ನವದೆಹಲಿ: ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಮತ್ತು ತಿರುವನಂತಪುರಂ ಸಂಸದ ಶಶಿ ತರೂರ್ ನಡುವೆ ನಡೆದ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಮತಎಣಿಕೆ ಬುಧವಾರ (ಅಕ್ಟೋಬರ್ 19) ಬೆಳಗ್ಗೆ ಆರಂಭಗೊಂಡಿದೆ. ಏತನ್ಮಧ್ಯೆ ಉತ್ತರಪ್ರದೇಶದಲ್ಲಿನ ಮತದಾನ ಪ್ರಕ್ರಿಯೆಯಲ್ಲಿ ಗಂಭೀರವಾದ ಅಕ್ರಮ ನಡೆದಿರುವುದಾಗಿ ಪ್ರತಿಸ್ಪರ್ಧಿ ತರೂರ್ ಆರೋಪಿಸಿದ್ದಾರೆ.
ಇದನ್ನೂ ಓದಿ:ಚುನಾವಣೆಯಲ್ಲಿ ನೆಲಕಚ್ಚುವ ವರೆಗೂ ಕಾಂಗ್ರೆಸ್ ಹೇಳಿಕೆ ಕೊಡ್ತಾನೆ ಇರುತ್ತೆ: ಈಶ್ವರಪ್ಪ ಕಿಡಿ
“ಮತದಾನ ಪ್ರಕ್ರಿಯೆಯಲ್ಲಿ ನಡೆದ ಅಕ್ರಮ ಹಾಗೂ ಹಲವಾರು ವಿಷಯಗಳ ಕುರಿತು ನಾವು ಮಧುಸೂದನ್ ಮಿಸ್ತ್ರಿ ಅವರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಶಶಿ ತರೂರ್ ಚುನಾವಣಾ ಏಜೆಂಟ್ ಸಲ್ಮಾನ್ ಸೋಝ್ ತಿಳಿಸಿದ್ದಾರೆ.
24 ವರ್ಷಗಳ ಬಳಿಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಇಂದು ಮತಎಣಿಕೆ ನಡೆಯುತ್ತಿದ್ದು, ಮಧ್ಯಾಹ್ನ 4ಗಂಟೆಯೊಳಗೆ ಫಲಿತಾಂಶ ಘೋಷಣೆಯಾಗುವ ನಿರೀಕ್ಷೆ ಇದೆ ಎಂದು ವರದಿ ತಿಳಿಸಿದೆ.
24 ವರ್ಷಗಳ ಬಳಿಕ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಗಾಂಧಿ ಕುಟುಂಬದ ಯಾವ ಸದಸ್ಯರು ಅಖಾಡಕ್ಕಿಳಿದಿಲ್ಲ, ಆದರೆ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಗಾಂಧಿ ಕುಟುಂಬದ ನಿಷ್ಠವಂತರಾಗಿದ್ದು, ಪರೋಕ್ಷವಾಗಿ ಬೆಂಬಲ ಪಡೆದಿದ್ದು, ಜಿ.23 ಗುಂಪಿನಿಂದ ಶಶಿ ತರೂರ್ ಪ್ರತಿಸ್ಪರ್ಧಿಯಾಗಿ ಅಖಾಡಕ್ಕಿಳಿದಿದ್ದರು.
ನೂತನ ಅಧ್ಯಕ್ಷರ ಆಯ್ಕೆಯೊಂದಿಗೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಸ್ಥಾನಕ್ಕೆ ನೇಮಕವಾಗಲಿದ್ದಾರೆ. ಇದರೊಂದಿಗೆ 24 ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಗಾಂಧಿಯೇತರ ಕುಟುಂಬದ ಅಧ್ಯಕ್ಷರ ಆಯ್ಕೆಯಾದಂತಾಗಲಿದೆ ಎಂದು ವರದಿ ವಿವರಿಸಿದೆ.