Advertisement

ಉಪಚುನಾವಣೆ: ಬಿಜೆಪಿಗೆ ಸೆಡ್ಡು ಹೊಡೆದ ಶತ್ರುಘ್ನ ಸಿನ್ಹಾ,ಬಾಬುಲ್ ಗೆ ಟಿಎಂಸಿ ಟಿಕೆಟ್‌

12:56 PM Mar 13, 2022 | Team Udayavani |

ಕೋಲ್ಕತಾ : ಮಾಜಿ ಕೇಂದ್ರ ಸಚಿವರಾದ ಶತ್ರುಘ್ನ ಸಿನ್ಹಾ ಮತ್ತು ಬಾಬುಲ್ ಸುಪ್ರಿಯೊ ಅವರು ಅನುಕ್ರಮವಾಗಿ ಅಸನ್ಸೋಲ್‌ನಿಂದ ಲೋಕಸಭೆಯ ಉಪಚುನಾವಣೆಗೆ ಮತ್ತು ಬ್ಯಾಲಿಗುಂಗೆಯಿಂದ ವಿಧಾನಸಭಾ ಉಪಚುನಾವಣೆಗೆ ಟಿಎಂಸಿ ಅಭ್ಯರ್ಥಿಗಳನ್ನಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಘೋಷಣೆ ಮಾಡಿದ್ದಾರೆ.

Advertisement

ಅಸನ್ಸೋಲ್ ಲೋಕಸಭಾ ಉಪಚುನಾವಣೆಯಲ್ಲಿ ಮಾಜಿ ಕೇಂದ್ರ ಸಚಿವ ಮತ್ತು ಖ್ಯಾತ ನಟ, ಶತ್ರುಘ್ನ ಸಿನ್ಹಾ ಅವರು ನಮ್ಮ ಅಭ್ಯರ್ಥಿ ಎಂದು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪರವಾಗಿ ಘೋಷಿಸಲು ಸಂತೋಷವಾಗಿದೆ ಎಂದು ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

ಇನ್ನೊಂದು ಟ್ವೀಟ್ ನಲ್ಲಿ , ಮಾಜಿ ಕೇಂದ್ರ ಸಚಿವ ಹಾಗೂ ಖ್ಯಾತ ಗಾಯಕ ಬಾಬುಲ್ ಸುಪ್ರಿಯೋ ಅವರು ಬ್ಯಾಲಿಗುಂಗೆಯಿಂದ ವಿಧಾನಸಭಾ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯಾಗಲಿದ್ದಾರೆ. ಜೈ ಹಿಂದ್, ಜೈ ಬಾಂಗ್ಲಾ, ಜೈ ಮಾ- ಮತಿ- ಮನುಷ್! ಎಂದು ಬರೆದಿದ್ದಾರೆ.

ಇಬ್ಬರೂ ಬಿಜೆಪಿಗೆ ಸೆಡ್ಡು ಹೊಡೆದವರು

ಎರಡು ಬಾರಿ ಬಿಜೆಪಿಯಿಂದ ಲೋಕಸಭೆಗೆ ಅಸನ್ಸೋಲ್‌ನಿಂದ ಆಯ್ಕೆಯಾಗಿದ್ದ ಬಾಬುಲ್ ಸುಪ್ರಿಯೊ ಕೇಂದ್ರ ಸಚಿವರಾಗಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಕೆಲಸ ಮಾಡಿದ್ದರು. ಬಳಿಕ ಬಿಜೆಪಿ ವಿರುದ್ಧ ಸಿಡಿದೆದ್ದು, ಪಕ್ಷಕ್ಕೆ ರಾಜೇನಾಮೆ ನೀಡಿದ್ದರು.

Advertisement

31 ಜುಲೈ 2021 ರಂದು, ಬಾಬುಲ್ ಸುಪ್ರಿಯೊ ಅವರು ರಾಜಕೀಯವನ್ನು ತೊರೆಯುವ ನಿರ್ಧಾರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. 18 ಸೆಪ್ಟೆಂಬರ್ 2021 ರಂದು ಅವರು ಅಭಿಷೇಕ್ ಬ್ಯಾನರ್ಜಿಯವರ ಉಪಸ್ಥಿತಿಯಲ್ಲಿ ತೃಣಮೂಲ ಕಾಂಗ್ರೆಸ್ ಸೇರಿದ್ದರು . ಅವರ ರಾಜೇನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಮಾಜಿ ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.

ಸಿನ್ಹಾ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಆರಂಭಿಸಿ, ಬಳಿಕ ಬಿಜೆಪಿ ಸೇರಿ 1996 ರಿಂದ 2008 ರ ವರೆಗೆ ರಾಜ್ಯ ಸಭಾ ಸದಸ್ಯರಾಗಿದ್ದ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಕೆಲಸ ಮಾಡಿದ್ದರು. 2009 ರ ಭಾರತೀಯ ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಹಾರದ ಪಾಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದರು. 2014 ರ ಚುನಾವಣೆಯಲ್ಲೂ ಗೆದ್ದ ಅವರು ಬಳಿಕ ಬಿಜೆಪಿ ವಿರುದ್ಧ ಮುನಿಸಿಕೊಂಡಿದ್ದರು.

6 ಏಪ್ರಿಲ್ 2019 ರಂದು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೆವಾಲಾ ಅವರ ಉಪಸ್ಥಿತಿಯಲ್ಲಿ ಸಿನ್ಹಾ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಸೇರಿದ್ದರು, ಈಗ ಟಿಎಂಸಿ ಮೂಲಕ ಹೊಸ ರಾಜಕೀಯ ಭವಿಷ್ಯ ಕಂಡು ಕೊಳ್ಳಲು ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next