Advertisement

ಶಿಗ್ಗಾವಿ-ಸವಣೂರು: ಬೊಮ್ಮಾಯಿ ವಿರುದ್ಧ ಕಣಕ್ಕಿಳಿಯಲು ಪೈಪೋಟಿ

12:21 AM Feb 23, 2023 | Team Udayavani |

ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿನಿಧಿಸುವ ಶಿಗ್ಗಾವಿ-ಸವಣೂರು ವಿಧಾನಸಭಾ ಕ್ಷೇತ್ರ ಈ ಬಾರಿ ಹೈವೋಲ್ಟೇಜ್ ಕ್ಷೇತ್ರವಾಗಲಿದೆ. ಮುಂಬರುವ ಚುನಾವಣೆಯಲ್ಲಿ ಸಿಎಂ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್‌ ಪಾಳಯದಲ್ಲಿ ಆಕಾಂಕ್ಷಿಗಳ ದೊಡ್ಡ ದಂಡೇ ಸಿದ್ಧವಾಗಿದೆ. ಹೀಗಾಗಿ ಈ ಕ್ಷೇತ್ರ ರಾಜ್ಯದ ಗಮನ ಸೆಳೆಯುವುದು ನಿಶ್ಚಿತವಾಗಿದೆ.

Advertisement

ಶಿಗ್ಗಾವಿ ಕ್ಷೇತ್ರ ನಾಡಿಗೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ ಹಿರಿಮೆ ಹೊಂದಿದೆ. ಈ ಕ್ಷೇತ್ರದಿಂದ ಎಸ್‌.ನಿಜಲಿಂಗಪ್ಪ ಅವರು 1967ರಲ್ಲಿ ಅವಿರೋಧವಾಗಿ ಆಯ್ಕೆಯಾಗಿ ಮುಖ್ಯಮಂತ್ರಿಯಾಗಿದ್ದರು. ಈಗ ಬೊಮ್ಮಾಯಿ ಸಿಎಂ ಆಗಿದ್ದಾರೆ. ಪ್ರಸಕ್ತ ಚುನಾವಣೆಗೆ ಇನ್ನೂ ಒಂದೆರಡು ತಿಂಗಳು ಬಾಕಿ ಇರುವಾಗಲೇ ಕ್ಷೇತ್ರದಲ್ಲಿ ರಾಜಕೀಯದ ಕಾವು ಏರತೊಡಗಿದೆ.

ತವರು ಕ್ಷೇತ್ರಕ್ಕೆ ನೀಡಿದ ಹಲವು ಯೋಜನೆ, ಅಭಿವೃದ್ಧಿಗೆ ಹರಿಸಿದ ಅನುದಾನ ಹಾಗೂ ಸರಕಾರದ ಸಾಧನೆ, ತಳಮಟ್ಟದಲ್ಲಿ ಸಂಘಟನೆ, ಅಧಿಕಾರ ಈ ಎಲ್ಲವನ್ನೂ ಒಟ್ಟಿಗೆ ಸೇರಿಸಿಕೊಂಡು ಸಿಎಂ ಬೊಮ್ಮಾಯಿ ಚುನಾವಣೆ ಎದುರಿಸಲು ಸನ್ನದ್ಧವಾಗಿದ್ದಾರೆ. ಅತ್ತ ಕಾಂಗ್ರೆಸ್‌ ಕೂಡ ಸರಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಸಿಎಂ ಎದುರು ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ಅವರನ್ನು ಕ್ಷೇತ್ರದಲ್ಲಿ ಕಟ್ಟಿಹಾಕಲು ತಂತ್ರ ರೂಪಿಸುತ್ತಿದೆ. ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿಗೆ ವೇದಿಕೆ ಸಿದ್ಧಗೊಳ್ಳಲಿದೆ.

ಸಿಎಂ ವಿರುದ್ಧ ಸ್ಪರ್ಧಿಸಲು ಕ್ಷೇತ್ರದಲ್ಲಿ ಕೆಲವು ಕಾಂಗ್ರೆಸ್‌ ಆಕಾಂಕ್ಷಿಗಳು ಒಂದೆರಡು ವರ್ಷಗಳ ಹಿಂದಿನಿಂದಲೇ ಸ್ಪರ್ಧೆಗೆ ಸಿದ್ಧತೆ ಮಾಡಿಕೊಂಡು ಬಂದಿದ್ದು, ವಿವಿಧ ಜನಸೇವೆ ಹೆಸರಲ್ಲಿ ಜನರನ್ನು ಸೆಳೆಯಲು ಯತ್ನಿಸಿದ್ದಾರೆ. ಕ್ಷೇತ್ರದಲ್ಲಿ ಶಾಸಕರು, ಮಾಜಿ ಶಾಸಕರು, ಮಾಜಿ ವಿಧಾನ ಪರಿಷತ್‌ ಸದಸ್ಯರು, ಮಾಜಿ ಸಂಸದರ ಪುತ್ರ, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ವೈದ್ಯರು ಹೀಗೆ ಹತ್ತು ಹಲವು ವಲಯದ ವ್ಯಕ್ತಿಗಳು ಆಕಾಂಕ್ಷಿಗಳಾಗಿರುವುದು ಸ್ಪರ್ಧಾ ಕಣದ ರಂಗು ಹೆಚ್ಚಿಸಿದೆ.

