ಬೆಳ್ತಂಗಡಿ: ಅತೀ ದೊಡ್ಡ ವಿಧಾನಸಭಾ ಕ್ಷೇತ್ರವಾಗಿರುವ ಬೆಳ್ತಂಗಡಿ ತಾಲೂಕಿನಲ್ಲಿ ಬಡ ವರ್ಗದ ಕಲ್ಯಾಣಕ್ಕಾಗಿ ಪ್ರತೀ ಮೂರು ತಿಂಗಳಿಗೊಮ್ಮೆ ದೊಡ್ಡ ಪ್ರಮಾಣದಲ್ಲಿ ಹಕ್ಕುಪತ್ರ ವಿತರಿಸಲು ಆದ್ಯತೆ ನೀಡುತ್ತಾ ಬರಲಾಗಿದೆ. ಈ ಮೂಲಕ ಶ್ರಮಿಕ ವರ್ಗಕ್ಕೆ ತಮ್ಮ ಸ್ವಂತ ನಿವೇಶನದಡಿ ಬದುಕು ಕಟ್ಟಿಕೊಡುವ ಕೆಲಸವಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಂತೆ ಕಂದಾಯ ಇಲಾಖೆಯಡಿ ಬೆಳ್ತಂಗಡಿ ತಾಲೂಕಿನ ಅರ್ಹ ಫಲಾನುಭವಿಗಳಿಗೆ ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಎ.18 ರಂದು 94ಸಿ ಹಾಗೂ 94 ಸಿಸಿ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.
ಬೆಳ್ತಂಗಡಿ ತಾಲೂಕಿನ 48 ಗ್ರಾ.ಪಂ. ಗಳ ಪೈಕಿ 44 ಗ್ರಾ.ಪಂ. ಬಿಜೆಪಿ ಆಡಳಿತ ಹೊಂದಿದೆ. ಇಷ್ಟು ಗ್ರಾ.ಪಂ. ಅಧ್ಯಕ್ಷರು ಬಡವರ್ಗದ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ನರೇಂದ್ರ ಮೋದಿಯವರ ಸರಕಾರದ ಉಜ್ವಲ ಯೋಜನೆಯಡಿ ತಾಲೂಕಿನಲ್ಲಿ 18,000 ಮನೆಗಳಿಗೆ ಉಜ್ವಲ ಗ್ಯಾಸ್ ಯೋಜನೆ ಒದಗಿಸಿದೆ. ಕೃಷಿ ಸಮ್ಮಾನ, ಆಯುಷ್ಮಾನ್ ಭಾರತ್ ಮೂಲಕ ಸುಸ್ಥಿರ ಸಮಾಜ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರದಲ್ಲಿ ಪ.ಪಂ. ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಮಚ್ಚಿನ ಗ್ರಾ.ಪಂ. ಅಧ್ಯಕ್ಷ ಚಂದ್ರಕಾಂತ್, ಕುಕ್ಕೇಡಿ ಗ್ರಾ.ಪಂ. ಅಧ್ಯಕ್ಷ ಜನಾರ್ದನ್, ಇಂದಬೆಟ್ಟು ಗ್ರಾ.ಪಂ. ಅಧ್ಯಕ್ಷ ಆನಂದ ಅಡೀಲು, ಕಳೆಂಜ ಗ್ರಾ.ಪಂ. ಅಧ್ಯಕ್ಷ ಪ್ರಸನ್ನ, ಕೊಯ್ಯೂರು ಗ್ರಾ.ಪಂ. ಅಧ್ಯಕ್ಷ ಜಗನ್ನಾಥ್, ಪಡಂಗಡಿ ಗ್ರಾ.ಪಂ. ಅಧ್ಯಕ್ಷ ಮೀನಾಕ್ಷಿ, ಕೊಕ್ಕಡ ಗ್ರಾ.ಪಂ. ಅಧ್ಯಕ್ಷ ಯೋಗೀಶ್, ಕಲ್ಮಂಜ ಗ್ರಾ.ಪಂ. ಅಧ್ಯಕ್ಷ ಶ್ರೀಧರ್, ಬಳಂಜ ಗ್ರಾ.ಪಂ. ಅಧ್ಯಕ್ಷ ಹೇಮಂತ್, ಮಾಲಾಡಿ ಗ್ರಾ.ಪಂ. ಅಧ್ಯಕ್ಷೆ ಬೀಬಿ ಸುಸಾನ, ಪಟ್ರಮೆ ಗ್ರಾ.ಪಂ. ಉಪಾಧ್ಯಕ್ಷ ಯತೀಶ್, ವೇಣೂರು ಗ್ರಾ.ಪಂ. ಅಧ್ಯಕ್ಷ ನೇಮಯ್ಯ ಕುಲಾಲ್ ಉಪಸ್ಥಿತರಿದ್ದರು.
ಅಭಿವೃದ್ಧಿಗೆ 1ಸಾವಿರ ಕೋ.ರೂ.ಅನುದಾನ ಅಭಿವೃದ್ಧಿ
ವಿಚಾರವಾಗಿ ಕಳೆದ ನಾಲ್ಕು ವರ್ಷಗಳಲ್ಲಿ 1,000 ಕೋ. ರೂ. ಗೂ ಅಧಿಕ ಅನುದಾನ ತಾಲೂಕಿಗೆ ಒದಗಿಸುವ ಕೆಲಸವಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ 40ಕ್ಕೂ ಅಧಿಕ ಕಿಂಡಿ ಅಣೆಕಟ್ಟು ನಿರ್ಮಾಣವಾಗುವ ಮೂಲಕ 12 ಸಾವಿರಕ್ಕೂ ಅಧಿಕ ಬೋರ್ ವೆಲ್ ರೀಚಾರ್ಜ್ ಆಗಲಿದೆ. ಕೃಷಿಕರಿಗೆ ಅವಶ್ಯ ನೀರಾವರಿ ವ್ಯವಸ್ಥೆ ಒದಗಿಸುವ ಮಹತ್ವದ ಕೆಲಸವಾಗಿದೆ. ಉಜಿರೆ -ಗುರುವಾಯನಕೆರೆ ಟ್ರಾಫಿಕ್ ಸಮಸ್ಯೆ ನೀಗಿಸಲು ಪೂಂಜಾಲಕಟ್ಟೆಯಿಂದ ಚಾರ್ಮಾಡಿ ವರೆಗೆ ದ್ವಿಪಥ ರಸ್ತೆ ನಿರ್ಮಾಣವಾಗಿದೆ. ಅದರಲ್ಲಿ ಗುರುವಾಯನಕೆರೆಯಿಂದ ನಿಡಿಗಲ್ ಸೇತುವೆವರೆಗೆ ಡಿವೈಡರ್ ಇರುವ ಕಾಂಕ್ರೀಟ್ ದ್ವಿಪಥ ರಸ್ತೆ ನಿರ್ಮಾಣವಾಗಲಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.