Advertisement

ಶಿಗ್ಗಾವಿ ಪುರಸಭೆ ಸಾರಥಿಗಳ ಬದಲಾವಣೆಗೆ ಪಟ್ಟು

04:04 PM Nov 19, 2021 | Team Udayavani |

ಶಿಗ್ಗಾವಿ: ಕಳೆದ ಕೆಲ ತಿಂಗಳಿಂದ ಪಟ್ಟಣದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಬದಲಾವಣೆ ಕುರಿತು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದ ಬಿಜೆಪಿಯ ಹದಿನೇಳು ಸದಸ್ಯರು ಇದೀಗ ಬಿಗಿ ಪಟ್ಟು ಹಿಡಿದಿದ್ದಾರೆ. ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯದ ಗೊತ್ತುವಳಿಗೆ ಸಹಿ ಹಾಕಿರುವ ಮನವಿ ಪತ್ರವನ್ನು ಗುರುವಾರ ಮುಖ್ಯಾಧಿಕಾರಿ ಎಂ.ವಿ. ಹಿರೇಮಠ ಅವರಿಗೆ ಸಲ್ಲಿಸಿದ್ದಾರೆ.

Advertisement

ಪುರಸಭೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸುದೀರ್ಘ‌ ಅವಧಿಯಿಂದ ಸಾಮಾನ್ಯ ಸಭೆ ಕರೆಯದೇ ಅಭಿವೃದ್ಧಿ ಅನುದಾನ ಬಿಡುಗಡೆ, ಕಾಮಗಾರಿ ಅನುಷ್ಠಾನದಲ್ಲಿ ವಿಳಂಬ ಧೋರಣೆ ತೋರಿದ್ದಾರೆ. ಆಡಳಿತಾತ್ಮಕ ವಿಚಾರಗಳಲ್ಲಿ ಸದಸ್ಯರ ಅನೇಕ ವಿಚಾರಗಳನ್ನು ಬದಿಗಿಟ್ಟು ಏಕಪಕ್ಷೀಯ ಧೋರಣೆ ಅನುಸರಿಸುತ್ತಿದ್ದಾರೆ. ಅವರ ನಡವಳಿಕೆ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಮ್ಮನ್ನು ಕತ್ತಲಲ್ಲಿಟ್ಟಿದ್ದಾರೆ. ಪಟ್ಟಣದ ಹಲವಾರು ಕಾಮಗಾರಿಗಳ ಕ್ರಿಯಾಯೋಜನೆಗಳ ಮತ್ತು ಅನುಷ್ಠಾನ ವಿಳಂಬವಾಗಿ ಅನುದಾನ ಕಡಿತಗೊಂಡು ಆರ್ಥಿಕ ನಷ್ಟಕ್ಕೆ ಕಾರಣವಾಗಿದ್ದಾರೆಂದು ಪತ್ರದಲ್ಲಿ ವಿವರಿಸಿದ್ದಾರೆ.

ಇಂತಹ ಹಲವಾರು ಕಾರಣಗಳಿಂದ ಅಧ್ಯಕ್ಷರು-ಉಪಾಧ್ಯಕ್ಷರ ಮೇಲೆ ವಿಶ್ವಾಸವಿಲ್ಲದಾಗಿದೆ. ಅವರ ವಿರುದ್ಧ ಅವಿಶ್ವಾಸ ನಿರ್ಣಯಿಸಲು ಸಾಮಾನ್ಯ ಸಭೆ ಕರೆಯುವಂತೆ ಮುಖ್ಯಾಧಿಕಾರಿಗಳಿಗೆ ಸಲ್ಲಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ. ಪುರಸಭೆ ಮಾಜಿ ಅಧ್ಯಕ್ಷ ಸುಭಾಸ ಚೌಹಾಣ, ದಯಾನಂದ ಅಕ್ಕಿ, ಸಿದ್ಧಾರ್ಥಗೌಡ ಪಾಟೀಲ, ರಮೇಶ ವನಹಳ್ಳಿ, ವಸಂತಾ ಬಾಗೂರು, ಮೆಹಬೂಬಿ ನೀರಲಗಿ, ಮಮತಾಜ ಗೊಟಗೋಡಿ, ರೇಖಾ ಕಂಕನವಾಡ, ಜಾಫರ್‌ಖಾನ ಪಠಾಣ,
ರೂಪಾ ಬನ್ನಿಕೊಪ್ಪ, ಸುಲ್ಲೇಮಾನ್‌ ತರ್ಲಘಟ್ಟ, ಮುಸ್ತಾಕ ತಹಶೀಲ್ದಾರ್‌, ಗೌಸ್‌ಖಾನ ಮುನಸಿ, ಮೈನೂನಿಸಾ ಲಕ್ಷ್ಮೇಶ್ವರ, ಶೇಖವ್ವ ವಡ್ಡರ, ಸಂಗೀತಾ ವಾಲ್ಮೀಕಿ ಮುಂತಾದ ಸದಸ್ಯರು ತಂಡದಲ್ಲಿದ್ದರು.

