ಮುಂಬಯಿ: ವಿಜಯ್ ಹಜಾರೆ ಟ್ರೋಫಿಯ ಮುಂಬರುವ ಋತುವಿನ ಮೊದಲ ಮೂರು ಪಂದ್ಯಗಳಿಗೆ ಮಂಗಳವಾರ ಪ್ರಕಟಿಸಲಾದ ಮುಂಬೈ ತಂಡದಿಂದ ಪೃಥ್ವಿ ಶಾ ಅವರನ್ನು ಹೊರಗಿಡಲಾಗಿದೆ.
65 ಲಿಸ್ಟ್ ಎ ಪಂದ್ಯಗಳಿಂದ 125.74 ಸ್ಟ್ರೈಕ್ ರೇಟ್ನಲ್ಲಿ 55.72 ಸರಾಸರಿ ಹೊಂದಿರುವ ಶಾ, ಇತ್ತೀಚೆಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದ ಮುಂಬೈ ತಂಡದ ಅವಿಭಾಜ್ಯ ಅಂಗವಾಗಿದ್ದರು.
ಈ ಬಗ್ಗೆ ತೀವ್ರ ನೋವು ಹೊರ ಹಾಕಿರುವ ಪೃಥ್ವಿ ಶಾ ಅವರು Instagram ನಲ್ಲಿ ಸ್ಟೋರಿ ಪೋಸ್ಟ್ ಮಾಡಿದ್ದಾರೆ. ”ಓ ದೇವರೇ ನಾನು ಇನ್ನೇನೆಲ್ಲ ನೋಡಬೇಕು ಹೇಳು…65 ಇನ್ನಿಂಗ್ಸ್ಗಳು, 55.7 ರ ಸರಾಸರಿಯಲ್ಲಿ 126 ಸ್ಟ್ರೈಕ್ ರೇಟ್ನೊಂದಿಗೆ 3399 ರನ್ಗಳಿದ್ದೇನೆ. ಇದು ಸಾಕಾಗುವುದಿಲ್ಲವೇ? .ಆದರೆ ನಾನು ನಿಮ್ಮಲ್ಲಿ ನನ್ನ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ. ಜನರು ಇನ್ನೂ ನನ್ನನ್ನು ನಂಬುತ್ತಾರೆ ಎಂದು ಆಶಿಸುತ್ತೇನೆ…ನಾನು ಖಚಿತವಾಗಿ ಹಿಂತಿರುಗುತ್ತೇನೆ. ಓಂ ಸಾಯಿ ರಾಮ್” ಎಂದು ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.
ಮುಂಬೈ ತಂಡದ ನಾಯಕ ಶ್ರೇಯಸ್ ಅಯ್ಯರ್ ಪ್ರತಿಕ್ರಿಯಿಸಿದ್ದು “ನಾನು ವೈಯಕ್ತಿಕವಾಗಿ, ಶಾ ಗಾಡ್ ಗಿಫ್ಟ್ ಆಟಗಾರ ಎಂದು ಭಾವಿಸುತ್ತೇನೆ. ಒಬ್ಬ ವ್ಯಕ್ತಿಯಾಗಿ ಅವರು ಹೊಂದಿರುವ ಪ್ರತಿಭೆ, ಯಾರಲ್ಲೂ ಇಲ್ಲ, ಅದು ನಿಜ. ಆದರೆ ಅವರು ಕೆಲಸದ ನೀತಿಗಳಲ್ಲಿ ಸುಧಾರಿಸಿಕೊಳ್ಳಬೇಕು” ಎಂದಿದ್ದಾರೆ.
ಐಪಿಎಲ್ 2025 ರ ಹರಾಜಿನಲ್ಲಿ 75 ಲಕ್ಷ ರೂ ಮೂಲ ಬೆಲೆಯ ಹೊರತಾಗಿಯೂ ಶಾ ಮಾರಾಟವಾಗದೇ ಉಳಿಯುವ ಮೂಲಕ ಇತ್ತೀಚೆಗೆ ಸುದ್ದಿಯಾಗಿದ್ದರು. ಭಾರತೀಯ ಕ್ರಿಕೆಟ್ನ ಮುಂದಿನ ದೊಡ್ಡ ಭರವಸೆ ಎಂದು ಪರಿಗಣಿಸಲ್ಪಟ್ಟ ಆಟಗಾರನಿಗೆ ನಿರಂತರ ಅವಕಾಶ ಕೈತಪ್ಪುತ್ತಿರುವುದಕ್ಕೆ ವೈಯಕ್ತಿಕ ನಡವಳಿಕೆಯೇ ಕಾರಣ ಎಂದು ಹೇಳಲಾಗಿದೆ.
ಮುಂಬೈ ತಂಡ ಇಂತಿದೆ : ಶ್ರೇಯಸ್ ಅಯ್ಯರ್ (ನಾಯಕ), ಆಯುಷ್ ಮ್ಹಾತ್ರೆ, ಆಂಗ್ಕ್ರಿಶ್ ರಘುವಂಶಿ, ಜಯ್ ಬಿಸ್ತಾ, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ಸಿದ್ಧೇಶ್ ಲಾಡ್, ಹಾರ್ದಿಕ್ ತಮೋರ್ (ವಿ.ಕೀ), ಪ್ರಸಾದ್ ಪವಾರ್ (ವಿ.ಕೀ), ಅಥರ್ವ ಅಂಕೋಲೆಕರ್, ತನುಷ್ ಕೋಟ್ಯಾನ್, ಶಾರ್ದೂಲ್ ಠಾಕೂರ್, ರಾಯ್ಸ್ಟನ್ ಡಯಾಸ್, ಜುನೆದ್ ಖಾನ್, ಹರ್ಷ್ ತನ್ನಾ, ವಿನಾಯಕ್ ಭೋಯ್ರ್