Advertisement

ಅಮೃತಧಾರೆ

06:00 AM Oct 31, 2018 | |

ಇವತ್ತಲ್ಲ ನಾಳೆ, ಸಾಹಿರ್‌ಗೆ ನನ್ನ ಮೇಲೆ ಪ್ರೀತಿ ಮೂಡುತ್ತದೆ ಎಂದುಕೊಂಡ ಅಮೃತಾ ಪ್ರೀತಂ. ಅವನ ಅನುರಾಗದ ಮಾತಿಗಾಗಿ ದಿನ, ವಾರ, ತಿಂಗಳುಗಟ್ಟಲೆ ಕಾದರು. ಅವನ ತುಟಿ ಕ್ರಾಂತಿಯ ಸಿಗರೇಟು ಉರಿಯುತ್ತಿತ್ತು. ಈಕೆಯ ಹೃದಯದಲ್ಲಿ ಪ್ರೀತಿ ನಿಗಿನಿಗಿ ಎನ್ನುತ್ತಿತ್ತು. 

Advertisement

ಕೆಲವು ಪ್ರೇಮಕತೆಗಳಿರುತ್ತವೆ. ಅವುಗಳಿಗೆ ಯಾವತ್ತೂ ವಯಸ್ಸಾಗುವುದಿಲ್ಲ. ಪ್ರತಿ ಬಾರಿ ಓದಿದಾಗಲೂ, ಕೇಳಿದಾಗಲೂ ಆಗಷ್ಟೇ ಅರಳಿದ ಮಲ್ಲಿಗೆ ಹೂವಿನಂತೆ ಅವು ಫ್ರೆಶ್‌ ಆಗಿರುವಂಥ ಅನುಭವ ನೀಡುತ್ತವೆ. ಸ್ವಾರಸ್ಯವೆಂದರೆ, ಈ ಎವರ್‌ಗ್ರೀನ್‌ ಪ್ರೇಮಕತೆಗಳಲ್ಲಿ ಪ್ರೇಮಿಗಳ ಸರಸ, ಪ್ರಣಯ, ಹಠ, ಅಪನಂಬಿಕೆ, ಜಗಳ, ಮುನಿಸು, ರಾಜಿ, ಪಂಚಾಯ್ತಿ… ಇದೇನೂ ಇರುವುದಿಲ್ಲ. ಅಲ್ಲಿ ಪರಸ್ಪರರ ಕುರಿತು, ಪ್ರೀತಿ, ಮಮತೆ, ಕರುಣೆ, ಆರಾಧನೆ ಮತ್ತು ಗೌರವವಷ್ಟೇ ಇರುತ್ತದೆ.  ಹೀಗಿದ್ದರೂ, ಈ ಪ್ರೇಮಕತೆಗಳು ಸುಖಾಂತ ಕಾಣುವುದಿಲ್ಲ! ಅವು “ಡಿಸಪಾಯಿಂಟ್‌’ ಲವ್‌ಸ್ಟೋರಿಗಳಾಗಿಯೇ ಮುಗಿದಿರುತ್ತವೆ!

