Advertisement
ಫುಟ್‌ಬಾಲ್ ಅಂಕಣದಂತಿರುವ ಬೃಹತ್ ಕಟ್ಟಡ. ಅದರಲ್ಲಿ ನಾಲ್ಕು ಮಹಡಿಗಳು. ಒಳಗೆ ಕಾಲಿಟ್ಟರೆ, ಲಕ್ಷಗಟ್ಟಲೆ ಲೆಕ್ಕದಲ್ಲಿ ಮೂಟೆ ಕಟ್ಟಿರುವ ಅಡಿಕೆ ಹಾಳೆಯ ತಟ್ಟೆಗಳು ಕಾಣಸಿಗುತ್ತವೆ. ಅಲ್ಲಿರುವ ಕೆಲಸಗಾರರು ಸುಮಾರು 500 ಹಾಗೂ ಯಂತ್ರಗಳು ನೂರಾರು! ಇದು “ಇಕೊ ಬ್ಲಿಸ್’ ಅಡಿಕೆ ಹಾಳೆ ತಟ್ಟೆ ಕಾರ್ಖಾನೆಯ ಒಂದು ನೋಟ. ಅದರ ಮ್ಯಾನೇಜಿಂಗ್ ಡೈರೆಕ್ಟರ್ ಬಲಿಪಗುಳಿ ರಾಜಾರಾಮ್ ಸಿ.ಜಿ. ಅವರು ಕಾರ್ಖಾನೆಯನ್ನು ತೋರಿಸುತ್ತಾ, “ನಾವೀಗ ವಾರಕ್ಕೆ ಎರಡು- ಮೂರು ಕಂಟೈನರುಗಳಲ್ಲಿ 22 ನಮೂನೆಯ ಅಡಿಕೆ ಹಾಳೆ ತಟ್ಟೆಗಳನ್ನು ರಫ್ತು ಮಾಡುತ್ತೇವೆ. ಒಂದೊಂದು ಕಂಟೈನರಿನಲ್ಲಿ 3- 4 ಲಕ್ಷ ಅಡಿಕೆ ಹಾಳೆ ತಟ್ಟೆಗಳು ಇರುತ್ತವೆ’ ಎಂದಾಗ, ಕೋಟಿಗಟ್ಟಲೆ ರೂಪಾಯಿ ವಾರ್ಷಿಕ ವಹಿವಾಟಿನ ಆ ಉದ್ದಿಮೆಯ ಇನ್ನೊಂದು ನೋಟ ದಕ್ಕಿತು.
Related Articles
Advertisement
ಯಾಕೆಂದರೆ ಇಕೊ ಬ್ಲಿಸ್ ಉದ್ದಿಮೆ, ಅಡಿಕೆ ಹಾಳೆಯನ್ನು ಸುಮಾರು 1.50 ರೂ. ದರದಲ್ಲಿ ಖರೀದಿಸುತ್ತಿದೆ. 1,000 ಹಾಳೆ ಮಾರಿದರೆ ರೈತರಿಗೆ ಏನಿಲ್ಲವೆಂದರೂ 1,500 ರೂ. ಆದಾಯ! ಇಕೊ ಬ್ಲಿಸ್, ಈಗಾಗಲೇ ಕೇಂದ್ರ ಸರಕಾರದಿಂದ ಎರಡು ಬಾರಿ ಗೌರವಕ್ಕೆ ಪಾತ್ರವಾಗಿದೆ. ತಾವು ಶುರುಮಾಡಿದಾಗ ಇಕೊ ಬ್ಲಿಸ್ ಸಂಸ್ಥೆ ಚಿಕ್ಕದಾಗಿತ್ತು. ಅದನ್ನು ಈಗಿರುವ ಹಂತಕ್ಕೆ ವಿಸ್ತರಿಸುವುದರಲ್ಲಿ ಪತ್ನಿ ರೇಷ್ಮಾ ಹಾಗೂ ಸೋದರರ ಬೆಂಬಲವನ್ನು ಸ್ಮರಿಸುತ್ತಾರೆ ರಾಜಾರಾಮ…. ಇದು ಗ್ರಾಮೀಣ ಪ್ರದೇಶಗಳಿಗೆ ಸೂಕ್ತವಾದ ಉದ್ದಿಮೆಗೊಂದು ಮಾದರಿ. ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಕೊಡಪದವಿನ ಕೊಡುಂಗೈಯಲ್ಲಿರುವ “ಇಕೊ ಬ್ಲಿಸ್’ ಕಾರ್ಖಾನೆಗೆ ಮಂಗಳೂರಿನಿಂದ ವಾಹನದಲ್ಲಿ ಒಂದು ಗಂಟೆ ಪ್ರಯಾಣ. ಪ್ಲಾಸ್ಟಿಕ್ ನಿಷೇಧದ ಕೂಗು ಮೊಳಗುತ್ತಿರುವ ಇಂದಿನ ಸಮಯದಲ್ಲಿ, ಇಕೊ ಬ್ಲಿಸ್ ಸದ್ದಿಲ್ಲದೆ ಪರಿಸರಸ್ನೇಹಿ ಉತ್ಪನ್ನ ತಯಾರಿಕೆಯ ಜೊತೆಗೆ ಉದ್ಯೋಗ ಸೃಷ್ಟಿಗೂ ಕಾರಣವಾಗಿದೆ.
