Advertisement

ಗಾಯದ ಸಮಸ್ಯೆ: ಕಿವೀಸ್ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದ ಶಿಖರ್ ಧವನ್

10:15 AM Jan 22, 2020 | keerthan |

ಮುಂಬೈ: ಭಾರತ ತಂಡಕ್ಕೆ ಇತ್ತೀಚೆಗೆ ಗಾಯಗಳ ಹೊಡೆತ ವಿಪರೀತವಾಗಿದೆ. ಬುಮ್ರಾ ಇತ್ತೀಚೆಗಷ್ಟೇ ತಂಡಕ್ಕೆ ಮರಳಿದ್ದಾರೆ. ಭುವನೇಶ್ವರ್‌ ಕುಮಾರ್‌ ಮತ್ತೆ ಮತ್ತೆ ಗಾಯಕ್ಕೊಳಗಾಗಿ ತಂಡದಿಂದ ಹೊರಬಿದ್ದಿದ್ದಾರೆ. ಹಾರ್ದಿಕ್‌ ಪಾಂಡ್ಯ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಇಶಾಂತ್‌ ಶರ್ಮ ಕೂಡ ಗಾಯಗೊಂಡಿದ್ದಾರೆ. ಅದರ ನಡುವೆಯೇ ಇನ್ನೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. 3ನೇ ಏಕದಿನ ಪಂದ್ಯದಲ್ಲಿ ಎಡಭುಜದ ನೋವಿಗೆ ತುತ್ತಾಗಿರುವ ಶಿಖರ್‌ ಧವನ್‌, ಕಿವೀಸ್ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ.

Advertisement

ಆಸ್ಟ್ರೇಲಿಯ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಏರಾನ್‌ ಫಿಂಚ್ ಅವರ ಹೊಡೆತವೊಂದನ್ನು ತಡೆಯಲು ಶಿಖರ್‌ ಧವನ್‌ ಡೈವ್‌ ಹೊಡೆದರು. ಆಗ ಅವರ ಭುಜಕ್ಕೆ ಏಟಾಯಿತು. ನಂತರ ಕ್ಷೇತ್ರರಕ್ಷಣೆಯಿಂದ ಹೊರನಡೆದರು. ಅನಂತರ ಬ್ಯಾಟಿಂಗ್‌ಗೂ ಬರಲಿಲ್ಲ. 2ನೇ ಏಕದಿನ ಪಂದ್ಯದ ವೇಳೆಯೂ ಅವರು ಏಟು ಮಾಡಿಕೊಂಡಿದ್ದರು. ಅವರು ಬ್ಯಾಟಿಂಗ್‌ ಮಾಡುವಾಗ, ಪ್ಯಾಟ್‌ ಕಮಿನ್ಸ್‌ ಬೌಲಿಂಗ್‌ನಲ್ಲಿ ಚೆಂಡು ಅವರ ಪಕ್ಕೆಲುಬಿಗೆ ಬಡಿದಿತ್ತು. ನಂತರ ಕ್ಷೇತ್ರರಕ್ಷಣೆಗಿಳಿದಿರಲಿಲ್ಲ.

ಇಎಸ್ ಪಿಎನ್ ಕ್ರಿಕ್ ಇನ್ಫೋ ಜಾಲತಾಣ ಈ ಬಗ್ಗೆ ವರದಿ ಮಾಡಿದ್ದು, ಧವನ್ ತಂಡದಿಂದ ಬಹುತೇಕ ಹೊರಬಿದ್ದಿದ್ದಾರೆ ಎಂದಿದೆ. ಆಸೀಸ್ ಏಕದಿನ ಸರಣಿಯ ಮೊದಲೆರಡು ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದ ಶಿಖರ್ 96 ಮತ್ತು 74 ರನ್ ಗಳಿಸಿದ್ದರು

ಧವನ್‌ಗೆ ಗಾಯದ ದೊಡ್ಡ ಇತಿಹಾಸವೇ ಇದೆ. ಕಳೆದ ಆರೇಳು ತಿಂಗಳಲ್ಲಿ ಆಡಿದ್ದಕ್ಕಿಂತ ಅವರು ಹೊರಗುಳಿದಿದ್ದೇ ಹೆಚ್ಚು. 2019ರ ಏಕದಿನ ವಿಶ್ವಕಪ್‌ ನಲ್ಲಿ ಆಸ್ಟ್ರೇಲಿಯ ವಿರುದ್ಧ ಶತಕ ಬಾರಿಸಿದ್ದ ಅವರು, ತಮ್ಮ ಎಡಗೈ ತೋರು ಬೆರಳಿಗೆ ಏಟು ಮಾಡಿಕೊಂಡು ಇಡೀ ವಿಶ್ವಕಪ್‌ ನಿಂದಲೇ ಹೊರಬಿದ್ದಿದ್ದರು. ಈಗಷ್ಟೇ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ.

ಈಗಾಗಲೇ ಚುಟುಕು ಮಾದರಿಯಲ್ಲಿ ಶಿಖರ್ ಧವನ್ ಜಾಗದಲ್ಲಿ ಕೆ ಎಲ್ ರಾಹುಲ್ ಮಿಂಚುತ್ತಿದ್ದು, ಕಿವೀಸ್ ಸರಣಿಯಲ್ಲೂ ಶಿಖರ್ ಸ್ಥಾನ ಪಡೆಯದಿದ್ದರೆ, ಧವನ್ ಪಾಲಿಗೆ ಭಾರತೀಯ ಟಿ20 ತಂಡ ಬಹುತೇಕ ಮುಚ್ಚಿದಂತೆ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next