Advertisement
ಮಳೆಗಾಲದಲ್ಲಿ ನೀರಿನಲ್ಲಿ ಮುಳುಗಿ ಬೇಸಗೆ ಕಾಲದಲ್ಲಿ ತನ್ನ ನೈಜ್ಯ ಸ್ವರೂಪಕ್ಕೆ ಮರಳುವ ಚರ್ಚನ್ನು ನೀವು ಎಲ್ಲಿಯಾದರೂ ಕಂಡಿದ್ದೀರಾ.. ಇಲ್ಲವಾದರೆ ಹಾಸನ ಜಿಲ್ಲೆಗೊಮ್ಮೆ ಭೇಟಿ ನೀಡಿ, ಇಲ್ಲಿ ಅದೆಷ್ಟೋ ಧಾರ್ಮಿಕ, ಐತಿಹಾಸಿಕ, ವೈಶಿಷ್ಟ್ಯಗಳನ್ನು ಹೊಂದಿರುವ ತಾಣಗಳು ಕಾಣಸಿಗುತ್ತವೆ ಇವುಗಳಲ್ಲಿ ಹೇಮಾವತಿ ನದಿ ದಡದಲ್ಲಿರುವ ಶೆಟ್ಟಿಹಳ್ಳಿ ರೋಸರಿ ಚರ್ಚ್ ಕೂಡಾ ಒಂದು.
Related Articles
Advertisement
ನಿರ್ಗತಿಕರ ಆಶ್ರಯತಾಣ/ ವೈದ್ಯಕೀಯ ಸೇವಾ ಕೇಂದ್ರವಾಗಿದ್ದ ಚರ್ಚ್ಶೆಟ್ಟಿ ಹಳ್ಳಿ ರೋಸರಿ ಚರ್ಚ್ ಹಲವು ವಿಶೇಷತೆಗಳನ್ನು ಹೊಂದಿದೆ 1823 ರಲ್ಲಿ ಈ ಭಾಗದಲ್ಲಿ ಭೀಕರ ಬರಗಾಲ ಆವರಿಸಿತ್ತಂತೆ ಆ ಸಮಯದಲ್ಲಿ ಇದೆ ಚರ್ಚ್ ಇಲ್ಲಿನ ಜನರಿಗೆ ಆಶ್ರಯತಾಣವಾಗಿ ಮಾರ್ಪಾಡಾಗಿತ್ತಂತೆ, ಅಷ್ಟು ಮಾತ್ರವಲ್ಲದೆ 1860ರಲ್ಲಿ ಈ ಚರ್ಚ್ ನ ಧರ್ಮಗುರುಗಳು ಈ ಭಾಗದ ಜನರ ಆರೋಗ್ಯದ ದೃಷ್ಟಿಯಿಂದ ರೋಗಿಗಳ ಶುಸ್ರೂಷೆಗಾಗಿ ಚರ್ಚ್ ನಲ್ಲೆ ಆಸ್ಪತ್ರೆಯನ್ನೂ ಆರಂಭಿಸಿದ್ದರಂತೆ ಅರೋಗ್ಯ ಸೇವೆ ಜೊತೆಗೆ ಸಮಾಜಸೇವೆಗಳ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದ್ದ ಈ ಚರ್ಚ್ ಗೆ ವಿದೇಶಿ ರಾಯಭಾರಿಗಳು ಅಂದಿನ ಕಾಲದಲ್ಲಿ ಭೇಟಿ ನೀಡುತ್ತಿದ್ದರಂತೆ. ಚರ್ಚ್ ಮುಳುಗಿದ ಹಿನ್ನೆಲೆ