ಸ್ವಂತ ಉದ್ದಿಮೆಯ ಕನಸು: ಕೃಷಿಕ ಮನೆತನದವರಾದ ರಾಜಾರಾಮ್, ಇಂಜಿನಿಯರಿಂಗ್ ಶಿಕ್ಷಣದ ನಂತರ ಸ್ವಂತ ಉದ್ದಿಮೆ ಆರಂಭಿಸುವ ಕನಸಿನಲ್ಲಿ ಮುಳುಗಿದರು. ಅಂತೂ 1994ರಲ್ಲಿ ಅಡಿಕೆ ಹಾಳೆಯಿಂದ ತಟ್ಟೆಗಳನ್ನು ತಯಾರಿಸುವ ಯಂತ್ರವೊಂದನ್ನು ರೂಪಿಸಿದರು. ಮೊದಲ ಮೂರು ತಿಂಗಳಿನಲ್ಲಿ ಅವರು ಉತ್ಪಾದಿಸಿದ್ದು 10,000 ತಟ್ಟೆಗಳನ್ನು. ಕ್ರಮೇಣ ಉತ್ಪಾದನೆ ಹೆಚ್ಚಿಸುತ್ತಾ ಈಗ ಇದನ್ನು ಭಾರತದಲ್ಲಿ ಅತ್ಯಧಿಕ ಅಡಿಕೆ ಹಾಳೆ ತಟ್ಟೆ ಉತ್ಪಾದಿಸುವ ಕಾರ್ಖಾನೆಯನ್ನಾಗಿ ಬೆಳೆಸಿದ್ದಾರೆ.
ತರಿಸುವುದಕ್ಕಿಂತ ತಯಾರಿಸುವುದೇ ಲೇಸು: ಲಾರಿಯಲ್ಲಿ ಅಡಿಕೆ ಹಾಳೆ ತರಿಸುವುದು ದುಬಾರಿ ಎಂದು ರಾಜಾರಾಮ್‌ಅವರಿಗೆ ಬಹಳ ಬೇಗ ಸ್ಪಷ್ಟವಾಯಿತು. ಒಂದು ಲಾರಿ ಲೋಡ್ ಅಂದರೆ 15,000- 20,000 ಅಡಿಕೆ ಹಾಳೆ. ಇದನ್ನು ದೂರದ ಊರುಗಳಿಂದ ತರಿಸುವುದಕ್ಕೆ ಬದಲಾಗಿ, ಅಲ್ಲೇ ಅಡಿಕೆ ಹಾಳೆ ತಟ್ಟೆ ಉತ್ಪಾದಿಸುವ ಘಟಕ ಆರಂಭಿಸಿದರೆ, ವರ್ಷಕ್ಕೆ 7- 8 ಲಕ್ಷ ತಟ್ಟೆಗಳನ್ನು ಅಲ್ಲೇ ಉತ್ಪಾದಿಸಬಹುದು ಎಂಬುದು ಅವರ ಲೆಕ್ಕಾಚಾರ. ಹಾಗಾಗಿ, ಆಸಕ್ತರಿಗೆ ಅಡಿಕೆ ಹಾಳೆ ತಟ್ಟೆ ತಯಾರಿಸುವ ಯಂತ್ರಗಳನ್ನು ಒದಗಿಸಿ, ಅವರು ಉತ್ಪಾದಿಸಿದ ತಟ್ಟೆಗಳನ್ನು ಖರೀದಿಸಲು ಶುರು ಮಾಡಿದರು. ಮಾನವ ಶಕ್ತಿಯಿಂದ ಅಡಿಕೆ ಹಾಳೆ ತಟ್ಟೆ ತಯಾರಿಸುವ ಯಂತ್ರದ ಬೆಲೆ ರೂ. 18,000. ಅದರ ಜೊತೆಗೆ ಹಾಳೆ ಬಿಸಿ ಮಾಡಲಿಕ್ಕಾಗಿ ಅಡುಗೆ ಅನಿಲ ವ್ಯವಸ್ಥೆ ಮಾಡಿ ಘಟಕ ಆರಂಭಿಸಬಹುದು. ಅಡಿಕೆ ಹಾಳೆ ತಟ್ಟೆಯ ಗುಣಮಟ್ಟ ಕಾಯ್ದುಕೊಂಡ ಕಾರಣವೇ “ಇಕೊ ಬ್ಲಿಸ್’ ಕಾರ್ಖಾನೆಯ ಉತ್ಪನ್ನಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಸರು ಗಳಿಸಲು ಸಾಧ್ಯವಾಗಿದೆ.
* ಅಡ್ಡೂರು ಕೃಷ್ಣ ರಾವ್