Advertisement

Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ

11:48 AM Apr 24, 2024 | Vishnudas Patil |

ಶಿಕಾರಿಪುರ: ತಾಲೂಕಿನ ಐತಿಹಾಸಿಕ ಹಿನ್ನೆಲೆ ಹೊಂದಿರುವ ಹುಚ್ಚರಾಯಸ್ವಾಮಿ (ಆಂಜನೇಯ) ದೇವರ ಬ್ರಹ್ಮ ರಥೋತ್ಸವವು ಮಂಗಳವಾರ ಪಟ್ಟಣದಲ್ಲಿ ಸಾವಿರಾರು ಭಕ್ತ ಸಮೂಹದ ಮಧ್ಯೆ ವಿಜೃಂಭಣೆಯಿಂದ
ನೆರವೇರಿತು.

Advertisement

ರಾಜ್ಯದಲ್ಲಿ ಪ್ರಖ್ಯಾತಿ ಪಡೆದಿರುವ ಆಂಜನೇಯ ದೇವಸ್ಥಾನ ಇದಾಗಿದೆ. ಹುಚ್ಚರಾಯಸ್ವಾಮಿ ದೇವರ ಬ್ರಹ್ಮ ರಥೋತ್ಸವಕ್ಕೆ ಮಂಗಳವಾರ ಬೆಳಗ್ಗೆ 9.40ರಿಂದ9.50ರವರೆಗಿನ ಮಿಥುನ ಲಗ್ನದ ಶುಭ ಸಂದರ್ಭದಲ್ಲಿ ಚಾಲನೆ ದೊರೆಯಿತು.

ದೇವಸ್ಥಾನ ಅವರಣದಿಂದ ಹೊರಟ ಬ್ರಹ್ಮ ರಥೋತ್ಸವಕ್ಕೆ ಸಾಗರ ಉಪವಿಭಾಗಾಧಿಕಾರಿ ಆರ್‌. ಯತೀಶ್‌ ಹಾಗೂ ತಹಶೀಲ್ದಾರ್‌ ಮಲ್ಲೇಶಪ್ಪ ಬಿ. ಪೂಜಾರ್‌ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಭಕ್ತರು ಪಲ್ಲಕ್ಕಿಯಲ್ಲಿ ಹೊತ್ತು ತಂದ ಹುಚ್ಚರಾಯಸ್ವಾಮಿ (ಆಂಜನೇಯ) ದೇವರ ಉತ್ಸವ ಮೂರ್ತಿಯನ್ನು ಬ್ರಹ್ಮರಥೋತ್ಸವ ಸುತ್ತಲೂ ಪ್ರದಕ್ಷಿಣೆ ಹಾಕಿಸಿ ನಂತರ ಬ್ರಹ್ಮರಥೋತ್ಸವದಲ್ಲಿ ಪ್ರತಿಷ್ಠಾಪಿಸಿದರು.

ನಂತರ ಸಂಪ್ರದಾಯದಂತೆ ಹುಚ್ಚರಾಯಸ್ವಾಮಿ ದೇವಸ್ಥಾನ ಅವರಣದಿಂದ ನಾದಸ್ವರ (ಮಂಗಳ ವಾದ್ಯ),ಬ್ಯಾಂಡ್‌ಸೆಟ್‌ ವಾದ್ಯದ ಮೆರವಣಿಗೆಯೊಂದಿಗೆ ಸಾವಿರಾರು ಭಕ್ತರು ತೇರುಬೀದಿಯಲ್ಲಿರುವ ಮಾರಿಕಾಂಬಾ
ಗದ್ದುಗೆವರೆಗೂ ಬ್ರಹ್ಮರಥವನ್ನು ಎಳೆದು ತಂದು ನಿಲ್ಲಿಸಿದರು. ಬ್ರಹ್ಮ ರಥ ಎಳೆಯುವ ಸಂದರ್ಭದಲ್ಲಿ ಯುವಕರು ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಿದರು.

ಬ್ರಹ್ಮರಥೋತ್ಸವ ಪ್ರಯುಕ್ತ ಹುಚ್ಚರಾಯಸ್ವಾಮಿ ದೇವರ ಮೂರ್ತಿ, ದೇವಸ್ಥಾನ ಹಾಗೂ ಬ್ರಹ್ಮರಥವನ್ನು ವಿವಿಧ
ಪುಷ್ಪಗಳಿಂದ ಸಿಂಗರಿಸಲಾಗಿತ್ತು. ಮುಜರಾಯಿ ಇಲಾಖೆ ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಿತ್ತು. ವಿವಿಧ ಸಂಘಟನೆ ಪದಾಧಿಕಾರಿಗಳು ಭಕ್ತರಿಗೆ ಪಾನಕ ವಿತರಿಸಿದರು.

Advertisement

ಬ್ರಹ್ಮರಥೋತ್ಸವದಲ್ಲಿ ಹಾವೇರಿ, ದಾವಣಗೆರೆ, ಹುಬ್ಬಳ್ಳಿ,ಧಾರಾವಾಡ,ಬೆಂಗಳೂರು ನಗರ ಸೇರಿದಂತೆ ಜಿಲ್ಲೆಯ ಸಾಗರ,ಸೊರಬ ಸೇರಿದಂತೆ ವಿವಿಧ ತಾಲೂಕಿನಿಂದ ಸಾವಿರಾರು ಭಕ್ತರು ಆಗಮಿಸಿ ಹುಚ್ಚರಾಯಸ್ವಾಮಿ ದೇವರ
ದರ್ಶನ ಪಡೆದು ಬ್ರಹ್ಮ ರಥಕ್ಕೆ ಪೂಜೆ ಸಲ್ಲಿಸಿದರು. ರಥೋತ್ಸವ ಅಂಗವಾಗಿ ಹುಚ್ಚರಾಯಸ್ವಾಮಿ ದೇವರ ಮೂರ್ತಿ ಹಾಗೂ ದೇವಸ್ಥಾನವನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು.

ಯಡಿಯೂರಪ್ಪ ಕುಟುಂಬದಿಂದ ವಿಶೇಷ ಪೂಜೆ

ಬ್ರಹ್ಮರಥೋತ್ಸವ ಪ್ರಯಕ್ತ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕುಟುಂಬ ಸಮೇತ ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಜಾತ್ರೆಗೆ ಆಗಮಿಸುವ ಭಕ್ತರಿಗೆ ಸ್ವಾಗತ
ಕೋರುವ ರಾಜಕೀಯ ಪಕ್ಷಗಳ ಮುಖಂಡರ ಫ್ಲೆಕ್ಸ್‌ಗಳನ್ನು ಅಳವಡಿಸಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next