ಮುಂಬಯಿ:1993ರ ಮುಂಬಯಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ವಿಶೇಷ ಟಾಡಾ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿ ಯಾಗಿರುವ ಅಬೂ ಸಲೇಂ ತನ್ನನ್ನು ಉತ್ತರಪ್ರದೇಶ ಜೈಲಿಗೆ ಸ್ಥಳಾಂತರಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ವಿಶೇಷ ಟಾಡಾ ನ್ಯಾಯಾಲಯ ತಳ್ಳಿಹಾಕಿದ ಬಳಿಕ ಇದೀಗ ಸಲೇಂ ಇದೇ ಮನವಿಯನ್ನು ಮುಂದಿಟ್ಟು ಕಾರಾಗೃಹ ಇಲಾಖೆ ಮಹಾ ನಿರ್ದೇಶಕ, ಕಾರಾಗೃಹ ಇಲಾಖೆಯ ಮಹಾನಿರೀಕ್ಷಕ ಮತ್ತು ಟಲೋಜಾ ಜೈಲಿನ ಅಧೀಕ್ಷಕರಿಗೆ ಪತ್ರ ಬರೆದಿದ್ದಾನೆ. ಜೈಲಿನಲ್ಲಿನ ತನ್ನ ಸನ್ನಡತೆ ಮತ್ತು ನನ್ನ ಕುಟುಂಬ ಉತ್ತರಪ್ರದೇಶದಲ್ಲಿ ರುವುದರಿಂದ ನನ್ನನ್ನು ಉತ್ತರಪ್ರದೇಶದ ಜೈಲಿಗೆ ಸ್ಥಳಾಂತರಿಸುವಂತೆ ಸಲೇಂ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾನೆ. ಉತ್ತರ ಪ್ರದೇಶದಲ್ಲಿ ನನಗೆ ಯಾರೂ ವೈರಿ ಗಳಿಲ್ಲ ಎಂದೂ ಆತ ತನ್ನ ಪತ್ರದಲ್ಲಿ ವಿಶೇಷವಾಗಿ ಉಲ್ಲೇಖೀಸಿದ್ದಾನೆ.
ಈ ಹಿಂದೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮನವಿಯಲ್ಲಿ ಅಬೂ ಸಲೇಂ ನಾನು ಸ್ಥಳೀಯ ಜೈಲಿನಲ್ಲಿ ಅಭದ್ರತೆಯ ಭೀತಿಯನ್ನು ಎದುರಿಸುತ್ತಿರುವುದಾಗಿ ಹೇಳಿಕೊಂಡಿದ್ದನು.
ಜೈಲು ಅಧಿಕಾರಿಗಳು ನನ್ನ ವಿರುದ್ಧ ಯಾವುದೇ ವ್ಯತಿರಿಕ್ತವಾದ ದೂರುಗಳನ್ನು ನೀಡಿಲ್ಲ. ನಾನು ನ್ಯಾಯಾಂಗ ಬಂಧನದಲ್ಲಿದ್ದ ಸಂದರ್ಭದಲ್ಲಿ ವಿಚಾರಣಾ ನ್ಯಾಯಾಲಯ ನನಗೆ ಮನೆ ಊಟ,ಟೇಬಲ್ ಫ್ಯಾನ್,ಡಂಬೆಲ್ಸ್ ಮತ್ತಿತರ ಸೌಲಭ್ಯಗಳನ್ನು ಒದಗಿಸಿತ್ತು.ಆದರೆ ಇವೆಲ್ಲವನ್ನೂ ನಾನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿದ್ದು ಇವುಗಳಿಗೆ ಯಾವುದೇ ಹಾನಿ ಉಂಟು ಮಾಡಿರಲಿಲ್ಲ. ನಾನು ಉತ್ತರಪ್ರದೇಶದ ಅಜಾಮ್‌ಗಢದ ಖಾಯಂ ನಿವಾಸಿಯಾಗಿದ್ದು ಇಲ್ಲಿಯೇ ನನ್ನ ಕುಟುಂಬದ ಇತರೆ ಸದಸ್ಯರು ಮತ್ತು ಸಂಬಂಧಿಕರು ವಾಸವಾಗಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ನನ್ನನ್ನು ಉತ್ತರಪ್ರದೇಶದ ಜೈಲಿಗೆ ಸ್ಥಳಾಂತರಿಸುವಂತೆ ಅಬೂ ಸಲೇಂ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ವಿನಂತಿಸಿಕೊಂಡಿದ್ದಾನೆ.
ಒಂದು ವೇಳೆ ನನ್ನನ್ನು ಉತ್ತರಪ್ರದೇಶ ಜೈಲಿಗೆ ಸ್ಥಳಾಂತರಿಸಿದ್ದೇ ಆದಲ್ಲಿ ನನ್ನ ಕುಟುಂಬದ ಸದಸ್ಯರಿಗೆ ನನ್ನ ಭೇಟಿ ಸುಲಭಸಾಧ್ಯವಾಗಲಿದೆ ಮಾತ್ರವಲ್ಲದೆ ನನ್ನ ಕಾನೂನು ಹೋರಾಟಕ್ಕೂ ಸಹಾಯಕವಾಗಲಿದೆ ಎಂದಾತ ತಿಳಿಸಿದ್ದಾನೆ.