ಲಂಡನ್ : ನಟ – ರಾಜಕಾರಣಿ ಶತ್ರುಘ್ನ ಸಿನ್ಹಾ ಅವರಿಗೆ ಲಂಡನ್‌ನಲ್ಲಿನ ಸಂಸದೀಯ ಸಂಕೀರ್ಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಶತ್ರುಘ್ನ ಸಿನ್ಹಾ ಅವರು ಕಲೆ ಮತ್ತು ರಾಜಕಾರಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಪ್ರಶಸ್ತಿ ನೀಡಲಾಗಿದೆ.
ಬ್ರಿಟನ್‌ನ ಏಶ್ಯನ್ ವಾಯ್ಸ ಸಾಪ್ತಾಹಿಕ ಸುದ್ದಿ ಪತ್ರಿಕೆ ತನ್ನ ಹನ್ನೆರಡನೇ ವರ್ಷದ “ಕಲೆ ಮತ್ತು ಸಾರ್ವಜನಿಕ ಜೀವನ ಪ್ರಶಸ್ತಿ’ಯನ್ನು ನೀಡಿತು.
“ಆತ್ಮವಿಶ್ವಾಸದಿಂದ ಬದ್ಧತೆ, ಬದ್ಧತೆಯಿಂದ ದೃಢ ಸಂಕಲ್ಪ, ದೃಢ ಸಂಕಲ್ಪದಿಂದ ಭಕ್ತಿ ದೊರಕುತ್ತದೆ. ಈ ಮೂರೂ ಒಟ್ಟಾದಗಲೇ ಮನುಷ್ಯನಿಗೆ ಆತ್ಮಾನಂದ ಪ್ರಾಪ್ತವಾಗುತ್ತದೆ’ ಎಂದು 72ರ ಹರೆಯದ ಶತ್ರುಘ್ನ ಸಿನ್ಹಾ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಈ ಪ್ರಶಸ್ತಿಯ ಮೂಲಕ ನನಗೆ ಇದೇ ಮೊದಲ ಬಾರಿಗೆ ಐತಿಹಾಸಿಕ ವೆಸ್ಟ್ ಮಿನಿಸ್ಟರ್ ಪ್ಯಾಲೇಸ್ ಸಂದರ್ಶಿಸುವ ಅವಕಾಶ ಪ್ರಾಪ್ತವಾಗಿದೆ ಎಂದು ಸಿನ್ಹಾ ಸಂತಸದಿಂದ ನುಡಿದರು.
1960ರಲ್ಲಿ ನಟನಾಗಿ ಹಿಂದಿ ಚಿತ್ರರಂಗ ಪ್ರವೇಶಿಸಿದ ಶತ್ರುಘ್ನ ಸಿನ್ಹಾ ಈಗ 225 ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮಾತ್ರವಲ್ಲದೆ ಇತರ ಕೆಲವು ಭಾರತೀಯ ಭಾಷಾ ಚಿತ್ರಗಳಲ್ಲೂ ನಟಿಸಿದ್ದಾರೆ.
ಆಳುವ ಬಿಜೆಪಿ ಸದಸ್ಯನಾಗಿರುವ ಅವರು ಬಿಹಾರದ ಪಟ್ನಾ ಸಾಹಿಬ್ ಸಂಸದೀಯ ಕ್ಷೇತ್ರವನ್ನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ.
ಈ ಬಾರಿಯ ಜೀವಮಾನ ಸಾಧನೆಯ ಪ್ರಶಸ್ತಿ ಪಡೆದಿರುವ ಇನ್ನೊಬ್ಬರೆಂದರೆ ಯುಕೆ ಕ್ಯಾಬಿನೆಟ್ ಮಿನಿಸ್ಟರ್ ಸಾಜಿದ್ ಜಾವೀದ್.