Advertisement
“ಗಯಾಟಿ’ ಪಶ್ಚಿಮದ ಬಹುತೇಕ ದೇಶಗಳಲ್ಲಿ ಹಾಡು-ಕುಣಿತ, ನಾಟಕಗಳಿಗಾಗಿ ನಿಮಾರ್ಣವಾದ ರಂಗಮಂದಿರಗಳ ಹೆಸರು. ಎರಡು ಶತಮಾನಗಳ ಹಿಂದೆ “ಗಯಾಟಿ’ ರಂಗಮಂದಿರಗಳಿಲ್ಲದ ಊರುಗಳೇ ಪಶ್ಚಿಮ ದೇಶಗಳಲ್ಲಿರಲಿಲ್ಲ. ಅದೇ ಆಸುಪಾಸಿನ ಕಾಲಕ್ಕೆ ಬ್ರಿಟಿಶರು ಭಾರತದ ಚುಕ್ಕಾಣಿ ಹಿಡಿದಿದ್ದರು.
Related Articles
Advertisement
ಬೇಸಿಗೆ ರಾಜಧಾನಿಯಾಗಿ ಘೋಷಣೆ ಮಾಡಿದ ಮೇಲೆ ಅಲ್ಲಿಗೆ ಸರ್ಕಾರಿ ಕಚೇರಿ, ವಸತಿಗೃಹ, ವೈಸ್‌ರಾಯ್ ಭವನ ಇದನ್ನೆಲ್ಲ ಕಾಯಲು ಸೈನ್ಯದ ತುಕುಡಿ ನೆಲೆ ಕೂಡ ಬಂತು. ಪುರಾಡಳಿತಕ್ಕೆ ಕಚೇರಿ ಬೇಕಾದಾಗ “ಪುರಭವನ’ ನಿರ್ಮಾಣವಾಯಿತು. ಪುರಭವನದ ಕಟ್ಟಡದಲ್ಲಿ ಮನರಂಜನಾ ಕಾರ್ಯಕ್ರಮಗಳಿಗಾಗಿ ನಿರ್ಮಾಣಗೊಂಡಿತು “ಗಯಾಟಿ’ ರಂಗಮಂದಿರ !
ಐದು ಅಂತಸ್ತುಗಳ ಕಟ್ಟಡಆರಂಭದಲ್ಲಿ ಕಟ್ಟಲ್ಪಟ್ಟ “ಗಯಾಟಿ’ ಒಳಗೊಂಡ ಪುರಭವನ ಐದು ಅಂತಸ್ತುಗಳನ್ನು ಹೊಂದಿತ್ತು. ಇಲ್ಲಿ ಗ್ರಂಥಾಲಯ, ಪೌರ ಸೌಲಭ್ಯ ಒದಗಿಸುವ ವಿಭಾಗಗಳು ಕೆಲಸ ನಿರ್ವಹಿಸುತ್ತಿದ್ದವು. ಇದನ್ನು ಲಂಡನ್ ನಗರದ ರಾಯಲ್ ಆಲ್ಬರ್ಟ್ ಹಾಲ್‌ನಂತೆಯೇ ವಿನ್ಯಾಸಗೊಳಿಸಲಾಗಿತ್ತು. ಇಂಪೀರಿಯಲ್ ಸರ್ಕಾರ ಕಾರ್ಯನಿರ್ವಹಿಸುವ ಹಲವು ಕಟ್ಟಡಗಳ ವಿನ್ಯಾಸ ಸಿದ್ಧಪಡಿಸಿದ್ದ ಸೂಪರಿಂಟೆಂಡೆಂಟ್ ಎಂಜಿನಿಯರ್ ಹೆನ್ರಿ ಇರಿÌನ್ “ಸಿಮ್ಲಾ’ ಈ ಬಹು ಅಂತಸ್ತಿನ ಕಟ್ಟಡವನ್ನು ರೂಪಿಸಿದ್ದರು. ಗೋಥಿಕ್ ಶೈಲಿಯಲ್ಲಿ 1888ರಲ್ಲಿ ಒಂದೇ ವರ್ಷದ ಅವಧಿಯೊಳಗೆ ನಿರ್ಮಾಣವಾಯಿತು ಈ ಕಟ್ಟಡ. ಆರಾಮ ಜೀವನಕ್ಕೆ ಹೇಳಿಮಾಡಿಸಿದಂತಿದ್ದ “ಸಿಮ್ಲಾ’ದಲ್ಲಿ ನೆಲೆಸಿದ್ದ ಹಲವರು ಸಾಂಸ್ಕೃತಿಕಪ್ರಿಯರು. ನೃತ್ಯ, ಹಾಡು, ಕ್ರೀಡಾ ವಿನೋದಗಳೆಲ್ಲ ಅಲ್ಲಿ ಸಾಮಾನ್ಯವಾಗಿತ್ತು. ಇದರೊಂದಿಗೆ ಹವ್ಯಾಸಿ ನಾಟಕಗಳ ಪ್ರದರ್ಶನಕ್ಕೂ “ಸಿಮ್ಲಾ’ ತೆರೆದುಕೊಂಡಿತು. ಆವರೆಗೆ ಸಣ್ಣ ಹಾಲ್‌ಗಳಲ್ಲಿ ಇವೆಲ್ಲ ನಡೆಯುತ್ತಿದ್ದವು. ಆಗಲೇ ಎ.ಡಿ.ಸಿ. (ಅಮೆಚೂರ್ ಡ್ರಾಮ ಕಂಪೆನಿ) ಅಸ್ತಿತ್ವಕ್ಕೆ ಬಂದಿದ್ದು. ಸ್ವತಹ ದೇಶದ ವೈಸ್ರಾಯ್ ಲ್ಯಾಟಿನ್ ನಾಟಕ ರಚಿಸಿ ಅದನ್ನು “ಸಿಮ್ಲಾ’ದಲ್ಲಿ ಪ್ರದರ್ಶನಕ್ಕೆ ವ್ಯವಸೆ§ ಮಾಡಿದರು. ಸೃಜನಶೀಲ ಬರಹಗಾರರು, ಪ್ರತಿಭಾವಂತ ಕಲಾವಿದರು ಅಲ್ಲಿದ್ದರು. ಬ್ರಿಟಿಷ್ ಅಧಿಕಾರಿಗಳ ಪ್ರೋತ್ಸಾಹದಿಂದ ಆರಂಭಗೊಂಡಿದ್ದ “ಎ.ಡಿ.ಸಿ.’ ಬಹುಬೇಗ ಪ್ರಜ್ವಲಿಸಲು ತಡವಾಗಲಿಲ್ಲ. ಷೇಕ್ಸ್‌ಪಿಯರ್ ಸೇರಿದಂತೆ ಹಲವು ಖ್ಯಾತರ ನಾಟಕಗಳನ್ನು ಗಯಾಟಿ ಸಭಾಂಗಣದಲ್ಲಿ ಅಭಿನಯಿಸಲು “ಸಿಮ್ಲಾ’ ಹವ್ಯಾಸಿ ಕಲಾವಿದರು ಮುಂದಾದರು. ಪಶ್ಚಿಮದಿಂದ ಭಾರತಕ್ಕೆ ನಾಟಕ ಕಂಪೆನಿಗಳು ಬಂದು ಪ್ರದರ್ಶನ ನೀಡಲು ಶುರುಮಾಡಿದವು. ಇಂಗ್ಲೆಂಡಿನಿಂದ ಬರುತ್ತಿದ್ದ ಎಲ್ಲಾ ಹೆಸರಾಂತ ಕಂಪೆನಿಗಳು ಸಿಮ್ಲಾ “ಗಯಾಟಿ’ ರಂಗಮಂದಿರದಲ್ಲಿ ನಾಟಕಗಳನ್ನು ಪ್ರಯೋಗಿಸಿದವು.
