ನವದೆಹಲಿ: ವಿಶ್ವಾದ್ಯಂತ ಕೋವಿಡ್ 19 ಸೋಂಕು ಪ್ರಕರಣ ಕ್ಷಿಪ್ರವಾಗಿ ಹರಡುತ್ತಿರುವುದಾಗಿ ಎಚ್ಚರಿಸಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತದ ಸುಮಾರು 300 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.5ಕ್ಕಿಂತಲೂ ಹೆಚ್ಚಾಗಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:ಸಂಕ್ರಾಂತಿ ಬಳಿಕ ದೇವೇಗೌಡರ ದತ್ತು ಪುತ್ರ ದತ್ತ ಕಾಂಗ್ರೆಸ್‌ನತ್ತ?
ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ, 159 ದೇಶಗಳಲ್ಲಿ ಕೋವಿಡ್ 19 ಸೋಂಕು ಪ್ರಕರಣ ಭಾರೀ ಹೆಚ್ಚಳವಾಗಿದೆ. ಯುರೋಪ್ ನ ಎಂಟು ದೇಶಗಳಲ್ಲಿ ಕಳೆದ ಎರಡು ವಾರಕ್ಕಿಂತಲೂ ಎರಡು ಪಟ್ಟು ಅಧಿಕ ಪ್ರಕರಣ ಪತ್ತೆಯಾಗಿರುವುದಾಗಿ ವರದಿ ವಿವರಿಸಿದೆ.
ಜಾಗತಿಕವಾಗಿ ಕೋವಿಡ್ ಪ್ರಕರಣಗಳ ಸಂಖ್ಯೆ ಜನವರಿ 10ರಿಂದ ಏರಿಕೆಯಾಗತೊಡಗಿದ್ದು, ವಿಶ್ವಾದ್ಯಂತ ಒಂದೇ ದಿನದಲ್ಲಿ 31.59 ಲಕ್ಷ ಕೋವಿಡ್ ಪ್ರಕರಣ ವರದಿಯಾಗಿರುವುದಾಗಿ ತಿಳಿಸಿದ್ದಾರೆ.
ಭಾರತದಲ್ಲಿಯೂ ಕೋವಿಡ್ ಪ್ರಕರಣ ಹೆಚ್ಚಳವಾಗುತ್ತಿರುವುದರ ಕುರಿತು ಕಳವಳ ವ್ಯಕ್ತಪಡಿಸಿದ ಅಗರ್ವಾಲ್, ಜನವರಿ 12ರಂದು ಭಾರತದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 9,55,319ಕ್ಕೆ ಏರಿಕೆಯಾಗಿದೆ.
ದೇಶದ 300 ಜಿಲ್ಲೆಗಳಲ್ಲಿ ವಾರದ ಪ್ರಕರಣಗಳ ಪಾಸಿಟಿವಿಟಿ ದರ ಶೇ.5ಕ್ಕಿಂತಲೂ ಹೆಚ್ಚಳವಾಗಿದೆ. ಮಹಾರಾಷ್ಟ್ರ, ಪಶ್ಚಿಮಬಂಗಾಳ, ದೆಹಲಿ, ತಮಿಳುನಾಡು, ಕರ್ನಾಟಕ, ಉತ್ತರಪ್ರದೇಶ, ಕೇರಳ ಮತ್ತು ಗುಜರಾತ್ ಸೇರಿದಂತೆ ಎಂಟು ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ ಎಂದು ಅಗರ್ವಾಲ್ ಎಚ್ಚರಿಸಿದ್ದಾರೆ.
ದೇಶದಲ್ಲಿ ಕಳೆದ 24ಗಂಟೆಯಲ್ಲಿ 407 ಒಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದು, ಇದರೊಂದಿಗೆ ಒಮಿಕ್ರಾನ್ ಪ್ರಕರಣಗಳ ಒಟ್ಟು ಸಂಖ್ಯೆ 4,868ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.