ಹೀಗೆಲ್ಲ, ಅಂದುಕೊಂಡಾಗ ತಕ್ಷಣವೇ ನೆನಪಾಗುವುದು ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕಿ ಅಮೃತಾ ಪ್ರೀತಂ ಮತ್ತು ಚಿತ್ರ ಸಾಹಿತಿ- ಕವಿ ಸಾಹಿರ್‌ ಲುಧಿಯೇನ್ವಿ  ಅವರ ಸುಮಧುರ ಪ್ರೇಮಕಥೆ. ಅಮೃತಾ ಕೌರ್‌ ಎಂಬುದು, ಅಮೃತಾ ಪ್ರೀತಂರ ಮೂಲ ಹೆಸರು. ಈಕೆ ಜನಿಸಿದ್ದು 1919ರಲ್ಲಿ, ಈಗ ಪಾಕಿಸ್ತಾನಕ್ಕೆ ಸೇರಿರುವ ಗುಜ್ರನ್‌ವಾಲಾ ನಗರದಲ್ಲಿ. ಅಮೃತಾರ ತಂದೆ- ಕರ್ತಾರ್‌ ಸಿಂಗ್‌. ಈತ ಪಂಜಾಬಿ ಕವಿ. ತಂದೆ ಬರೆದಿದ್ದನ್ನು ಓದುತ್ತ, ಓದುತ್ತ, ತಾನೂ ಕಾವ್ಯದ ಕಡಲಿಗೆ ಸೇರಿ ಹೋದ ಅಮೃತ, 11ನೇ ವಯಸ್ಸಿಗೇ ತಾಯಿಯನ್ನು ಕಳೆದುಕೊಂಡಳು. ಆನಂತರ ಈಕೆ ಬೆಳೆದಿದ್ದು ಅಜ್ಜಿಯ ಕಣ್ಗಾವಲಿನಲ್ಲಿ. ಆ ಅಜ್ಜಿಯೋ, ಮಹಾ ಸಂಪ್ರದಾಯ ನಿಷ್ಠೆ. ಕವಿಯ ಮನೆ ಅಂದಮೇಲೆ ಕೇಳಬೇಕೇ? ಅಲ್ಲಿಗೆ ಹಲವು ಜಾತಿ, ಧರ್ಮಕ್ಕೆ ಸೇರಿದವರೆಲ್ಲ ಬರುತ್ತಿದ್ದರು. ಆಗ ಈ ಅಜ್ಜಿ, ಪಂಜಾಬಿಗಳಿಗೆ, ಮುಸ್ಲಿಮರಿಗೆ, ಇತರೆ ಧರ್ಮದವರಿಗೆ- ಹೀಗೆ ಮೂರು ಬಗೆಯ ಲೋಟಗಳನ್ನು ಇಟ್ಟಿದ್ದರಂತೆ. ಬಂದವರಿಗೆಲ್ಲ ಲಸ್ಸಿ ಸಿಗುತ್ತಿತ್ತು. ಆದರೆ, ಅವರವರಿಗೆ ಮೀಸಲಿದ್ದ ಲೋಟಗಳಲ್ಲಿಯೇ ಅದನ್ನು ನೀಡಲಾಗುತ್ತಿತ್ತು. ಈ ಅಸಮಾನತೆಯ ವಿರುದ್ಧ ಮೊದಲು ಸಿಡಿದಾಕೆ ಅಮೃತಾ. “ನಾವೆಲ್ಲಾ ಒಂದೇ’ ಎಂದು ಅಪ್ಪ ಪದ್ಯ ಬರೀತಾರೆ. ನೀನು ನೋಡಿದ್ರೆ ಹೀಗೆಲ್ಲಾ ತಾರತಮ್ಯ ಮಾಡುವುದಾ? ನಮ್ಮ ಮನೆಯಲ್ಲಿ ಎಲ್ಲರಿಗೂ ಒಂದೇ ಬಗೆಯ ಸತ್ಕಾರ ನಡೆಯಬೇಕು ಎಂದು ಹಠ ಹಿಡಿದು, ಅದನ್ನು ಕಾರ್ಯರೂಪಕ್ಕೆ ತರುವಲ್ಲಿಯೂ ಈಕೆ ಯಶಸ್ಸು ಕಂಡಳು. 