ವಿದ್ಯುತ್ ಆಗಿನ್ನೂ ಬಳಕೆ ಆಗಿರಲಿಲ್ಲ. ಆದರೆ, ಧ್ವನಿವರ್ಧಕ ಉಪಯೋಗವಿಲ್ಲದೆ ಅಭಿನಯಿಸುತ್ತಿದ್ದ ಕಲಾವಿದರ ಧ್ವನಿ ಪ್ರೇಕ್ಷಕರಿಗೆ ಸ್ಪಷ್ಟವಾಗಿ ಕೇಳಿಸುವಂತೆ ವ್ಯವಸ್ಥೆ ಗಯಾಟಿ ಸಭಾಂಗಣದಲ್ಲಿತ್ತು. ಥಂಡಿ ತಡೆಯಲು ಕಲ್ಲಿದ್ದಲು ಉರಿಸಿ ಶಾಖ ಉತ್ಪಾದಿಸುವ ಏರ್ಪಾಡು ಇಲ್ಲಿತ್ತು. ಮರಳು ಮೂಟೆಗಳನ್ನು ಬಳಸಿ ಪರದೆ ಏರಿಳಿಸುವ ವಿಶೇಷವೂ ಗಯಾಟಿ ರಂಗಮಂದಿರದಲ್ಲಿತ್ತು. 1900ರ ನಂತರವಂತೂ ಇಂಗ್ಲೆಂಡಿನಿಂದ ನಾಟಕ ಕಂಪೆನಿಗಳ ಸಾಲು ಭಾರತಕ್ಕೂ ಸಿಮ್ಲಾಕ್ಕೂ ಬರುತ್ತಿದ್ದವು. ಕ್ರಿಸ್ಮಸ್ ಋತುವಿನಲ್ಲಿ ತಿಂಗಳುಗಳ ಕಾಲ ನಾಟಕೋತ್ಸವಗಳಿರುತ್ತಿದ್ದವು. ಭೂಕಂಪ-ಅಗ್ನಿ ಆಕಸ್ಮಿಕ ಕಾರಣಗಳಿಂದ “ಗಯಾಟಿ’ ರಂಗಮಂದಿರವಿದ್ದ ಸಿಮ್ಲಾ ಪುರಭವನ ಈಗ ಮೂರು ಅಂತಸ್ತಿಗೆ ಇಳಿದಿದೆಯಾದರೂ ಹಳೇ ರಂಗಮಂದಿರದ ಛಾಯೆ ಹಾಗೆಯೇ ಇದೆ. ಪ್ರಾರಂಭದಿಂದಲೂ ಅಮೆಚೂರ್ ಡ್ರಾಮಾ ಕಂಪೆನಿಯಲ್ಲಿ ಬ್ರಿಟಿಷರೇ ಸಕ್ರಿಯರಾಗಿದ್ದರು. ಸ್ವಾತಂತ್ರ್ಯಕ್ಕೆ ಸ್ವಲ್ಪ ಮೊದಲು ಭಾರತೀಯರಿಗೆ ಪ್ರವೇಶ ದೊರೆಯಿತು. ಪೃಥ್ವಿರಾಜ್ ಕಪೂರ್-ಕುಂದನ್‌ಲಾಲ್ ಸೈಗಲ್ ಮೊದಲಾದವರು “ಗಯಾಟಿ’ ರಂಗಮಂದಿರದಲ್ಲಿ ಮಿಂಚಿದ ಪ್ರಮುಖ ಭಾರತೀಯ ಕಲಾವಿದರು. ಸೈಗಲ್ ಸ್ತ್ರೀಪಾತ್ರಗಳಿಂದ ಹೆಸರಾದರೆ, ಪೃಥ್ವಿರಾಜ್ ಕಪೂರ್ ಧೀರೋದ್ಧಾತ ಪಾತ್ರಗಳಿಂದ ಸಿಮ್ಲಾ ಗಯಾಟಿಯಲ್ಲಿ ಛಾಪು ಒತ್ತಿದರು. ಭಾರತೀಯ ರಂಗಭೂಮಿಯನ್ನು ಶ್ರೀಮಂತಗೊಳಿಸಿದ ಬಾಲ್‌ರಾಜ್ ಸಹಾನಿ, ಪ್ರಾಣ್, ಮನೋಹರ ಸಿಂಗ್, ರಾಜ್‌ಬಬ್ಬರ್, ಅನುಪಮ್ ಖೇರ್ ಅಂತಹವರೆಲ್ಲ ತಮ್ಮ ವಿಶಿಷ್ಟ ಅಭಿನಯ ಕೌಶಲ ಪ್ರದರ್ಶಿಸಿದ ತಾಣ ಈ ಗಯಾಟಿ ಥಿಯೇಟರ್. ಈಚೆಗೆ ನಮ್ಮನ್ನಗಲಿದ ಶಶಿಕಪೂರ್ ಅವರ ಬದುಕಿಗೆ ತಿರುವುಕೊಟ್ಟ ಸ್ಥಳ ಸಿಮ್ಲಾದ ಗಯಾಟಿ ಸಭಾಂಗಣ. ಸ್ವಾತಂತ್ರಾéನಂತರವೂ ಸಿಮ್ಲಾದಲ್ಲೇ ನೆಲೆಸಿದ್ದ ರಂಗಕರ್ಮಿ ಹಾಗೂ ಲೇಖಕ ಕೆಂಡಲ್ಸ್ ಅವರ ಮಗಳು ಜೆನ್ನಿಫರ್ ಕೆಂಡಲ್- ಶಶಿಕಪೂರ್ ಪ್ರೇಮಾಂಕುರವಾದ ಸ್ಥಳ “ಗಯಾಟಿ’. ತಂದೆ ಪೃಥ್ವಿರಾಜ್‌ಕಪೂರ್ ನಾಟಕ ತಂಡದ ಸದಸ್ಯರಾಗಿ ಸಿಮ್ಲಾ “ಗಯಾಟಿ’ ರಂಗಮಂದಿರದಲ್ಲಿ ಅಭಿನಯಿಸುತ್ತಿದ್ದರು ಶಶಿಕಪೂರ್. ಕೊನೆಗೆ ಇವರಿಬ್ಬರೂ ಲಗ್ನವಾಗಿ ಒಟ್ಟಾಗಿಯೇ “ಗಯಾಟಿ’ ರಂಗಮಂಚದಲ್ಲಿ ಅಭಿನಯಿಸಿದ್ದು ಉಲ್ಲೇಖನಾರ್ಹ. ಜಗತ್ತಿನಲ್ಲೀಗ ಉಳಿದಿರುವುದು ಪುರಾತನ ಗಯಾಟಿ ಆರು ಮಂದಿರಗಳು ಮಾತ್ರ. ಅದರಲ್ಲಿ ಸಿಮ್ಲಾ ಗಯಾಟಿಯೂ ಒಂದು. ಪುರಭವನದ ಆಡಳಿತದಲ್ಲಿದ್ದು ಈಗ ಸಂಸ್ಕೃತಿ ಇಲಾಖೆ ಸುಪರ್ದಿಯಲ್ಲಿರುವ “ಗಯಾಟಿ’ ಒಂದೂಕಾಲು ಶತಮಾನದ ಅವಧಿಯಲ್ಲಿ ಹಲವು ಬಾರಿ ನವೀಕರಣಗೊಂಡಿದ್ದರೂ ಹಳೆಯ ವಿನ್ಯಾಸವನ್ನೇ ಉಳಿಸಿಕೊಂಡಿದೆ. ಸೋಪಾಸೆಟ್ಟು , ವಿ.ಐ.ಪಿ. ಕುರ್ಚಿ, ಬಾಲ್ಕನಿ, ಬಾಕ್ಸ್ ಸೀಟುಗಳು- ಹೀಗೆ ಎಲ್ಲಾ ರೂಪಾಂತರಗಳನ್ನು ಕಂಡ ಗಯಾಟಿ ಮೊದಲಿದ್ದ 250 ಆಸನಗಳನ್ನು ಈಗ 520ಕ್ಕೆ ಹೆಚ್ಚಿಸಿಕೊಂಡಿದೆ. ಸಾಂಸ್ಕೃತಿಕ ಪಾರಂಪರಿಕ ತಾಣವೆಂಬ ಮಾನ್ಯತೆ ಪಡೆದಿರುವ ಗಯಾಟಿ ಪರದೆ ಈಗಲೂ ಮರಳು ಮೂಟೆಗಳ ನೆರವಿನಿಂದಲೇ ಏರಿಳಿಯುತ್ತಿವೆ! – ಜಗನ್ನಾಥ ಪ್ರಕಾಶ್