ಹೊಸದಿಲ್ಲಿ: ಗಲಭೆಯ ಕಾರಣದಿಂದ ಸದ್ಯ ಭಾರತದಲ್ಲಿರುವ ಬಾಂಗ್ಲಾದೇಶದ (Bangladesh) ಮಾಜಿ ಪ್ರಧಾನಿ ಶೇಕ್ ಹಸೀನಾ (Sheikh Hasina) ಅವರು ಸ್ವದೇಶಕ್ಕೆ ಮರಳಲಿದ್ದಾರೆ ಎಂದು ಅವರ ಪುತ್ರ ಹೇಳಿದ್ದಾರೆ. ಹೊಸ ಉಸ್ತುವಾರಿ ಸರ್ಕಾರವು ಚುನಾವಣೆಗಳನ್ನು ನಡೆಸಲು ನಿರ್ಧರಿಸಿದಾಗ ಹಸೀನಾ ಬಾಂಗ್ಲಾಗೆ ತೆರಳಲಿದ್ದಾರೆ ಎಂದು ಅವರು ಹೇಳಿದ್ದಾರೆ.
ತಿಂಗಳ ಕಾಲ ನಡೆದ ತೀವ್ರ ಪ್ರತಿಭಟನೆಗಳ ನಂತರ ಶೇಕ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಕಳೆದ ಸೋಮವಾರ (ಆ.04) ಭಾರತಕ್ಕೆ ಪಲಾಯನ ಮಾಡಿದರು. ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್ ನೇತೃತ್ವದ ಉಸ್ತುವಾರಿ ಸರ್ಕಾರವು ಗುರುವಾರ (ಆ.08) ಪ್ರಮಾಣ ವಚನ ಸ್ವೀಕರಿಸಿದ್ದು, ಚುನಾವಣೆ ನಡೆಸುವ ಕಾರ್ಯ ನಡೆಯಲಿದೆ.
ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಸದ್ಯ ಅಮೆರಿಕದಲ್ಲಿರುವ ಹಸೀನಾ ಪುತ್ರ ಸಜೀಬ್ ವಾಜೆದ್ ಜಾಯ್, “ಸದ್ಯಕ್ಕೆ ಹಸೀನಾ ಅವರು ಭಾರತದಲ್ಲಿದ್ದಾರೆ. ಬಾಂಗ್ಲಾದೇಶದಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾದ ಕೂಡಲೇ ಅವರು ಅಲ್ಲಿಗೆ ತೆರಳಲಿದ್ದಾರೆ” ಎಂದು ಹೇಳಿದರು.
ಅಗತ್ಯ ಬಿದ್ದರೆ ರಾಜಕೀಯಕ್ಕೆ ಬರುವುದನ್ನು ಅಲ್ಲಗಳೆಯುವುದಿಲ್ಲ ಎಂದು ಜಾಯ್ ಹೇಳಿದರು. “ಅವಾಮಿ ಲೀಗ್ ಚುನಾವಣೆಯಲ್ಲಿ ಭಾಗವಹಿಸುತ್ತದೆ ಮತ್ತು ನಾವು ಗೆಲ್ಲಬಹುದು ಎಂದು ನನಗೆ ಖಾತ್ರಿಯಿದೆ” ಎಂದು ಅವರು ಹೇಳಿದರು.
ರಾಷ್ಟ್ರವ್ಯಾಪಿ ಹಿಂಸಾಚಾರಕ್ಕೆ ಕಾರಣವಾದ ವಿದ್ಯಾರ್ಥಿ ದಂಗೆಯಲ್ಲಿ ಸುಮಾರು 300 ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಕಳೆದ ಸೋಮವಾರ ದಂಗೆ ತೀವ್ರವಾಗುತ್ತಿದ್ದಂತೆ ಕಳೆದ ಎರಡು ದಶಕಗಳಿಂದ ಬಾಂಗ್ಲಾದೇಶವನ್ನು ಆಳುತ್ತಿರುವ ಶೇಕ್ ಹಸೀನಾ ಅವರು ರಾಜೀನಾಮೆ ನೀಡಿ ಪಲಾಯನ ಮಾಡಿದ್ದಾರೆ. ಪ್ರತಿಭಟನಾಕಾರರು ಪ್ರಧಾನಿ ನಿವಾಸಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ.
ಇದೀಗ ರೂಪುಗೊಂಡಿರುವ ಮಧ್ಯಂತರ ಸರ್ಕಾರದಲ್ಲಿ ಹಸೀನಾ ಅವರ ಅವಾಮಿ ಲೀಗ್ ಪಕ್ಷವು ಕಾಣಿಸಿಕೊಂಡಿಲ್ಲ.
ಶೇಕ್ ಹಸೀನಾ ಇದೀಗ ಹೊಸದಿಲ್ಲಿಯಲ್ಲಿ ನೆಲೆಸಿದ್ದಾರೆ. ಅವರು ಲಂಡನ್ ಗೆ ತೆರಳಲಿದ್ದಾರೆ ಎನ್ನಲಾಗಿತ್ತು. ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಬ್ರಿಟನ್ ಗೃಹ ಸಚಿವಾಲಯದ ಜೊತೆಗೆ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ.