Advertisement

ನಾಟಕ ಮುಗಿದ ಮೇಲೂ ಪ್ರೇಕ್ಷಕರನ್ನು ಕಾಡುವ ಶರೀಫ‌ 

02:02 PM Dec 08, 2018 | |

18ನೇ ಶತಮಾನದ ಸೌಹಾರ್ದತೆಯ ಸಂತ, ಕನ್ನಡದ ಕಬೀರ, ಶಿಶುನಾಳ ಶರೀಫ‌ರ ಅನುಭಾವಿ ಗೀತೆಗಳನ್ನು ಜನಪ್ರಿಯಗೊಳಿಸಿದವರು ಖ್ಯಾತ ಗಾಯಕ ಸಿ. ಅಶ್ವಥ ತರವಲ್ಲ ತಗೀ ನಿನ್ನ ತಂಬೂರಿ ಸ್ವರ, ಕುರುಬರೋ ನಾವು ಕುರುಬರೋ, ಕೋಡಗಾನ ಕೋಳಿ ನುಂಗಿತ್ತಾ, ಸೋರುತಿಹುದು ಮನೆಯ ಮಾಳಿಗೆ, ತೇರನೆಳೆಯುತಾರೆ ತಂಗಿ, ಬಿದ್ದೀಯಬ್ಬೇ ಮುದುಕಿ… ಹೀಗೆ ಪಟ್ಟಿ ಮಾಡುತ್ತಾ ಹೋದರೆ, ಶರೀಫ‌ರ ಹತ್ತಾರು ಹಾಡುಗಳನ್ನು ಪ್ರಖ್ಯಾತಗೊಳಿಸಿದವರು ಅಶ್ವಥ್‌. ಸಾಹಿತ್ಯವನ್ನು ಹೊರತುಪಡಿಸಿ ಉಳಿದ ಸಾಂಸ್ಕೃತಿಕ ಲೋಕದಲಿ, ಅದರಲ್ಲೂ ರಂಗಭೂಮಿಯಲ್ಲಿ ಶಿಶುನಾಳ ಶರೀಫ‌ರ ಸಾಹಿತ್ಯ ಪ್ರಯೋಗಕ್ಕೊಳಗಾಗಿದ್ದು ಕಡಿಮೆಯೇ. ಅಂಥ¨ªೊಂದು ಪ್ರಯೋಗವನ್ನು ಮಾಡಿ ಯಶಸ್ವಿಯಾಗಿದೆ ಸಾತ್ವಿಕ ರಂಗತಂಡ. 

Advertisement

ರಾಜಗುರು ಹೊಸಕೋಟೆಯವರ ಪರಿಕಲ್ಪನೆಯಲ್ಲಿ ಮೂಡಿದ “ಶರೀಫ‌’ ನಾಟಕ, ಕೊಡಗಿಗಾಗಿ ನಡೆಸಲಾದ “ರಂಗಸಪ್ತಾಹ’ದಲ್ಲಿ 5ನೇ ಪ್ರದರ್ಶನ ಕಂಡು ಪ್ರೇಕ್ಷ$ಕರನ್ನು ಮೂಕವಿಸ್ಮಿತವನ್ನಾಗಿಸಿತು. ಶರೀಫ‌ರ ಪದ್ಯಗಳನ್ನು ತಲ್ಲೀನತೆಯಿಂದ ಹಾಡುವ ರಾಜಗುರು, ಶರೀಫ‌ರ ಪಾತ್ರದಲ್ಲಿಯೂ ನಟಿಸಿ ಪರಕಾಯ ಪ್ರವೇಶಿಸಿದಂತೆ ಅಭಿನಯಿಸಿದ್ದು ನಾಟಕಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಯಿತು. ಶರೀಫ‌ರ ಪ್ರಸಿದ್ಧ ಗೀತೆಗಳನ್ನು ಬಿಟ್ಟು, ಶ್ರೋತೃಗಳಿಗೆ ಪರಿಚಿತವಲ್ಲದ ಗೀತೆಗಳನ್ನು ಬಳಸಿಕೊಂಡಿದ್ದು ನಾಟಕದ ಮೊದಲ ವಿಶೇಷ. ಚೋಳ ಕಡಿತಾ ನಂಗೊಂದು ಚೋಳ ಕಡಿತಾ; ಕಾಳ ