Advertisement

ಶ್ರೀಗಳ ಎದುರು ಕುಳಿತಿದ್ದ ಶಾ “ಭಂಗಿ’ಗೆ ಅಸಮಾಧಾನ

09:34 AM Aug 15, 2017 | |

ಬೆಂಗಳೂರು: ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಆದಿಚುಂಚನಗಿರಿ ಮಠ ಹಾಗೂ ರವಿಶಂಕರ್‌ ಗುರೂಜಿ ಅವರ ಆರ್ಟ್‌
ಆಫ್ ಲಿವಿಂಗ್‌ ಆಶ್ರಮಕ್ಕೆ ಭೇಟಿ ನೀಡಿದ್ದಾಗ ಕಾಲಿನ ಮೇಲೆ ಕಾಲು ಹಾಕಿ ಕುಳಿತಿದ್ದ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.

Advertisement

ಭಾನುವಾರ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಿರ್ಮಲಾನಂದ ಸ್ವಾಮಿಗಳ ಮುಂದೆ ಅಮಿತ್‌ ಶಾ ಕಾಲಿನ ಮೇಲೆ ಕಾಲು ಹಾಕಿ ಕುಳಿತಿದ್ದರು. ಈ ಚಿತ್ರ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ ಟೀಕೆಗೊಳಗಾಯಿತು. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಆದಿಚುಂಚನಗಿರಿ ಮಠ ಸೇರಿ ಇತರೆ ಮಠಗಳಿಗೆ ಭೇಟಿ ನೀಡಿದಾಗ ಶ್ರೀಗಳ ಕಾಲಿಗೆ ನಮಸ್ಕರಿಸಿ ವಿನಮ್ರತೆಯಿಂದ ಕುಳಿತಿರುವ ಚಿತ್ರಗಳನ್ನು ಅಮಿತ್‌ ಶಾ ಚಿತ್ರಕ್ಕೆ ಹೋಲಿಕೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ಇದು ಮೊದಲಿಗೆ ಆಕ್ರೋಶಕ್ಕೆ ಕಾರಣವಾಗಿ ನಂತರ ಪರ-ವಿರೋಧ ಟೀಕೆ, ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಯಿತು. ಇದಕ್ಕೆ ಕೆಲವೆಡೆ ಆಕ್ಷೇಪವೂ ವ್ಯಕ್ತವಾಯಿತು ಸಂಜೆ ರವಿಶಂಕರ್‌ ಗುರೂಜಿ ಅವರ ಆರ್ಟ್‌ ಆಫ್ ಲಿವಿಂಗ್‌ ಆಶ್ರಮಕ್ಕೆ ಭೇಟಿ ನೀಡಿದ್ದಾಗ ವೇದಿಕೆಯ ಮೇಲೆ ರವಿಶಂಕರ್‌ ಗುರೂಜಿ ಪಕ್ಕ ಕುಳಿತಿದ್ದ ಅಮಿತ್‌ ಶಾ, ಆಗಲೂ ಕಾಲಿನ ಮೇಲೆ ಕಾಲು ಹಾಕಿ ಕುಳಿತಿದ್ದರು. ಈ ಚಿತ್ರವೂ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ ಹರಿದಾಡಿತು.

