ಹೊಸದಿಲ್ಲಿ : ಪತ್ನಿ ಸುನಂದಾ ಪುಷ್ಕರ್ ನಿಗೂಢ ಸಾವಿನ ಪ್ರಕರಣದಲ್ಲಿ ಆಕೆಯ ಪತಿ, ಕಾಂಗ್ರೆಸ್ ನಾಯಕ ಶಶಿ ತರೂರ್ ಅವರಿಗೆ ಇಲ್ಲಿನ ಪಟಿಯಾಲಾ ಹೌಸ್ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ತರೂರ್ ಅವರು ಇದಕ್ಕಾಗಿ 1 ಲಕ್ಷ ರೂ. ಮೌಲ್ಯದ ಬೇಲ್ ಬಾಂಡ್ ಒದಗಿಸಬೇಕಾಗುತ್ತದೆ.
ತರೂರ್ ಅವರು ಕೋರ್ಟಿನ ಪೂರ್ವಾನುಮತಿ ಇಲ್ಲದೆ ವಿದೇಶಕ್ಕೆ ಹೋಗುವಂತಿಲ್ಲ ಮತ್ತು ಸಾಕ್ಷ್ಯಗಳನ್ನು ತಿರುಚುವಂತಿಲ್ಲ ಅಥವಾ ಸಾಕ್ಷಿದಾರರಿಗೆ ಬೆದರಿಕೆ ಹಾಕುವಂತಿಲ್ಲ ಎಂದು ನ್ಯಾಯಾಲಯ ಶರತ್ತು ಹಾಕಿದೆ.
ನಿನ್ನೆ ಬುಧವಾರ ದಿಲ್ಲಿ ನ್ಯಾಯಾಲಯ ತರೂರ್ ಅವರ ನಿರೀಕ್ಷಣಾ ಜಾಮೀನಿನ ತೀರ್ಪನ್ನು ಇಂದಿಗೆ ಕಾದಿರಿಸಿತ್ತು. ತರೂರ್ ಅವರು ನಿರೀಕ್ಷಣಾ ಜಾಮೀನು ಕೋರಿದ ಕೋರಿದ ಎರಡು ದಿನಗಳ ತರುವಾಯ ಈ ಬೆಳವಣಿಗೆಗಳು ಕಂಡು ಬಂದವು.
ತಿರುವನಂತಪುರದ ಸಂಸದರಾಗಿರುವ ತರೂರ್ ಅವರನ್ನು ಈಗಾಗಲೇ ದಿಲ್ಲಿಯ ಮ್ಯಾಜಿಸ್ಟ್ರೇಟರ ನ್ಯಾಯಾಲಯ ಸುನಂದಾ ನಿಗೂಢ ಸಾವಿನ ಪ್ರಕರಣದ ಆರೋಪಿಯಾಗಿ ತನ್ನ ಮುಂದೆ ಹಾಜರಾಗಬೇಕೆಂದುಈ ಹಿಂದೆ ಸಮನ್ಸ್ ಜಾರಿ ಮಾಡಿತ್ತು. ತರೂರ್ ತನ್ನ ವಿರುದ್ಧದ ಆರೋಪಗಳು ನಿರಾಧಾರವಾದುದೆಂದು ಹೇಳಿದ್ದರು. ಜುಲೈ 7ರಂದು ಈ ಪ್ರಕರಣದ ವಿಚಾರಣೆ ನಡೆಯಲಿದೆ.