ತಾಯಿ ಇಲ್ಲದ ಮಗು ಎಂಬ ಕಾರಣಕ್ಕೆ ಅತಿಯಾದ ಮುದ್ದಿನಿಂದಲೇ ಸಾಕಲಾಗಿತ್ತು. ಆಗಷ್ಟೇ ಯೌವನದ ಹೊಸ್ತಿಲು ತುಳಿದಿದ್ದಳು ಅಮೃತಾ. ಸಾಹಿತ್ಯಗೋಷ್ಠಿಗಳಿಗೆ ಹಾಜರಾಗುವುದು, ಭಾಷಣ ಕೇಳುವುದು, ಕವಿಗಳನ್ನು ಮಾತಾಡಿಸುವುದು ಆಕೆಯ ಮೆಚ್ಚಿನ ಹವ್ಯಾಸವಾಗಿತ್ತು. ಅವತ್ತಿನ ಸಂದರ್ಭದಲ್ಲಿ ಸಾಹಿತ್ಯಲೋಕದ ಸೂಪರ್‌ಸ್ಟಾರ್‌ ಅನಿಸಿಕೊಂಡಿದ್ದಾತ ಸಾಹಿರ್‌ ಲುಧಿಯೇನ್ವಿ. ಆತ ಕವಿ, ಚಿತ್ರಸಾಹಿತಿ ಮತ್ತು ಹೋರಾಟಗಾರ. ಕವಿಗೋಷ್ಠಿಗೆ ಆತ ಬರುತ್ತಾನೆ ಎಂದರೆ ಸಾಕು; ಸಭಾಂಗಣ ಭರ್ತಿಯಾಗಿಬಿಡುತ್ತಿತ್ತು. ಆತ ಓದುತ್ತಿದ್ದ ಪ್ರತಿಯೊಂದು ಸಾಲಿಗೂ ಚಪ್ಪಾಳೆಯ ಸುರಿಮಳೆಯಾಗುತ್ತಿತ್ತು. 

ಅಂಥದೇ ಒಂದು ಕವಿಗೋಷ್ಠಿ. ಯಥಾಪ್ರಕಾರ, ಅವತ್ತೂ ಸಾಹಿರ್‌ ಕಾವ್ಯಪ್ರೇಮಿಗಳ ಮನಗೆದ್ದಿದ್ದರು. ಕಾರ್ಯಕ್ರಮ ಮುಗಿಯುತ್ತಿದ್ದಂತೆ, ಆಟೋಗ್ರಾಫ್ಗಾಗಿ ನೂರಾರು ಮಂದಿ ಸಾಲುಗಟ್ಟಿ ನಿಂತರು. ಕಡೆಗೂ ಆ ಭದ್ರಕೋಟೆಯನ್ನು ದಾಟಿ ಹೊರಬಂದ ಸಾಹಿರ್‌ಗೆ, ತುಸು ದೂರದಲ್ಲಿ ತನ್ನನ್ನೇ ಅಭಿಮಾನ ಮತ್ತು ಆರಾಧನಾ ಭಾವದಿಂದ ನೋಡುತ್ತಿದ್ದ ಯುವತಿಯೊಬ್ಬಳು ಕಂಡಳು. ಆಕೆಯ ಕಂಗಳಲ್ಲಿ ವಿಶಿಷ್ಟ ಕಾಂತಿಯಿತ್ತು. ನಿಂತ ಭಂಗಿಯಲ್ಲಿ, ನಾಚಿಕೆಯಿತ್ತು. ಹಿಂಜರಿಕೆಯಿತ್ತು. ಸಂಕೋಚವಿತ್ತು. ಮಾತುಗಳಲ್ಲಿ ಹೇಳಲಾಗದ ವಿನಂತಿಯಿತ್ತು. ಸಾಹಿರ್‌, ಮಂತ್ರಮುಗ್ಧರಂತೆ ಆಕೆಯ ಬಳಿ ಹೋಗಿ ಕೇಳಿಬಿಟ್ಟರು: “ಆಟೋಗ್ರಾಫ್ ಬೇಕಾ?’

