Advertisement

Shaurya Jagran Rath Yatra: ಉಡುಪಿ ಜಿಲ್ಲೆ ಪ್ರವೇಶಿಸದಂತೆ ಶರಣ್ ಪಂಪ್‌ವೆಲ್ ಗೆ ನಿರ್ಬಂಧ

03:54 PM Oct 10, 2023 | Team Udayavani |

ಉಡುಪಿ: ವಿಎಚ್ ಪಿ- ಬಜರಂಗದಳ ವತಿಯಿಂದ ಉಡುಪಿಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ಶೌರ್ಯ ಜಾಗರಣ ರಥಯಾತ್ರೆ ಸಮಾರೋಪ ಹಾಗೂ ಹಿಂದೂ ಸಮಾಜೋತ್ಸವ ಹಿನ್ನೆಲೆಯಲ್ಲಿ ಹೈಕೋರ್ಟ್‌ ಆದೇಶದಂತೆ ವಿಎಚ್ ಪಿ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಗೆ ಉಡುಪಿ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

Advertisement

ಇತ್ತೀಚೆಗೆ ನಡೆದ ಉಡುಪಿಯ ಕಾಲೇಜೊಂದರ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣದ ಪ್ರತಿಭಟನೆಯಲ್ಲಿ ಶರಣ್ ಪಂಪ್‌ವೆಲ್ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದರು. ಈ ಸಂಬಂಧ ಅವರ ವಿರುದ್ಧ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.

ಈ ಪ್ರಕರಣದಲ್ಲಿ ಉಡುಪಿ ನ್ಯಾಯಾಲಯದ ಮೂಲಕ ಜಾಮೀನು ಪಡೆದುಕೊಂಡಿರುವ ಶರಣ್ ಪಂಪ್‌ವೆಲ್ ಗೆ ಯಾವುದೇ ಪೂರ್ವಾನುಮತಿ ಇಲ್ಲದೆ ದಕ್ಷಿಣ ಕನ್ನಡ ಜಿಲ್ಲೆ ಬಿಟ್ಟು ಹೋಗದಂತೆ ಷರತ್ತು ವಿಧಿಸಲಾಗಿತ್ತು, ಅದರಂತೆ ಪೊಲೀಸರು ಅವರಿಗೆ ಇಂದಿನ ಉಡುಪಿಯ ಹಿಂದೂ ಸಮಾಜೋತ್ಸವದಲ್ಲಿ ಭಾಗವಹಿಸದಂತೆ ತಡೆಯೊಡ್ಡಿದ್ದಾರೆ.

ಉಡುಪಿಯ ಸಮಾಜೋತ್ಸವದಲ್ಲಿ ಭಾಗವಹಿಸಿದರೆ ಅವರನ್ನು ಜಾಮೀನು ನಿಯಮ ಉಲ್ಲಂಘನೆ ಆರೋಪದಡಿ ಪೊಲೀಸರು ಬಂಧಿಸುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಅವರು ಉಡುಪಿ ಪೊಲೀಸರ ಆದೇಶದ ಬಗ್ಗೆ ತಿಳಿದು ಹೆಜಮಾಡಿಯಿಂದ ವಾಪಸ್ಸಾಗಿರುವ ಮಾಹಿತಿ ಲಭಿಸಿದೆ.

ಈ ಬಗ್ಗೆ ಮಾತನಾಡಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ., ನ್ಯಾಯಾಲಯ ನೀಡಿರುವ ಜಾಮೀನಿನಲ್ಲಿನ ಷರತ್ತಿನ ಅನ್ವಯ ಶರಣ್ ಪಂಪ್‌ವೆಲ್ ಅನುಮತಿ ಇಲ್ಲಿದೆ ದ.ಕ. ಜಿಲ್ಲೆ ಬಿಟ್ಟು ಹೋಗುವಂತಿಲ್ಲ. ಒಂದು ವೇಳೆ ಅದನ್ನು ಉಲ್ಲಂಘಿಸಿ ಉಡುಪಿ ಜಿಲ್ಲೆಗೆ ಆಗಮಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು

Advertisement
Advertisement

Udayavani is now on Telegram. Click here to join our channel and stay updated with the latest news.

Next