1960ನೇ ಇಸವಿಯಲ್ಲಿ ಹಾಸನ, ತುಮಕೂರು, ಮಂಡ್ಯ ಜಿಲ್ಲೆಯ ಭಾಗದ ಜನರಿಗೆ ನೀರಿನ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಹಾಸನದ ಜೀವನದಿಯಾದ ಹೇಮಾವತಿಗೆ ಗೋರೂರು ಬಳಿ ಆಣೆಕಟ್ಟು ನಿರ್ಮಾಣ ಮಾಡಲಾಯಿತು, ಈ ಆಣೆಕಟ್ಟು ನಿರ್ಮಾಣವಾದಾಗಿನಿಂದ ಈ ಭಾಗದ ಸುಮಾರು ಇಪ್ಪತ್ತೆಂಟು ಹಳ್ಳಿಗಳು ಈ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಯಿತು, ಆ 28 ಹಳ್ಳಿಗಳಲ್ಲಿ ಹೇಮಾವತಿ ನದಿ ದಡದಲ್ಲಿ ನಿರ್ಮಾಣವಾಗಿದ್ದ ಶೆಟ್ಟಿಹಳ್ಳಿ ಚರ್ಚ್ ಕೂಡಾ ಸೇರಿತ್ತು ಹಾಗಾಗಿ ಮಳೆಗಾಲದಲ್ಲಿ ಜಲಾಯಶ ತುಂಬಿದಾಗ ಶೆಟ್ಟಿಹಳ್ಳಿಯಲ್ಲಿರುವ ರೋಸರಿ ಚರ್ಚ್ ಸೇರಿ ಸುತ್ತಮುತ್ತಲಿನ ಹಳ್ಳಿಗಳು ಮುಳುಗಡೆಯಾಗುತ್ತಿತ್ತು. ಅದೇ ಪ್ರಕಾರ ಪ್ರತಿ ವರ್ಷ ಮಳೆಗಾಲ ಬಂದಾಗ ಜಲಾಶಯದಲ್ಲಿ ನೀರಿನ ಪ್ರಮಾಣ ಏರಿಕೆಯಾದಂತೆ ಶೆಟ್ಟಿಹಳ್ಳಿ ಚರ್ಚ್ ನ ಮುಕ್ಕಾಲು ಭಾಗ ಮುಳುಗಡೆಯಾಗಿ ಟೈಟಾನಿಕ್ ಹಡಗಿನಂತೆ ಕಾಣುತ್ತದೆ.
1800 ರ ಕಾಲದಲ್ಲಿ ಪವಿತ್ರ ಸ್ಥಳವಾಗಿದ್ದ ಚರ್ಚ್ ಇಂದು ಪ್ರವಾಸಿಗರ ನೆಚ್ಚಿನ ತಾಣವಾಗಿ ಮಾರ್ಪಾಡಾಗಿದೆ. ಮಳೆಗಾಲದಲ್ಲಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗುವ ಚರ್ಚ್ ನೋಡಲು ಪ್ರವಾಸಿಗರು ತೆಪ್ಪದ ಮೂಲಕ ತೆರಳಬೇಕು ಅದೇ ಬೇಸಿಗೆ ಬಂತೆಂದರೆ ನೀರಿನ ಪ್ರಮಾಣ ಕಡಿಮೆಯಾಗಿ ಪ್ರವಾಸಿಗರು ಚರ್ಚ್ ಬಳಿಗೆ ತೆರಳಬಹುದಾಗಿದೆ. ಗೋಥಿಕ್ ವಾಸ್ತುಶಿಲ್ಪದಿಂದ ನಿರ್ಮಾಣಗೊಡಿರುವ ಈ ಚರ್ಚ್ ನೋಡುಗರ ಕಣ್ಮನ ಸೆಳೆಯುವಂತಿದೆ. ಕನ್ನಡ, ತಮಿಳು, ತೆಲುಗು ಸೇರಿದಂತೆ ಹಲವಾರು ಸಿನಿಮಾಗಳ ಚಿತ್ರೀಕರಣವು ಈ ಚರ್ಚ್ ನಲ್ಲಿ ನಡೆದಿದೆ, ಅಷ್ಟೇ ಅಲ್ಲದೆ ಪ್ರಿ ವೆಡ್ಡಿಂಗ್ ಶೂಟ್ ಗಳಿಗೆ ಇದು ಹೇಳಿಮಾಡಿಸಿದ ತಾಣವಾಗಿದೆ. ಹಾಸನ ಭಾಗದಲ್ಲಿರುವ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಶೆಟ್ಟಿ ಹಳ್ಳಿ ಚರ್ಚ್ ಕೂಡ ಸೇರಿಕೊಂಡಿದೆ. ಮಳೆಗಾಲದಲ್ಲಿ ತಿಳಿ ನೀರಿನಿಂದ ಆವರಿಸಿಕೊಂಡಿರುವ ಚರ್ಚ್ ನೋಡುವಾಗ ಹಡಗು ತೇಲಿದಂತೆ ಭಾಸವಾಗುತ್ತದೆ. ಅದೇ ಬೇಸಗೆ ಕಾಲದಲ್ಲಿ ಚರ್ಚ್ ನ ನೈಜ್ಯ ಸ್ವರೂಪ ಗೋಚರವಾಗುತ್ತದೆ. ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿರುತ್ತದೆ. ಈ ಭಾಗದಲ್ಲಿ ಸಂಚರಿಸುವ ಪ್ರವಾಸಿಗರು ಶೆಟ್ಟಿಹಳ್ಳಿಗೆ ಭೇಟಿ ನೀಡಿ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ವೀಕ್ಷಣೆ ಮಾಡಿ ಫೋಟೋ ಕ್ಲಿಕ್ಕಿಸಿಕೊಂಡು ಮುಂದೆ ಸಾಗುತ್ತಾರೆ. ಅಂದಹಾಗೆ ನೀವು ಈ ಶೆಟ್ಟಿಹಳ್ಳಿಗೆ ಭೇಟಿ ನೀಡಿಲ್ಲವಾಗಿದ್ದರೆ ಒಮ್ಮೆ ಭೇಟಿ ನೀಡಿ. ಮಳೆಗಾಲದಲ್ಲಿ ಭೇಟಿ ನೀಡಿದರೆ ಚರ್ಚ್ ಮುಳುಗಿದ ಸ್ಥಿತಿಯಲ್ಲಿ ಕಂಡುಬರುತ್ತದೆ, ಅದೇ ಬೇಸಿಗೆಯಲ್ಲಿ ಭೇಟಿ ನೀಡಿದರೆ ಚರ್ಚ್ ನ ನೈಜ್ಯ ಸ್ವರೂಪವನ್ನು ಕಾಣಬಹುದಾಗಿದೆ.
ಉಡುಪಿಯಿಂದ ಶೆಟ್ಟಿ ಹಳ್ಳಿಗೆ 220 ಕಿಲೋಮೀಟರ್ ದೂರವಿದ್ದರೆ ಬೆಂಗಳೂರಿನಿಂದ 200 ಕಿಲೋಮೀಟರ್ ದೂರವಿದೆ. ಹಾಸನ ಮಾರ್ಗವಾಗಿ ಶೆಟ್ಟಿಹಳ್ಳಿಗೆ ಸಾಗಬಹುದು.
ಉಡುಪಿ ಕಡೆಯಿಂದ ಹೋಗುವವರು ಬೆಳ್ತಂಗಡಿಯಿಂದ ಮೂಡಿಗೆರೆ ಮಾರ್ಗವಾಗಿಯೂ ಸಾಗಬಹುದು ಇಲ್ಲವಾದರೆ ಬೆಳ್ತಂಗಡಿಯಿಂದ ಕೊಕ್ಕಡ ಗುಂಡ್ಯ ಶಿರಾಡಿ ಘಾಟಿ ಮೂಲಕವೂ ಸಾಗಬಹುದು. ಸುಧೀರ್ ಎ. ಪರ್ಕಳ