Advertisement

ಆಕೆ, ತಲೆತಗ್ಗಿಸಿಕೊಂಡೇ “ಹೂಂ’ ಎಂದಳು. ನಂತರ ಸಾಹಿರ್‌ನನ್ನೇ ಮೆಚ್ಚುಗೆಯಿಂದ ನೋಡುತ್ತ- ಆಟೋಗ್ರಾಫ್ ಹಾಕಿಸಿಕೊಳ್ಳಲು ಎಕ್ಸರ್‌ಸೈಜ್‌ ಪುಸ್ತಕವನ್ನಾಗಲಿ, ಡೈರಿಯನ್ನಾಗಲಿ ನಾನು ತಂದಿಲ್ಲ. ಕಳೆದುಹೋಗಬಹುದಾದ ಕಾಗದದ ಮೇಲೆ ನಿಮ್ಮ ಹಸ್ತಾಕ್ಷರ ಬೇಡ. ಬದುಕಿರುವವರೆಗೂ ಒಂದು ಮಧುರ ನೆನಪಾಗಿ ಉಳಿಯುವಂತೆ, ನನ್ನನ್ನು ನಾನು ಕಂಡುಕೊಳ್ಳಲು ಸಾಧ್ಯವಾಗುವಂತೆ, ನನ್ನ ಅಂಗೈ ಮೇಲೆಯೇ ಆಟೋಗ್ರಾಫ್ ಹಾಕಿಬಿಡಿ’ ಎನ್ನುತ್ತಾ- ಎಡಗೈಯನ್ನು ಮುಂದೆ ಚಾಚಿದಳು. ಈ ಕೋರಿಕೆಗೆ, ಸಾಹಿರ್‌ನ ಕವಿ ಹೃದಯ ಸ್ಪಂದಿಸಿತು. ಆತ ಅವತ್ತು ವರ್ಣಮಾಲೆಯ ಅಕ್ಷರಗಳಿಂದ ತನ್ನ ಹೆಸರು ಬರೆಯಲಿಲ್ಲ. ಬದಲಿಗೆ, ತನ್ನ ಎಡಗೈ ಹೆಬ್ಬೆರಳಿಗೆ ಶಾಯಿ ಮೆತ್ತಿಕೊಂಡ. ನಂತರ, ಆ ಯುವತಿಯ ಸುಕೋಮಲ ಹಸ್ತವನ್ನು ತನ್ನ ಅಂಗೈಲಿ ಇಟ್ಟುಕೊಂಡು, ಅಲ್ಲಿ ತನ್ನ ಎಡಗೈನ ಮುದ್ರೆ ಒತ್ತಿಬಿಟ್ಟ! ನವಿರಾಗಿ ಕೈಬಿಡಿಸಿಕೊಂಡ ಆ ಯುವತಿ, ಆ ವಿಶಿಷ್ಟ ಆಟೋಗ್ರಾಫ‌ನ್ನು ಒಮ್ಮೆ ಆಘ್ರಾಣಿಸಿ, ಚುಂಬಿಸಿದಳು. ನಂತರ, ಅಭಿಮಾನ, ಅನುರಾಗ, ಭಕ್ತಿ, ಪ್ರೀತಿ, ಪರವಶಭಾವದೊಂದಿಗೆ ಕವಿಯನ್ನು ನೋಡುತ್ತ- “ನಾನು ಅಮೃತಾ, ಅಮೃತಾ ಕೌರ್‌. ನಿಮ್ಮ ದೊಡ್ಡ ಅಭಿಮಾನಿ’ ಎಂದು ಹೇಳಿ, ಭರ್ರನೆ ಮಾಯವಾಗಿಬಿಟ್ಟಳು. 

