Advertisement

ಭಾರತ-ಪಾಕ್ ಯುದ್ಧಕ್ಕೆ ಮುಹೂರ್ತ ನಿಗದಿಪಡಿಸಿದ ಪಾಕಿಸ್ತಾನ! ಸಚಿವ ರಶೀದ್ ಘೋಷಿಸಿದ್ದೇನು?

11:09 AM Aug 29, 2019 | Nagendra Trasi |

ರಾವಲ್ಪಿಂಡಿ:ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿರುವ ಭಾರತದ ವಿರುದ್ಧ ಕಿಡಿಕಾರುತ್ತಿದ್ದ ಪಾಕಿಸ್ತಾನ ಎಲ್ಲಾ ವಿಧದ ಕಸರತ್ತು ನಡೆಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಖಭಂಗ ಅನುಭವಿಸಿದ ಬೆನ್ನಲ್ಲೇ ಇದೀಗ ಪಾಕ್ ಮತ್ತು ಭಾರತದ ನಡುವೆ ಅಕ್ಟೋಬರ್ ಅಥವಾ ಸೆಪ್ಟೆಂಬರ್ ನಲ್ಲಿ ಯುದ್ಧ ನಡೆಯಲಿದೆ ಎಂದು ಪಾಕಿಸ್ತಾನದ ರೈಲ್ವೆ ಸಚಿವ ಶೇಕ್ ರಶೀದ್ ಅಹ್ಮದ್ ಬುಧವಾರ ಭವಿಷ್ಯ ನುಡಿದಿದ್ದಾರೆ.

Advertisement

ತವರು ನಗರ ರಾವಲ್ಪಿಂಡಿಯಲ್ಲಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ರಶೀದ್ ಅಹ್ಮದ್, ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಅಂತಿಮ ಕಾಲಘಟ್ಟ ಬಂದು ಬಿಟ್ಟಿದೆ. ಈ ನಿಟ್ಟಿನಲ್ಲಿ ಭಾರತದ ಜತೆ ಯುದ್ಧ ನಡೆಸುವ ಕಾಲ ಸನ್ನಿಹಿತವಾಗಿದೆ ಎಂದು ಹೇಳಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಫ್ಯಾಸಿಸ್ಟ್ ಪ್ರಧಾನಿ ನರೇಂದ್ರ ಮೋದಿಯ ನಿರ್ಧಾರದಿಂದಾಗಿ ಕಾಶ್ಮೀರ ಸರ್ವನಾಶದ ಅಂಚಿನಲ್ಲಿದೆ. ಈ ವಿಚಾರದಲ್ಲಿ ಪಾಕಿಸ್ತಾನ ಮಾತ್ರ ಮುಂದೆ ನಿಂತು ವಿರೋಧಿಸುತ್ತಿದೆ. ಜಮ್ಮು-ಕಾಶ್ಮೀರದ ವಿಚಾರದಲ್ಲಿ ಭಾರತ ಕೈಗೊಂಡ ನಿರ್ಧಾರದ ಬಗ್ಗೆ ಜಗತ್ತಿನ ಉಳಿದ ಇಸ್ಲಾಂ ರಾಷ್ಟ್ರಗಳು ಯಾಕೆ ತುಟಿ ಬಿಚ್ಚುತ್ತಿಲ್ಲ ಎಂದು ರಶೀದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಶಕಗಳ ಹಿಂದೆಯೇ ಭಾರತದ ಮುಸ್ಲಿಂ ವಿರೋಧಿ ಮನಸ್ಥಿತಿಯ ಬಗ್ಗೆ ಮಹಮ್ಮದ್ ಅಲಿ ಜಿನ್ನಾ ವಿಶ್ಲೇಷಿಸಿದ್ದಾರೆ. ಆ ನಿಟ್ಟಿನಲ್ಲಿ ಭಾರತದ ಜತೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಯುತ್ತದೆ ಎಂದು ಈಗಲೂ ಆಲೋಚಿಸುವವರು ಮೂರ್ಖರು ಎಂದು ರಶೀದ್ ವಾಗ್ದಾಳಿ ನಡೆಸಿರುವುದಾಗಿ ವರದಿ ವಿವರಿಸಿದೆ.

ಭಾರತ-ಪಾಕ್ ವಾಯು ಮಾರ್ಗ ಆಗಸ್ಟ್ 28ರಿಂದ 30ರವರೆಗೆ ಬಂದ್:

Advertisement

ಕಾಶ್ಮೀರ ವಿಚಾರದಲ್ಲಿ ಒಳಗೊಳಗೆ ಕುದಿಯುತ್ತಿರುವ ಪಾಕಿಸ್ತಾನ ಇದೀಗ ಭಾರತದ ವಿಮಾನ ಸಂಚಾರಕ್ಕೆ ಅಡ್ಡಿಪಡಿಸುವ ನಿಟ್ಟಿನಲ್ಲಿ ಪ್ರಮುಖ ಮೂರು ಅಂತಾರಾಷ್ಟ್ರೀಯ ವಾಯು ಮಾರ್ಗವನ್ನು ಆಗಸ್ಟ್ 28ರಿಂದ 30ರವರೆಗೆ ಪೂರ್ಣ ಪ್ರಮಾಣದಲ್ಲಿ ಬಂದ್ ಮಾಡಿರುವುದಾಗಿ ಪಾಕಿಸ್ತಾನ ನಾಗರಿಕ ವಿಮಾನಯಾನ ಅಧಿಕಾರಿಗಳು ಘೋಷಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪಾಕಿಸ್ತಾನ ಸಚಿವ, ಭಾರತ ಅಫ್ಘಾನಿಸ್ತಾನಕ್ಕೆ ವಾಣಿಜ್ಯ ಸರಕು ಸಾಗಣೆಗೆ ಬಳಸುವ ಪಾಕಿಸ್ತಾನದ ರಸ್ತೆ ಮಾರ್ಗವನ್ನೂ ಸಂಪೂರ್ಣ ಬಂದ್ ಮಾಡಿರುವುದಾಗಿ ತಿಳಿಸಿದ್ದು, ಸಚಿವ ಸಂಪುಟದ ಸಲಹೆಯಂತೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ ಇತ್ತೀಚೆಗೆ ಫ್ರಾನ್ಸ್ ಸೇರಿದಂತೆ ವಿದೇಶ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ವಾಯುಮಾರ್ಗವನ್ನು ಬಳಸಿಕೊಂಡಿರುವುದಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆಕ್ಷೇಪ ವ್ಯಕ್ತಪಡಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next