ಪರಿಪೂರ್ಣ ಬಹುಮತವಿಲ್ಲದ 23 ಸದಸ್ಯ ಬಲದ ಪುರಸಭೆ ಅಧ್ಯಕ್ಷ ಹುದ್ದೆಗೆ ಸಾಮಾನ್ಯ ಮೀಸಲಾತಿ ಪ್ರಕಟವಾದ ಹಿನ್ನೆಲೆಯಲ್ಲಿ ಶಾಸಕರ ಉಸ್ತುವಾರಿಯಲ್ಲಿ ತಾಲೂಕಿನ ಬಿಜೆಪಿಯ ವಿವಿಧ ಹಿರಿಯರು ಚರ್ಚಿಸಿದ್ದರು. ಸಾಕಷ್ಟು ಜನ ಸದಸ್ಯರ ಪೈಪೋಟಿಯೂ ಇತ್ತು. ಸದ್ಯದ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ ಹಾಗೂ ಮಂಜುನಾಥ ಬ್ಯಾಹಟ್ಟಿ ಆಡಳಿತ ಅವ ಧಿ ಮುಗಿದಿದೆ ಎಂಬುದು ಇತರೆ ಬಿಜೆಪಿ ಸದಸ್ಯರ ವಾದ. ಕೇವಲ 10 ತಿಂಗಳು ಮಾತ್ರ ಸೀಮಿತ ಅಧಿಕಾರದ ಒಳಒಪ್ಪಂದವಾಗಿದೆ ಎಂಬುದು ಹೆಸರು ಹೇಳಲಿಚ್ಛಿಸದ ಬಿಜೆಪಿ ಸದಸ್ಯರ ಪ್ರತಿ ವಾದ.

ಮುಖ್ಯಮಂತ್ರಿ ಬೊಮ್ಮಾಯಿ ಅವರಾಗಲಿ, ತಾಲೂಕು ಬಿಜೆಪಿ ಅಧ್ಯಕ್ಷರಾಗಲಿ ಈ ಬಗ್ಗೆ ಸಷ್ಟನೆ ನೀಡಿಲ್ಲ. ಪಕ್ಷದ ವರಿಷ್ಠರಿಂದ ಯಾವುದೇ ಇಂತಹ ಸೂಚನೆಯಿಲ್ಲ. ನಾನೇಕೆ ರಾಜೀನಾಮೆ ನೀಡಲಿ ಎಂಬುದು ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ ವಾದ. ಯಾವುದೇ ಒಳ ಒಪ್ಪಂದ ನಡೆದಿಲ್ಲ. ಅಂತಃ ಸಾಕ್ಷಿಯಿದ್ದರೆ ಹೇಳಲಿ. ಈಗಾಗಲೇ ಹಲವಾರು ಆಕಾಂಕ್ಷಿಗಳು ಬೆಂಗಳೂರಿಗೆ ತೆರಳಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸುವ ಕುರಿತು ಸೂಚಿಸಲು ಒತ್ತಡ ಹಾಕಿ ಬಂದಿದ್ದಾರೆ ಎನ್ನಲಾಗಿದೆ. ಆದರೆ ಇದ್ಯಾವ ಪ್ರಯತ್ನಗಳು ಫಲಪ್ರದವಾಗದ ಹಿನ್ನೆಲೆಯಲ್ಲಿ ಮತ್ತೆ ಗುಪ್ತ ಸಭೆ ಸೇರಿ ಅವಿಶ್ವಾಸದ ಗೊತ್ತುವಳಿ ಸಹಿ ಪತ್ರ ನೀಡುವ ತೀರ್ಮಾನಕ್ಕೆ ಬಂದಿದ್ದಾರೆ.

Advertisement

ಒಟ್ಟಾರೆ ಇಲ್ಲಿನ ಆಡಳಿತದಲ್ಲಿ ಸದಸ್ಯರು ತಾಳಮೇಳ ಕಳೆದುಕೊಂಡು ವ್ಯವಸ್ಥೆ ಹಳಿ ತಪ್ಪಿದೆ. ಯಾವುದೂ ಅಂದುಕೊಂಡಂತೆ ಕೈಗೂಡುತ್ತಿಲ್ಲವೆಂಬುದು ಅಧ್ಯಕ್ಷ ಸ್ಥಾನದ ಹಲವಾರು ಆಕಾಂಕ್ಷಿಗಳ ಅಳಲು. ಅಧ್ಯಕ್ಷ ಸ್ಥಾನದ ಗೊಂದಲದ ಪ್ರಹಸನ ಸದ್ಯಕ್ಕೆ ಮುಗಿಯುವ ಅಥವಾ ತಿಳಿಯಾಗುವ ಲಕ್ಷಣಗಳಿಲ್ಲ. ನಾ ಕೊಡೆ ನೀ ಬಿಡೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುವ ಮಾತು.

Advertisement

Udayavani is now on Telegram. Click here to join our channel and stay updated with the latest news.

Next