ಅಮಿತ್‌ ಶಾ ಎಲ್ಲೇ ಹೋದರೂ ಇದೇ ರೀತಿ ವರ್ತನೆ ತೋರುತ್ತಾರೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆದು ಇದಕ್ಕೂ ಪರ-ವಿರುದ್ಧ
ಪ್ರತಿಕ್ರಿಯೆಗಳು ವ್ಯಕ್ತವಾದವು. ಸೋಮವಾರ ಇಡೀ ದಿನ ಇದರ ಬಗ್ಗೆಯೇ ರಾಜಕೀಯ ವಲಯಗಳಲ್ಲಿ ಚರ್ಚೆ ನಡೆದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಪುಟ್ಟರಾಜು, ಜೆಡಿಎಸ್‌ ಮುಖಂಡ ಎಚ್‌.ವಿಶ್ವನಾಥ್‌ ಅವರು ಬಹಿರಂಗವಾಗಿಯೇ ಅಮಿತ್‌ ಶಾ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದರು. ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಸಹ ಟ್ವಿಟ್ಟರ್‌ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು. ಆದರೆ, ಅಮಿತ್‌ ಶಾಗೆ ಸಂಬಂಧಿಸಿದ
ವಿಷಯದಲ್ಲಿ ಬಿಜೆಪಿ ಮೌನ ವಹಿಸಿದ್ದು, ಪ್ರಮುಖ ನಾಯಕರ್ಯಾರೂ ಪ್ರತಿಕ್ರಿಯೆ ನೀಡಲಿಲ್ಲ. 

ಅಗೌರವ ತೋರುವ ರೀತಿ ನಡೆದುಕೊಂಡಿಲ್ಲ: ಶ್ರೀ ಸ್ಪಷ್ಟನೆ
ಬೆಂಗಳೂರು: ವಿವಾದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, “ಶಾ ಅವರು ತಮಗೆ ಅಗೌರವ ತೋರುವ ರೀತಿಯಲ್ಲಿ ನಡೆದುಕೊಂಡಿಲ್ಲ’ ಎಂದು ಹೇಳಿದ್ದಾರೆ. “ತಾವು ಭಕ್ತರೊಡನೆ ಇದ್ದ ಸಂದರ್ಭದಲ್ಲಿ ನಮ್ಮ ಕಚೇರಿಯಲ್ಲಿ ಅಮಿತ್‌ ಶಾರವರು ಪರಮಾತ್ಮಾನಂದ ಸರಸ್ವತಿ ಸ್ವಾಮಿಗಳೊಂದಿಗೆ ಚರ್ಚೆಯಲ್ಲಿದ್ದರು. ತಮ್ಮ ಅಭ್ಯಾಸದಂತೆ ಕಾಲಿನ ಮೇಲೆ ಕಾಲು ಹಾಕಿ ಕುಳಿತಿದ್ದರು. ತಾವು ಒಳಗೆ ಪ್ರವೇಶಿಸಿದ್ದನ್ನು ಗಮನಿಸಿರಲಿಲ್ಲ. ಗಮನಿಸಿದ ಮೇಲೆ ಶಾ ಅವರು ಕಾಲನ್ನು ಕೆಳಗಿಳಿಸಿ, ಎದ್ದು ಗೌರವಿಸಿ ಮತ್ತೆ ಕುಳಿತರು. ಆದ್ದರಿಂದ ನಮಗೆ ಅಗೌರವ ತೋರಿದ್ದಾರೆ ಎಂದು ಯಾರೂ ಭಾವಿಸಬಾರದು’ ಎಂಬುದಾಗಿ ಮನವಿ ಮಾಡಿದ್ದಾರೆ. ಆದರೆ, ಮಠದ ಗುರುಗಳ ಮುಂದೆ ಅಮಿತ್‌ ಶಾ ಕಾಲಮೇಲೆ ಕಾಲು ಹಾಕಿ ಕುಳಿತು ಅಗೌರವ ತೋರಿಸಿದ್ದಾರೆ ಎಂಬ ವಿಚಾರ ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ. ರಾಜಕೀಯದ ಹೊರತಾಗಿಯೂ ಶಾ ಅವರು ತಮ್ಮನ್ನು ಈ ಹಿಂದೆ ಹಲವು ಬಾರಿ ಭೇಟಿಯಾದಾಗಲೆಲ್ಲ ರವಪೂರ್ವಕವಾಗಿ ಕಂಡಿದ್ದಾರೆ. ಆದ್ದರಿಂದ ಶಾ ಅವರಿಂದ ಪೀಠಕ್ಕೆ ಅಗೌರವವಾಗಿದೆ ಎಂದು ತಾವು ಭಾವಿಸುವುದಿಲ್ಲ. ಭಕ್ತರೂ ಭಾವಿಸಬಾರದೆಂದು ಈ ಮೂಲಕ ಆಶಿಸುವುದಾಗಿ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದ್ದಾರೆ.

