Advertisement

ಚಂದ್ರಶೇಖರ ಕಂಬಾರರ ಶಿಖರಸೂರ್ಯ ಕಾದಂಬರಿ

06:00 AM Jun 03, 2018 | |

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ| ಚಂದ್ರಶೇಖರ ಕಂಬಾರ ಅವರ “ಶಿಖರ ಸೂರ್ಯ’ ಕಾದಂಬರಿ ಇದೀಗ ಇಂಗ್ಲಿಷಿಗೆ ಅನುವಾದಗೊಂಡು ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ವಿಭಾಗದಿಂದ ಪ್ರಕಟಗೊಂಡಿದೆ. ಡಾ| ಲಕ್ಷ್ಮೀ ಚಂದ್ರಶೇಖರ್‌ ಅವರು ಈ ಕೃತಿಯನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ.

Advertisement

ಟಾಗೋರ್‌ ಸಾಹಿತ್ಯ ಪ್ರಶಸ್ತಿ ಪಡೆದ ಶಿಖರಸೂರ್ಯ ಕಾದಂಬರಿಯನ್ನು 2006ರಲ್ಲಿ ಹೆಗ್ಗೊàಡಿನ “ಅಕ್ಷರ ಪ್ರಕಾಶನ’ ಮುದ್ರಿಸಿತು. ಆ ಬಳಿಕ 2007ರಲ್ಲಿ ಎರಡನೆಯ ಮುದ್ರಣ ಕಂಡು, “ಅಂಕಿತ ಪುಸ್ತಕ’ದ ಮೂಲಕ ಪ್ರಕಟಗೊಂಡಿತು. ಈಗಾಗಲೇ ನಾಲ್ಕಕ್ಕೂ ಹೆಚ್ಚು ಬಾರಿ ಮರುಮುದ್ರಣಗೊಂಡಿದೆ. ಜಾಗತೀಕರಣಕ್ಕೆ ನೀಡಿದ ಸೃಜನಶೀಲ ಪ್ರತಿಕ್ರಿಯೆಯ ರೂಪದಲ್ಲಿ ಈ ಕೃತಿ ಚರ್ಚಿಸಲ್ಪಟ್ಟಿದೆ. ಹಲವು ವಿಮರ್ಶಕ ವಿದ್ವಾಂಸರ ಬರಹ-ಮಾತುಗಳಿಂದ ಈ ಕೃತಿ ಕನ್ನಡದಿಂದ ಹೊರಗೂ ಸಾಹಿತ್ಯ ವಲಯದಲ್ಲಿ ಆಸಕ್ತಿ ಮೂಡಿಸಿತ್ತು. ಇದೀಗ ಇಂಗ್ಲಿಶ್‌ಗೆ ಅನುವಾದಗೊಂಡಿರುವುದರಿಂದ ಕನ್ನಡೇತರ ಓದುಗರಿಗೂ ಕೃತಿ ಲಭ್ಯವಾಗುವಂತಾಗಿದೆ.

