ ಪಾಷಾ,
ಆಟೋ ಚಾಲಕ

Advertisement

Udayavani is now on Telegram. Click here to join our channel and stay updated with the latest news.

Next