ಆನಂತರದಲ್ಲಿ, ತಂದೆಯ ಅನುಮತಿ ಪಡೆದು, ಸಾಹಿರ್‌ನನ್ನು ಮೇಲಿಂದ ಮೇಲೆ ಭೇಟಿಯಾದಳು ಅಮೃತಾ. ಕೆಲವೊಮ್ಮೆ ಸಾಹಿರ್‌ ಈಕೆಯ ಮನೆಗೇ ಬರುತ್ತಿದ್ದ. ಸಿಗರೇಟು ಸೇದುತ್ತಾ, ತನ್ನ ಹೊಸ ಕವಿತೆಗಳನ್ನು ಓದಿ ಹೇಳುತ್ತಿದ್ದ. ಕವಿತೆ ಕೇಳಿಸಿಕೊಂಡ ನಂತರ- “ಕವಿಗಳೇ, ನಾನು ನಿಮ್ಮನ್ನು ಪ್ರೀತಿಸ್ತಿದೀನಿ. ನಿಮ್ಮನ್ನು ಮದುವೆಯಾಗಲು ಆಸೆಪಟ್ಟಿದೀನಿ. ನಿಮಗೋಸ್ಕರ ಜಾತಿ- ಧರ್ಮವನ್ನು ಬಿಟ್ಟು ಬರೋದಕ್ಕೂ ರೆಡಿ ಇದೀನಿ…’ ಎಂದೆಲ್ಲ ಹೇಳಿಕೊಂಡಳು ಅಮೃತಾ. ಆದರೆ, ತನ್ನ ರೂಪಿನ ಕುರಿತೇ ಕೀಳರಿಮೆ ಹೊಂದಿದ್ದ ಸಾಹಿರ್‌, ತಮಾಷೆಗೆ ಕೂಡ “ಐ ಲವ್‌ ಯೂ ಅಮೃತಾ’ ಅನ್ನಲಿಲ್ಲ. ಇಷ್ಟಾದರೂ ಅಮೃತಾ ಹತಾಶರಾಗಲಿಲ್ಲ. ಇವತ್ತಲ್ಲ ನಾಳೆ, ಸಾಹಿರ್‌ಗೆ ನನ್ನ ಮೇಲೆ ಪ್ರೀತಿ ಮೂಡುತ್ತದೆ ಎಂದುಕೊಂಡರು. ಅವನ ಅನುರಾಗದ ಮಾತಿಗಾಗಿ ದಿನ, ವಾರ, ತಿಂಗಳುಗಟ್ಟಲೆ ಕಾದರು. ಅವನ ತುಟಿ ಕ್ರಾಂತಿಯ ಸಿಗರೇಟು ಉರಿಯುತ್ತಿತ್ತು. ಈಕೆಯ ಹೃದಯದಲ್ಲಿ ಪ್ರೀತಿ ನಿಗಿನಿಗಿ ಎನ್ನುತ್ತಿತ್ತು. ಅಮೃತಾಳ ಆರಾಧನೆ ಅದ್ಯಾವ ಮಟ್ಟದ್ದಿತ್ತು ಅಂದರೆ, ಸಾಹಿರ್‌ನ ನೆನಪು ಸದಾ ಜೊತೆಗಿರಬೇಕೆಂದು ಬಯಸಿ, ಆತ ಸೇದಿ ಬಿಟ್ಟ ಸಿಗರೇಟಿನ ತುಂಡುಗಳನ್ನೆಲ್ಲ ತೆಗೆದು ಅಲ್ಮೇರಾದೊಳಗೆ ಜೋಡಿಸಿ ಇಟ್ಟುಕೊಂಡಳು. ತನ್ನ ಆರಾಧ್ಯ ದೈವದಂತೆಯೇ ತಾನೂ ಬಾಳಬೇಕು ಎಂದು ನಿರ್ಧರಿಸಿ, ಸಂಪ್ರದಾಯನಿಷ್ಠ ಪಂಜಾಬಿ ಕುಟುಂಬದ ಆಕೆ, ಸಾಹಿರ್‌ನಂತೆಯೇ ಸಿಗರೇಟು ಸೇದಿಬಿಟ್ಟಳು! 