ಆದಿಚುಂಚನಗಿರಿ ಮಠದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ನಡೆದುಕೊಂಡ ರೀತಿ ಕುರಿತು ಏನನ್ನೂ ಹೇಳಲು ಇಚ್ಛಿಸುವುದಿಲ್ಲ. ವಿನಾಕಾರಣ ವ್ಯಕ್ತಿಯೊಬ್ಬರ ತೇಜೋವಧೆ ಮಾಡುವುದು ಸರಿಯಲ್ಲ. 
ಎಚ್‌.ಡಿ. ದೇವೇಗೌಡ, ಮಾಜಿ ಪ್ರಧಾನಿ.

Advertisement

ಅಮಿತ್‌ ಶಾ ಬಗ್ಗೆ ನಾನೇನೂ ಮಾತನಾಡುವುದಿಲ್ಲ. ಆದರೆ, ಮಠಗಳ ಬಗ್ಗೆ ನಮಗೆಲ್ಲ ಒಂದು ರೀತಿಯ ಗೌರವ ಇದೆ. ಬಂದವರು ಯಾವ
ರೀತಿ ನಡೆದುಕೊಳ್ಳಬೇಕು, ಎಲ್ಲಿ ಹೇಗಿರಬೇಕು ಎಂಬುದು  ತಿಳಿದುಕೊಳ್ಳಬೇಕು. ಅದು ಅವರ ಸಂಸ್ಕೃತಿ ತೋರಿಸುತ್ತದೆ.

ಸಿದ್ದರಾಮಯ್ಯ, ಮುಖ್ಯಮಂತ್ರಿ

ಅಮಿತ್‌ ಶಾ ಅವರ ನಡೆ ದುರಂಹಕಾರದ ಪರಮಾವಧಿ. ಇದು ಅವರ ಸಂಸ್ಕೃತಿ ಬಿಂಬಿಸುತ್ತದೆ. ಈ ವರ್ತನೆ ಮಠದ ಭಕ್ತನಾಗಿರುವ ನನಗೆ ತೀವ್ರ
ನೋವುಂಟುಮಾಡಿದೆ.

ಸಿ.ಎಸ್‌.ಪುಟ್ಟರಾಜು, ಜೆಡಿಎಸ್‌ ಸಂಸದ

ಮಠ-ಮಾನ್ಯಗಳ ಶ್ರೀಗಳ ಬಳಿ ಹೋದಾಗ ಸಭ್ಯತೆ ಮುಖ್ಯ. ಆದಿಚುಂಚನಗಿರಿ ಮತ್ತು ರವಿಶಂಕರ್‌ ಗುರೂಜಿ ಆಶ್ರಮದಲ್ಲಿ ಅಮಿತ್‌ ಶಾ ಅವರ ವರ್ತನೆ
ನಿಜಕ್ಕೂ ಶೋಭೆ ತರುವುದಿಲ್ಲ. ಇದು ಗುರುಪರಂಪರೆಗೆ ಮಾಡಿದ ಅವಮಾನ.

ಎಚ್‌.ವಿಶ್ವನಾಥ್‌, ಮಾಜಿ ಸಚಿವ

ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದ ಶ್ರೀಗಳ ಎದುರು ಕಾಲಿನ ಮೇಲೆ ಕಾಲು ಹಾಕಿ ಕುಳಿತು ಅಗೌರವ ತೋರಿರುವ ಅಮಿತ್‌ ಶಾ ಕೂಡಲೇ ಕ್ಷಮೆಯಾಚಿಸಬೇಕು.
ಚೆಲುವರಾಯಸ್ವಾಮಿ, ಜೆಡಿಎಸ್‌ ಬಂಡಾಯ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next