ಪ್ರಮುಖವಾಗಿ ಸಿಎಂ ಬೊಮ್ಮಾಯಿ ಅವರೇ ಮತ್ತೊಮ್ಮೆ ಈ ಕ್ಷೇತ್ರದಿಂದ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತವಾಗಿದ್ದರಿಂದ ಬಿಜೆಪಿಯಲ್ಲಿ ಟಿಕೆಟ್‌ಗೆ ಪೈಪೋಟಿ ಇಲ್ಲ. ಆದರೆ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಅಧಿಕವಾಗಿರುವುದು ಪಕ್ಷದ ನಾಯಕರಿಗೆ ದೊಡ್ಡ ತಲೆನೋವಾಗಿದೆ. ಪಂಚಮಸಾಲಿ ಹಾಗೂ ಮುಸ್ಲಿಂ ಸಮುದಾಯದವರೇ ಹೆಚ್ಚಿದ್ದು, ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಸಿಎಂ ಬೊಮ್ಮಾಯಿ ಕಟ್ಟಿ ಹಾಕಲು ಕಾಂಗ್ರೆಸ್‌ ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದೆ. ಜೆಡಿಎಸ್‌ ಈ  ಕ್ಷೇತ್ರದಲ್ಲಿ ನಗಣ್ಯ.

Advertisement

ಕಾಂಗ್ರೆಸ್‌ ಆಕಾಂಕ್ಷಿಗಳು: ಕಾಂಗ್ರೆಸ್‌ನಲ್ಲಿ ಪ್ರಸ್ತುತ 14 ಮಂದಿ ಪ್ರಮುಖ ಆಕಾಂಕ್ಷಿಗಳ ಹೆಸರು ಕೇಳಿಬರುತ್ತಿದೆ. ಅದರಲ್ಲಿ ಪ್ರಮುಖವಾಗಿ ಅಜ್ಜಂಪೀರ್‌ ಖಾದ್ರಿ (ಮಾಜಿ ಶಾಸಕ), ಸೋಮಣ್ಣ ಬೇವಿನಮರದ (ಮಾಜಿ ವಿಧಾನ ಪರಿಷತ್‌ ಸದಸ್ಯ), ಶಶಿಧರ ಯಲಿಗಾರ(ಸಮಾಜ ಸೇವಕ), ಷಣ್ಮುಖ ಶಿವಳ್ಳಿ(ಮಾಜಿ ಸಚಿವ ದಿ|ಸಿ.ಎಸ್‌.ಶಿವಳ್ಳಿ ಅವರ ಸಹೋದರ), ಸಂಜೀವಕುಮಾರ ನೀರಲಗಿ(ಹಾವೇರಿ ನಗರಸಭೆ ಅಧ್ಯಕ್ಷ), ಪ್ರೇಮಾ ಪಾಟೀಲ(ಜಿ.ಪಂ. ಮಾಜಿ ಅಧ್ಯಕ್ಷೆ), ರಾಜೇಶ್ವರಿ ಪಾಟೀಲ(ಕಾಂಗ್ರೆಸ್‌ ಮಹಿಳಾ ಮುಖಂಡರು), ಶಾಕೀರ ಸನದಿ(ಮಾಜಿ ಸಂಸದ ಪ್ರೊ|ಐ.ಜಿ.ಸನದಿ ಪುತ್ರ), ಕಾಂಗ್ರೆಸ್‌ ಮುಖಂಡರಾದ ಯಾಸೀರಖಾನ್‌ ಪಠಾಣ, ನೂರಮ್ಮದ್‌ ಮಳಗಿ, ಎಫ್‌.ಜಿ.ಪಾಟೀಲ, ಎಸ್‌.ವಿ.ಪಾಟೀಲ ಅವರ ಹೆಸರುಗಳು ಕೇಳಿಬರುತ್ತಿವೆ.

ಕಾಂಗ್ರೆಸ್‌ಗೆ ಬಂಡಾಯದ ಭಯ
ಕಳೆದ 3 ಚುನಾವಣೆಯಲ್ಲಿ ಬೊಮ್ಮಾಯಿ ಅವರಿಗೆ ಪೈಪೋಟಿ ನೀಡಿದ್ದ ಕಾಂಗ್ರೆಸ್‌ನ ಅಜ್ಜಂಪೀರ್‌ ಖಾದ್ರಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ. ಸತತ 4 ಸೋಲಿನಿಂದ ಕಂಗೆಟ್ಟಿರುವ ಖಾದ್ರಿ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾರೆ. ಮುಸ್ಲಿಂ ಪ್ರಾಬಲ್ಯ ಇರುವುದರಿಂದ ಕಾಂಗ್ರೆಸ್‌ಗೆ ಖಾದ್ರಿ ಬಿಟ್ಟು ಚುನಾವಣೆ ಎದುರಿಸುವ ಪರಿಸ್ಥಿತಿ ಇಲ್ಲ. ಮತ್ತೊಂದೆಡೆ ಸತತ ನಾಲ್ಕು ಬಾರಿ ಸೋತವರಿಗೆ ಟಿಕೆಟ್‌ ನೀಡಲು ಪಕ್ಷದಲ್ಲಿಯೇ ವಿರೋಧ ವ್ಯಕ್ತವಾಗುತ್ತಿದೆ. ಖಾದ್ರಿಗೆ ಕೈ ಟಿಕೆಟ್‌ ಸಿಗದಿದ್ದರೆ ಬಂಡಾಯ ಎದ್ದು ಜೆಡಿಎಸ್‌ ಅಥವಾ ಪಕ್ಷೇತರರಾಗಿ ಸ್ಪರ್ಧಿಸುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಕಾಂಗ್ರೆಸ್‌ಗೆ ಬಂಡಾಯದ ಭಯ ಕಾಡುತ್ತಿದೆ. ಜತೆಗೆ ಪಕ್ಷದ ಒಳಜಗಳ ಬೊಮ್ಮಾಯಿ ಅವರಿಗೆ ವರವಾಗಿ ಪರಿಣಮಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

-ವೀರೇಶ ಮಡ್ಲೂರ

Advertisement

Udayavani is now on Telegram. Click here to join our channel and stay updated with the latest news.

Next