ಉಹುಂ, ಹೀಗೆಲ್ಲ ಆದರೂ ಸಾಹಿರ್‌ ಒಲಿಯಲಿಲ್ಲ. ಕಡೆಗೆ, ಮನೆಯವರು ಗೊತ್ತು ಮಾಡಿದ “ಪ್ರೀತಂ ಸಿಂಗ್‌’ ಎಂಬಾತನನ್ನು ಮದುವೆಯಾದಳು. ಆನಂತರವೇ ಆಕೆ “ಅಮೃತಾ ಪ್ರೀತಂ’ ಆದದ್ದು. ಸಾಹಿರ್‌- ನನ್ನ ಪಾಲಿನ ಗುರು, ಗೆಳೆಯ, ಆತ್ಮಬಂಧು ಮತ್ತು ದೇವರು. ಅವರನ್ನು ನೋಡದೆ, ಅವರೊಂದಿಗೆ ಮಾತಾಡದೆ ನಾನು ಬಾಳಲಾರೆ ಎಂದು ಗಂಡನಿಗೆ ಮೊದಲೇ ಹೇಳಿಬಿಟ್ಟಿದ್ದಳು ಅಮೃತಾ. ಅದುವರೆಗೂ ಸಾಹಿರ್‌ ಕುರಿತು ಪ್ರೀತಿಯಂತೆ ಇದ್ದ ಭಾವ, ಮದುವೆಯ ನಂತರ ಆರಾಧನೆಯಾಗಿ. ಅಭಿಮಾನವಾಗಿ, ನಂಬಿಕೆಯಾಗಿ ಬದಲಾಯಿತು. ತಾನು ಗರ್ಭಿಣಿ ಎಂದು ಗೊತ್ತಾದಾಗ, ಸಾಹಿರ್‌ ತನ್ನ ಬಾಳಸಂಗಾತಿ ಆಗದಿದ್ದರೇನಂತೆ? ಅವನಂತೆಯೇ ಇರುವ ಮಗುವೊಂದು ತನ್ನ ಮಡಿಲಿಗೆ ಬರಲಿ ಎಂದು ಆಸೆಪಟ್ಟಳು ಅಮೃತಾ. ಈ ಮಾರ್ದವ ಭಾವವೇ ಮೋಹವಾಗಿ, ಬೆಚ್ಚಗಿನ ಪ್ರೀತಿಯಾಗಿ, ಕ್ರಮೇಣ ಜ್ವರದಷ್ಟು ತೀವ್ರವಾಗಿ ಆಕೆಯನ್ನು ಆವರಿಸಿಕೊಂಡಿತು. ತನ್ನ ಕೊಠಡಿಯಲ್ಲಿ ಸಾಹಿರ್‌ನ ಫೋಟೊ ಇಟ್ಟುಕೊಂಡು ಅವನನ್ನೇ ಧ್ಯಾನಿಸುವುದು, ಅವನ ಹೆಸರನ್ನೇ ಜಪಿಸುವುದು ಅಮೃತಾಳ ದಿನಚರಿಯೇ ಆಗಿಹೋಯ್ತು.

