ಹಾನಗಲ್ಲ: ಬಹುದಿನಗಳಿಂದ ಹಾನಗಲ್ಲ-ಶಿವಮೊಗ್ಗ ರಸ್ತೆಯಲ್ಲಿ ವಾಹನ ನಿಲುಗಡೆ ಹಾಗೂ ವಾರದ ಸಂತೆಯಿಂದ ಕಿರಿಕಿರಿ ಅನುಭವಿಸುತ್ತಿದ್ದ ಸಾರ್ವಜನಿಕರು, ವಾಹನ ಸವಾರರಿಗೆ ಶುಕ್ರವಾರ ರಿಲೀಫ್ ಸಿಕ್ಕಿದೆ. ಪ್ರತಿ ಶುಕ್ರವಾರ ವಾರದ ಸಂತೆಯಂದು
ಹಾನಗಲ್ಲ-ಶಿವಮೊಗ್ಗ ರಸ್ತೆಗೆ ಹೊಂದಿಕೊಂಡು ತಾರಕೇಶ್ವರ ದೇವಸ್ಥಾನಕ್ಕೆ ಹೋಗುವ ಅಡ್ಡ ರಸ್ತೆಯಲ್ಲಿ ತರಕಾರಿ ಸಹಿತ ಗೃಹ ಬಳಕೆ ವಸ್ತುಗಳ ವ್ಯಾಪಾರ ನಡೆಸಿಕೊಂಡು ಬಂದಿದ್ದರು.
ಇದರಿಂದ ವಾಹನ ಸವಾರರಿಗೆ, ಪಾದಚಾರಿಗಳಿಗೆ ಕಿರಿಕಿರಿ ಉಂಟಾಗಿತ್ತು. ಹಲವಾರು ಬಾರಿ ಸಂಬಂಧಿಸಿದ ಪುರಸಭೆಗೆ ಮನವಿ ಮಾಡಿದರೂ ವಾರದ ಸಂತೆ ಸ್ಥಳಾಂತರಿಸಲು ಸಾಧ್ಯವಾಗಿರಲಿಲ್ಲ.
ಇತ್ತೀಚೆಗೆ ಇದೇ ಕ್ರಾಸ್‌ನಲ್ಲಿ ಬಾಲಕನೋರ್ವ ಅಪಘಾತದಲ್ಲಿ ಮೃತಪಟ್ಟಿದ್ದ. ಹೀಗಾಗಿ, ಗ್ರಾಮಸ್ಥರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಪುರಸಭೆ ಕಳೆದ ಬುಧವಾರ ಸಭೆ ನಡೆಸಿ ಸಂತೆ ಮಾರುಕಟ್ಟೆಯನ್ನು ಮೊದಲಿದ್ದ ಹಾಗೆ ಸ್ಥಳಾಂತರಿಸಲು ನಿರ್ಧಸಿತ್ತು. ಆದಾಗ್ಯೂ, ವ್ಯಾಪಾರಸ್ಥರ ವಿರೋಧವಿತ್ತು. ಗುರುವಾರ ದಿನ ಮತ್ತೆ ಪುರಸಭೆ ವಾಹನದ ಮೂಲಕ ಸಂತೆ ಮಾರುಕಟ್ಟೆ ಸ್ಥಳಾಂತರಿಸಿದ ಬಗ್ಗೆ ಪ್ರಚಾರ ಮಾಡಿತ್ತು.
ಶುಕ್ರವಾರ ಬೆಳಿಗ್ಗಿನಿಂದ ಸಿಪಿಐ ಎಸ್.ಆರ್.ಶ್ರೀಧರ, ಪಿಎಸ್‌ಐ ಶರಣಬಸಪ್ಪ ಕಾಂದೆ ಹಾಗೂ ಪೊಲೀಸ್ ಸಿಬ್ಬಂದಿ ಅವರು ಸ್ಥಳದಲ್ಲೇ ಇದ್ದು ಅಂಗಡಿಗಳನ್ನು ಹಚ್ಚದಂತೆ ನಿಗಾ ವಹಿಸಿ ಬೇರೆ ಸ್ಥಳಗಳನ್ನು ಗುರುತಿಸಿ ಅಂಗಡಿ ಹಚ್ಚುವಂತೆ ಮನವಿ ಮಾಡಿದರು. ಇವರೊಂದಿಗೆ ಹಾನಗಲ್ಲ ಟೌನ್ ವೆಂಡಿಂಗ್ ಕಮಿಟಿ ಸದಸ್ಯ ಮಹ್ಮದಗೌಸ ಸವಣೂರ, ನಾಗೇಂದ್ರ ತುಮರಿಕೊಪ್ಪ ಸೇರಿದಂತೆ ಹಿರಿಯ ವ್ಯಾಪಾರಸ್ಥರು ಮಧ್ಯಸ್ಥಿಕೆ ವಹಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಂಗಡಿಗಳನ್ನು ಹಚ್ಚಿ ವ್ಯಾಪಾರ
ಮಾಡಲು ಅನುಕೂಲ ಮಾಡಿಕೊಡಲಾಯಿತು.
ನಂತರ ಎಂದಿನಂತೆ ವ್ಯಾಪಾರ ವಹಿವಾಟುಗಳು ನಡೆದವು. ಆದರೆ, ಖರೀದಿ ಮಾಡುವ ಗ್ರಾಹಕರಿಗೆ ಸ್ವಲ್ಪ ಕಿರಿಕಿರಿ ಆಗಿದೆ. ಮುಂದಿನ ವಾರ ಏನಾಗುವುದೋ ಕಾದು ನೋಡಬೇಕಾಗಿದೆ.