ಮುಂಬೈ: ಈ ವರ್ಷದ ಆಗಸ್ಟ್ ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದ ಟೀಂ ಇಂಡಿಯಾದ ಆಟಗಾರ ಶಿಖರ್ ಧವನ್ (Shikhar Dhawan) ಇದೀಗ ನೇಪಾಳದಲ್ಲಿ ಕ್ರಿಕೆಟ್ ಆಡಲು ಮುಂದಾಗಿದ್ದಾರೆ. ಮಾಜಿ ಎಡಗೈ ಬ್ಯಾಟರ್ ಶಿಖರ್ ಧವನ್ ಅವರು ಚೊಚ್ಚಲ ನೇಪಾಲ ಪ್ರೀಮಿಯರ್ ಲೀಗ್ (NPL) ನಲ್ಲಿ ಆಡಲಿದ್ದಾರೆ.
ಶಿಖರ್ ಧವನ್ ಈಗಾಗಲೇ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ (LLC) ಭಾಗವಹಿಸಿದ್ದಾರೆ. ಅಲ್ಲದೆ ಬಿಗ್ ಕ್ರಿಕೆಟ್ ಲೀಗ್‌ನಲ್ಲಿಯೂ ಪ್ರತಿನಿಧಿಸಲಿದ್ದಾರೆ. ಶಿಖರ್ ಧವನ್ ಅವರು ಮುಂಬರುವ ಎನ್ ಪಿಎಲ್ 2024 ಸೀಸನ್ ಗಾಗಿ ಕರ್ನಾಲಿ ಯಾಕ್ಸ್ ತಂಡವನ್ನು ಪ್ರತಿನಿಧಿಸುತ್ತಾರೆ.
ಎಂಟು ತಂಡಗಳ ಎನ್‌ಪಿಎಲ್ ಪಂದ್ಯಾವಳಿಯು ನವೆಂಬರ್ 30 ರಿಂದ ಪ್ರಾರಂಭವಾಗುತ್ತದೆ. ಕೂಟದಲ್ಲಿ 32 ಪಂದ್ಯಗಳು ನಡೆಯಲಿದ್ದು, ಡಿಸೆಂಬರ್ 21 ರಂದು ಮುಕ್ತಾಯಗೊಳ್ಳಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಂತೆಯೇ ನಾಕೌಟ್ ಹಂತಗಳನ್ನು ಒಳಗೊಂಡಿರುತ್ತದೆ. ಅಂದರೆ ಒಂದು ಎಲಿಮಿನೇಟರ್, ಎರಡು ಅರ್ಹತಾ ಪಂದ್ಯಗಳು ಮತ್ತು ಫೈನಲ್ ಗಳಿರುವ ಪ್ಲೇಆಫ್ ಗಳು ಇರಲಿದ್ದಾರೆ.
ಉದ್ಘಾಟನಾ ಆವೃತ್ತಿಯ ನೇಪಾಳ ಪ್ರೀಮಿಯರ್ ಲೀಗ್ ನಲ್ಲಿ ಇನ್ನೂ ಹಲವು ಅಂತಾರಾಷ್ಟ್ರೀಯ ಆಟಗಾರರು ಭಾಗವಹಿಸಲಿದ್ದಾರೆ. ಜಿಮ್ಮಿ ನೀಶಮ್, ಮಾರ್ಟಿನ್ ಗಪ್ಟಿಲ್, ಉನ್ಮುಕ್ತ್ ಚಾಂದ್, ಬೆನ್ ಕಟ್ಟಿಂಗ್ ಮುಂತಾದವರು ಎನ್‌ಪಿಎಲ್ ನಲ್ಲಿ ಆಡಲಿದ್ದಾರೆ.
ಶಿಖರ್ ಧವನ್ ಅವರು ಕರ್ನಾಲಿ ಯಾಕ್ಸ್ ತಂಡದ ನಾಲ್ಕನೇ ವಿದೇಶಿ ಆಟಗಾರನಾಗಿದ್ದಾರೆ. ಫ್ರಾಂಚೈಸಿ ಈಗಾಗಲೇ ಪಾಕಿಸ್ತಾನದ ಮೊಹಮ್ಮದ್ ಹುಸೇನ್ ತಲತ್, ಹಾಂಗ್ ಕಾಂಗ್‌ನ ಬಾಬರ್ ಹಯಾತ್ ಮತ್ತು ವೆಸ್ಟ್ ಇಂಡೀಸ್ ನ ಚಾಡ್ವಿಕ್ ವಾಲ್ಟನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಎನ್‌ಪಿಎಲ್ ನ ಎಲ್ಲಾ ಪಂದ್ಯಗಳು ಕಿರ್ತಿಪುರ್ ನ ತ್ರಿಭುವನ್ ಯುನಿವರ್ಸಿಟಿ ಇಂಟರ್ ನ್ಯಾಶನಲ್ ಮೈದಾನದಲ್ಲಿ ನಡೆಯಲಿದೆ.