ಆನಂತರ ಏನಾಯಿತು ಗೊತ್ತಾ? 
ಅಮೃತಾಗೆ ಜನಿಸಿದ ಮಗು, ಸಾಹಿರ್‌ನ ಪಡಿಯಚ್ಚಿನಂತೆ ಇತ್ತು! ಅಮೃತಾ- ಸಾಹಿರ್‌ನ ಮಧ್ಯೆ ಪರಸ್ಪರ “ಗೌರವ ಭಾವ, ಆರಾಧನೆ ಇತ್ತೇ ಹೊರತು ಅನುಮಾನಿಸುವಂಥದೇನೂ ಅವರ ಮಧ್ಯೆ ನಡೆಯಲಿಲ್ಲ. ಆದರೆ, ಇವರಿಬ್ಬರ ಮಾತುಕತೆ ಕಂಡಿದ್ದವರು, ದಿವ್ಯಪ್ರೇಮದ ಬಗ್ಗೆ ಗೊತ್ತಿದ್ದವರು ತಲೆಗೊಂದು ಮಾತಾಡಿದರು. ಆಡಿಕೊಂಡರು. ಅಹಹಹಹ, ಅವಳೇನು ಅಂತ ನಮಗೆ ಗೊತ್ತಿಲ್ವಾ? ಎಂದು ರಾಗ ಎಳೆದರು. ಈ ಮಾತುಗಳೆಲ್ಲ, ಕ್ರಮೇಣ, ಅಮೃತಾರ ಮಗನ ಕಿವಿಗೂ ಬಿದ್ದವು. ಆತ, ತಡೆದೂ ತಡೆದೂ ಕಡೆಗೊಮ್ಮೆ ಅಮೃತಾರನ್ನೇ ಈ ಬಗ್ಗೆ ನೇರವಾಗಿ ಕೇಳಿಬಿಟ್ಟ.

ಪಾಪ, ಆ ತಾಯಿಗೆ ಹೇಗಾಗಿರಬೇಡ? ತಂದೆಯಿದ್ದೂ, ಮಗ “ನಾನು ಬೇರೊಬ್ಬರಿಗೆ ಹುಟ್ಟಿದವನೇನಮ್ಮಾ?’ ಎಂದು ತಾಯಿಯನ್ನೇ ಕೇಳಿದರೆ…! ಅಮೃತಾ, ಶಾಂತವಾಗಿ ಹೇಳಿದರು: “ಸತ್ಯ ಸಂಗತಿಯನ್ನು ಹೇಳುವಷ್ಟು ಧೈರ್ಯ ನನ್ನಲ್ಲಿ ಇದೆ ಮಗು. ಸತ್ಯವನ್ನು ಮುಚ್ಚಿಡುವುದರಿಂದ ಏನು ಪ್ರಯೋಜನ? ನನ್ನ ಮಾತನ್ನು ನಂಬು ಕಂದ. ಸಾಹಿರ್‌ನ ಮಗನನ್ನು ಹೊತ್ತು, ಹೆತ್ತು ಬೆಳೆಸಬೇಕೆಂಬ ಆಸೆ ಇದ್ದದ್ದು ನಿಜ. ಆದರೆ, ಅದು ಸಾಧ್ಯವಾಗಲಿಲ್ಲ. ನನ್ನನ್ನು ನಂಬು. ನೀನು ಸಾಹಿರ್‌ನ ಮಗನಲ್ಲ…’

ಈ ಮಾತು ಕೇಳಿದಾಕ್ಷಣ, ಅಮೃತಾರ ಮಗ ಎಳೆಗರುವಿನಂತೆ ಮೂಕನಾದ. “ಮಾಮಾ’ ಎನ್ನುತ್ತಾ ಭಾವುಕನಾಗಿ ತಾಯಿಯನ್ನು ಬಿಗಿದಪ್ಪಿದ. ಅಮ್ಮನ ಹಣೆಗೆ, ಕೆನ್ನೆಗೆ, ಕಣ್ಣಿಗೆ, ಚುಂಬಿಸಿ- ನಿನ್ನ ಮನಸ್ಸು ನೋಯಿಸಿಬಿಟ್ಟೆ, ಕ್ಷಮಿಸಮ್ಮಾ’ ಅಂದ!