ಭಾಷೆ-ಬದುಕು-ಸಂಸ್ಕೃತಿ-ವ್ಯಕ್ತಿ-ಸಮಾಜ ಈ ನೆಲೆಗಳಲ್ಲಿ ಕಂಬಾರರ ಸಾಹಿತ್ಯ ಕೃತಿಗಳಿಗೆ ಪರಸ್ಪರ ಸಂಬಂಧಗಳಿರುತ್ತವೆ. ಅವರ ನಿರಂತರ ಶೋಧನೆಯಲ್ಲಿ ಪ್ರತಿಯೊಂದು ಕೃತಿಯೂ ಮುಂದೆ ಮುಂದುವರಿಯಲಿರುವ ಒಂದು ಘಟ್ಟ. ಕಂಬಾರರ ಚಕೋರಿ ಯಲ್ಲಿ ನಾಯಕ ಚಂದಮುತ್ತ ಅಹಂ ನಿರಸನದ ಮಾರ್ಗ ಹಿಡಿದು ದುರಂತಕ್ಕೆ ಒಳಗಾಗುತ್ತಾನೆ. ಶಿಖರಸೂರ್ಯ ಕಾದಂಬರಿಯಲ್ಲಿ ಜಯಮುತ್ತ-ಜಯಸೂರ್ಯ-ಶಿಖರಸೂರ್ಯ ವಿದ್ಯೆಯಿಂದ ತಂತ್ರಜ್ಞಾನ ಅಹಂಗಳ ದಾರಿಯಲ್ಲಿ ದುರಂತದ ಕಡೆ ಸಾಗುತ್ತಾನೆ. ಚಕೋರಿ ಒಬ್ಬ ಕಲಾವಿದನ ಮೂಲಕ ಪರಿಪೂರ್ಣತೆಯ ಅನ್ವೇಷಣೆಗೆ ತೊಡಗುತ್ತದೆ. ಶಿಖರಸೂರ್ಯ ವಿದ್ಯೆಯ ಮೂಲಕ ಅಧಿಕಾರದ ಅನ್ವೇಷಣೆ ಮಾಡುತ್ತದೆ. ವಿದ್ಯೆಯಿಂದ ಹುಟ್ಟುವ ತಂತ್ರಜ್ಞಾನ ಇಂದು ಜಗತ್ತನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಈ ಕಾದಂಬರಿಯ ಸಾಂಕೇತಿಕ ಸ್ವರೂಪವನ್ನು ಅರ್ಥಮಾಡಿಕೊಳ್ಳಬೇಕು. ಕಂಬಾರರ ಕರಿಮಾಯಿಯಲ್ಲಿ ಪ್ರಾರಂಭವಾದ ಆಧುನಿಕತೆಯ ಅವಸ್ಥಾಂತರಗಳು ಶಿಖರಸೂರ್ಯದ ಬಳಿಕ ಪ್ರಕಟವಾದ ಶಿವನ ಢಂಗುರ ಕಾದಂಬರಿಯಲ್ಲಿ ಜಾಗತೀಕರಣಕ್ಕೊಂದು ತಾರ್ಕಿಕ ಪ್ರತಿಕ್ರಿಯೆಯನ್ನೂ ಸೂಚಿಸುತ್ತದೆ. ಕಂಬಾರರ ಕೃತಿಗಳಲ್ಲಿ ಆಗುವ ಹಾಗೆ ಜಾನಪದ-ಪೌರಾಣಿಕ ಕತೆಗಳ ಬೆಸುಗೆಯಲ್ಲಿ ಶಿವಾಪುರದ ಆಧುನಿಕ ಅರ್ಥವಂತಿಕೆ ಬೆಳಗುತ್ತದೆ. ಕಾಳನ್ನು ಹೊನ್ನನ್ನಾಗಿ ಪರಿವರ್ತಿಸಬಲ್ಲ ಮೌಲ್ಯದ ಬೆರಗಿನಲ್ಲಿ ನಾವು ಹೊನ್ನನ್ನು ಕಾಳನ್ನಾಗಿ ಪರಿವರ್ತಿಸಬಲ್ಲ ಮಹತ್ತನ್ನು ಮರೆಯಲಾಗದು ಎಂಬುದನ್ನು ಕಾದಂಬರಿ ನೆನಪಿಸುತ್ತದೆ.

