ಬಾದಾರ: ಕೂಡ್ಲು ಬಾದಾರ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಉತ್ಸವವು ಶ್ರೀ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಅರವತ್ ದಾಮೋದರ ತಂತ್ರಿವರ್ಯರ ಮಾರ್ಗದರ್ಶನದಲ್ಲಿ ತಂತ್ರಿವರ್ಯರಾದ ಅರವತ್ ಪದ್ಮನಾಭನ್ ತಂತ್ರಿಗಳ ನೇತೃತ್ವದಲ್ಲಿ, ಅರ್ಚಕರಾದ ಸುಬ್ರಾಯ ಕಾರಂತ, ಸಹಾಯಕ ಅರ್ಚಕರಾದ ಗೋಪಾಲಕೃಷ್ಣ ಕಾರಂತ ಅವರ ಸಹಕಾರದೊಂದಿಗೆ ಜರಗಿತು.
ಡಿ.12ರಂದು ಸಾಮೂಹಿಕ ನಾಗತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಿತು. ಸಂಜೆ ಪುಣ್ಯಾಹ, ಪ್ರಾಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ ಜರಗಿತು. ರಾತ್ರಿ 7ಗಂಟೆಗೆ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮಹಿಳಾ ಸಂಘದ ನೇತೃತ್ವದಲ್ಲಿ ಊರ ಮಕ್ಕಳಿಂದ ನೃತ್ಯ ಸಂಗಮ ನಡೆಯಿುತು. ಡಿ.13 ರಂದು ಬೆಳಗ್ಗೆ ಗಣಪತಿಹವನ ಬಿಂಬ ಶುದ್ಧಿ, ಕಲಶ ಪೂಜೆ, ಕಲಶಾಭಿಷೇಕ ಮಹಾಪೂಜೆ, ಶ್ರೀನಾಗ ಸನ್ನಿಧಿ ಹಾಗು ರಕ್ತೇಶ್ವರಿ ಗುಳಿಗ ಸನ್ನಿಧಿಯಲ್ಲಿ ತಂಬಿಲ ಮತ್ತು ಪೂಜೆ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ಜರಗಿತು. ಮಧೂರು ಶ್ರೀ ಮಹಾಗಣಪತಿ ಯಕ್ಷಗಾನ ಕಲಾ ಸಂಘ, ಕಾಸರಗೋಡು ಇವರಿಂದ ಯಕ್ಷಗಾನ ತಾಳಮದ್ದಳೆ ಜರಗಿತು. ಸಂಜೆ ತಾಯಂಬಕ ನಂತರ ಶೇಷವನ ಭಕ್ತವೃಂದದವರಿಂದ ಭಜನೆ, ರಾತ್ರಿ ಪೂಜೆ ಶ್ರೀ ಭೂತಬಲಿ, ವಿಶೇಷ ಪಂಚವಾದ್ಯ ಸೇವೆ, ಸಿಡಿಮದ್ದು ಸೇವೆ, ದರ್ಶನಬಲಿ ನೆರವೇರಿತು.
ಅನುವಂಶಿಕ ಮೊಕ್ತೇಸರ ಸದಾಶಿವ, ಆಡಳಿತ ಮೊಕ್ತೇಸರ ವೇಣುಗೋಪಾಲ ಕೂಡ್ಲು, ಕಾರ್ಯದರ್ಶಿ ಸುರೇಶ್ ಮಣಿಯಾಣಿ, ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ, ಹಾಗು ಟ್ರಸ್ಟಿಗಳು, ಉತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಮಧೂರು ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀಕೃಷ್ಣ ಉಪಾದ್ಯಾಯ, ಕಾರ್ಯದರ್ಶಿ ವೇಣುಗೋಪಾಲ ಬಾಮ, ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಯುವಕ ಸಂಘ, ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮಹಿಳಾ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.
ಕಾಸರಗೋಡು: ನಾಡಿನಾದ್ಯಂತ ಭಕ್ತಿ, ಶ್ರದ್ಧೆ, ಸಂಭ್ರಮ, ಸಡಗರದಿಂದ ಷಷ್ಠಿ ಮಹೋತ್ಸವ ಆಚರಿಸಲಾಯಿತು. ಶಿವಪಾರ್ವತಿಯರ ಪುತ್ರನಾದ ಸುಬ್ರಹ್ಮಣ್ಯನ ಜನ್ಮದಿನವಾದ ಗುರುವಾರ ವೈವಿಧ್ಯಮಯವಾಗಿ ಆಚರಿಸಲಾಯಿತು. ಜಿಲ್ಲೆಯ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ, ಮಂದಿರಗಳಲ್ಲಿ ವಿಜೃಂಭಣೆಯಿಂದ ಉತ್ಸವವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ನಡೆಯಿತು.
ಇತಿಹಾಸ ಪ್ರಸಿದ್ಧ ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ, ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನ, ಪುತ್ತಿಗೆ ಶ್ರೀ ಸುಬ್ರಾಯ ದೇವಸ್ಥಾನ, ಅಡ್ಕತ್ತಬೈಲು ಸುಬ್ರಹ್ಮಣ್ಯ ಮಂದಿರ, ನೆಲ್ಲಿಕುಂಜೆಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ವಿವಿಧ ಮಂದಿರಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಯೊಂದಿಗೆ ಷಷ್ಠಿ ಮಹೋತ್ಸವ ಆಚರಿಸಲಾಯಿತು. ಬೆಳಗ್ಗಿನಿಂದಲೇ ದೇವಸ್ಥಾನ, ಮಂದಿರಗಳಲ್ಲಿ ಭಕ್ತರು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು. ಮಂಜೇಶ್ವರದ ಶ್ರೀಮತ್ ಅನಂತೇಶ್ವರ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವದ ಅಂಗವಾಗಿ ಮಧ್ಯಾಹ್ನ ಮಹಾಪೂಜೆ, ಯಜ್ಞ, ಪೂರ್ಣಾಹುತಿ, ಯಜ್ಞಾರತಿ, ಸ್ವರ್ಣ ಲಾಲಕಿಯಲ್ಲಿ ಬಲಿ ಉತ್ಸವ, ರಥಾರೋಹಣ, ರಾತ್ರಿ ರಥಾವರೋಹಣ, ದೇವಳದ ಪಲ್ಲಕಿಯಲ್ಲಿ ಪ್ರದಕ್ಷಿಣೆ, ಮಂಗಳಾರತಿ, ಮಹಾಸಮಾರಾಧನೆ ಜರಗಿತು.