ಇವೆಲ್ಲ ಸಂಕಟಗಳ ಮಧ್ಯೆಯೇ ಕತೆ, ಕವಿತೆ, ಕಾದಂಬರಿ ರಚನೆಯಲ್ಲಿ ಅಮೃತಾ ಹೆಸರು ಮಾಡಿದಳು. ಸಾಹಿರ್‌- ಚಿತ್ರಸಾಹಿತಿಯಾಗಿ “ದಿ ಲೆಜೆಂಡ್‌’ ಅನ್ನಿಸಿಕೊಂಡ. ಕಡೆಗೊಮ್ಮೆ, ಸುನೆಹೆಡೆ (ಸಂದೇಶಗಳು) ಎಂಬ ಕೃತಿಗೆ, ಅಮೃತಾಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಬಂತು. ಆಕೆಯ ಬರಹಗಳು ಹದಿನಾಲ್ಕಕ್ಕೂ ಹೆಚ್ಚು ಭಾಷೆಗೆ ಅನುವಾದವಾದವು. “ಪ್ರಶಸ್ತಿ ಲಭಿಸಿದೆ’ ಎಂದು ತಿಳಿದಾಗ- ಯಾವ ವ್ಯಕ್ತಿ ಇದನ್ನು ಓದಬೇಕಿತ್ತೋ ಆತ ಓದಲಿಲ್ಲ. ಈಗ ಇಡೀ ಜಗತ್ತೇ ಅದನ್ನು ಓದಿದರೆ ಏನುಪಯೋಗ? ಎಂದು ಸಂಕಟದಿಂದ ನುಡಿದರು ಅಮೃತಾ. ಕಡೆಗೊಂದು ದಿನ, ಜ್ಞಾನಪೀಠ ಪ್ರಶಸ್ತಿಯೇ ಬಂದಾಗ, ಪತ್ರಿಕಾ ಛಾಯಾಗ್ರಾಹಕನೊಬ್ಬ- “ನೀವು ಏನಾದರೂ ಬರೀತಾ ಇರುವಂತೆ ಪೋಸ್‌ ಕೊಡಿ ಮೇಡಂ’ ಎಂಬ ಮನವಿಯೊಂದಿಗೆ ವಿಸ್ತಾರವಾದ ಹಾಳೆಯೊಂದನ್ನು ಎದುರಿಗಿಟ್ಟ. ಆ ಹಾಳೆಯ ತುಂಬಾ ಅಣುವಿನಷ್ಟೂ ಜಾಗ ಬಿಡದೆ ಅಮೃತಾ ಬರೆದಿದ್ದರು- ಸಾಹಿರ್‌, ಸಾಹಿರ್‌, ಸಾಹಿರ್‌, ಸಾಹಿರ್‌, ಸಾಹಿರ್‌…

“ಪ್ರೇಮವೇ ಬಾಳಿನ ಬೆಳಕು’ ಎಂಬ ಮಾತನ್ನು ಬಾಳಿನುದ್ದಕ್ಕೂ ನಿಜ ಮಾಡಿದಾಕೆ ಅಮೃತಾ. ಅವರನ್ನು ಹೀಗೆಲ್ಲಾ ಸ್ಮರಿಸಿಕೊಳ್ಳುವುದಕ್ಕೂ ಒಂದು ಕಾರಣವಿದೆ. ಅಕ್ಟೋಬರ್‌ 31, ಈ ಲೋಕಕ್ಕೆ ಅಮೃತಾ ವಿದಾಯ ಹೇಳಿದ ದಿನ. ಪ್ರೀತಿಯೆಂದರೆ ಆರಾಧನೆ, ಪ್ರೀತಿಯೆಂದರೆ ಅಭಿಮಾನ, ಪ್ರೀತಿಯೆಂದರೆ ಅಕ್ಕರೆ, ಪ್ರೀತಿಯೆಂದರೆ ಅಕ್ಕರೆ, ಪ್ರೀತಿಯೆಂದರೆ ಕರುಣೆ ಮತ್ತು ಪ್ರೀತಿಸುವುದೇ ಜೀವನ ಎಂದು ಸಾರಿ ಹೋದ ಆ ಮಮತಾಮಯಿಗೆ ಕಣ್ಮನ ತುಂಬಿದ ನಮಸ್ಕಾರ.

Advertisement

Udayavani is now on Telegram. Click here to join our channel and stay updated with the latest news.

Next