ಶಿಡ್ಲಘಟ್ಟ: ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ, ಕೋಳಿಫಾರಂ ಶೆಡ್ ಕುಸಿದು ಬಿದ್ದು, ರೈತ ಗಾಯಗೊಂಡಿರುವ ಘಟನೆ ತಾಲೂಕಿನ ಜೆ. ವೆಂಕಟಾಪುರ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಜೆ. ವೆಂಕಟಾಪುರ ಗ್ರಾಮದಲ್ಲಿ ಲಕ್ಷಾಂತರ ರೂ. ವೆಚ್ಚದ ಕೋಳಿ ಫಾರಂ ಶೆಡ್, ಮಳೆಗೆ ಸಂಪೂರ್ಣವಾಗಿ ನೆಲ ಕಚ್ಚಿದ್ದು, ಈ ವೇಳೆ ಶೆಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ರೈತ ಗಾಯಗೊಂಡಿದ್ದಾರೆ. ರೈತನನ್ನು ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಭಾರಿ ಮಳೆಯಿಂದಾಗಿ ತಾಲೂಕಿನ ಹಲವೆಡೆ ಬೆಳೆಗಳಿಗೆ ಹಾನಿಯಾಗಿದ್ದು, ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಅಕಾಲಿಕ ಹಾಗೂ ಆಲಿಕಲ್ಲಿನ ಮಳೆಯಿಂದಾಗಿ ರೈತರು ಅನೇಕ ರೀತಿಯ ಸಂಕಷ್ಟವನ್ನು ಎದುರಿಸುವಂತಾಗಿದೆ.
ಇದನ್ನೂ ಓದಿ:ಮದುವೆ ಆಗದೇ ನನ್ನ ಪಾಡಿಗೆ ಇದ್ದು ಬಿಡುತ್ತೇನೆ: ಆ್ಯಸಿಡ್ ನಾಗ ಕಣ್ಣೀರು
ಶನಿವಾರದಂದು ರಾತ್ರಿ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಆಲಿಕಲ್ಲು ಸಹಿತ ಸುರಿದ ಮಳೆಯ ಆರ್ಭಟದಿಂದ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೂಡಲೇ ಸರ್ಕಾರ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ರೈತರಿಗೆ ಬೆಳೆ ನಷ್ಟ ಪರಿಹಾರವನ್ನು ನೀಡಬೇಕೆಂದು ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಆಗ್ರಹಿಸಿದ್ದಾರೆ.