ಶಿಖರಸೂರ್ಯ ಕಾದಂಬರಿಯನ್ನು ಇಂಗ್ಲಿಷಿಗೆ ಅನುವಾದಿಸಿರುವ ಲಕ್ಷ್ಮೀಚಂದ್ರಶೇಖರ್‌, ತಮ್ಮ ಬರಹಗಳು ಮತ್ತು ನಾಟಕ, ಟಿಲಿವಿಶನ್‌ ಹಾಗೂ ಸಿನೆಮಾಗಳಲ್ಲಿ ಅಭಿನಯದ ಮೂಲಕ ಕನ್ನಡಿಗರಿಗೆ ಪರಿಚಿತರಾಗಿದ್ದಾರೆ. ಇವರು ತಮ್ಮ ಅನುವಾದದಲ್ಲಿ ಕಂಬಾರರ ಕಾದಂಬರಿಯ ಸ್ಥಳೀಯ ಲೋಕವನ್ನು ಕಾಣಿಸಬಲ್ಲ ಇಂಗ್ಲಿಷ್‌ ಭಾಷಾ ಶೈಲಿಯನ್ನು ಬಳಸುತ್ತಾರೆ. ಆಯಕಟ್ಟಿನ ನಿರೂಪಣೆಗಳಲ್ಲಿ ಕಾದಂಬರಿಯ ಸ್ಥಳೀಯ ಲೋಕದ ಹಾಗೂ ಕನ್ನಡ ಭಾಷಾ ಬಂಧದ ರೀತಿ ನೆನಪಾಗುವಂತೆ ಇಂಗ್ಲಿಷ್‌ ವಾಕ್ಯರಚನಾ ಶೈಲಿಯನ್ನು ಬಳಸಿದ್ದಾರೆ. “ಮಹಾರಾಣಿ’ ಮೊದಲಾದ ಬಿರುದುಗಳ ಮೂಲಕ ಸೂಚಿತವಾಗುವುದನ್ನು “ಕ್ವೀನ್‌’ ಎಂದು ಬದಲಾಯಿಸದೆ ಹಾಗೆಯೇ ಉಳಿಸಿಕೊಂಡಿದ್ದಾರೆ. ಅಂದರೆ ಇಂಗ್ಲಿಷ್‌ ಓದುಗ ತನ್ನ ಭಾಷಾಸೌಖ್ಯದಲ್ಲಿ ಮೈಮರೆಯದೆ, ಪ್ರಜ್ಞಾಪೂರ್ವಕ ಕನ್ನಡ ಕಾದಂಬರಿ ಲೋಕವನ್ನು ಪ್ರವೇಶಿಸಲು ಸಾಧ್ಯವಾಗುವಂಥ ಅನುವಾದ ಶೈಲಿಯನ್ನು ಬಳಸಿದ್ದಾರೆ. ಇಂಗ್ಲಿಷ್‌ ಭಾಷೆಯ ಮೂಲಕ ಕನ್ನಡ ಲೋಕಕ್ಕೆ ದಾರಿ ಮಾಡಿದ್ದಾರೆ. ಕನ್ನಡ ಲೋಕವನ್ನು ಇಂಗ್ಲಿಶ್‌ಗೆ ಅನುಕೂಲವಾಗುವಂತೆ ಪುನರ್‌ಪ್ರತಿಷ್ಠಾಪಿಸುವ ಕ್ರಮವನ್ನು ಅನುಸರಿಸಿಲ್ಲ. ಇದು ಅನುವಾದಕರ ಪ್ರಜ್ಞಾಪೂರ್ವಕ ಅನುವಾದ ತಣ್ತೀವೊಂದರ ಆಯ್ಕೆ. ಈ ಪ್ರಯತ್ನದಲ್ಲಿ ಅವರು ಯಶಸ್ವಿಯಾಗಿ ಕನ್ನಡ ಹಾಗೂ ಇಂಗ್ಲಿಷ್‌ ಕೃತಿಗಳಿಗೆ ಸಮಾನ ನ್ಯಾಯ ಒದಗಿಸಿದ್ದಾರೆ. ಶ್ರಮದಾಯಕವಾದ ಇಂತಹ ಅನುವಾದದ ಯಶಸ್ಸಿಗಾಗಿ ಲಕ್ಷ್ಮೀ ಚಂದ್ರಶೇಖರ್‌ ಅವರನ್ನು ಅಭಿನಂದಿ ಸಬೇಕು.

 ಶಿಖರ ಸೂರ್ಯ
ಲೇ.: ಚಂದ್ರಶೇಖರ ಕಂಬಾರ
ಇಂಗ್ಲಿಷ್‌ ಅನು.: ಲಕ್ಷ್ಮೀ ಚಂದ್ರಶೇಖರ್‌
ಪ್ರ.: “ಶಬ್ದಾನ’ ಕೇಂದ್ರ ಸಾಹಿತ್ಯ ಅಕಾಡೆಮಿ, ಅನುವಾದ ವಿಭಾಗ, ಸೆಂಟ್ರಲ್‌ ಕಾಲೇಜು ಆವರಣ, ಬೆಂಗಳೂರು-1
ಬೆಲೆ : ರೂ. 365   ಮುದ್ರಣ : 2017

Advertisement

ಎಸ್‌.ಆರ್‌. ವಿಜಯಶಂಕರ

Advertisement

Udayavani is now on Telegram. Click here to join our channel and stay updated with the latest news.

Next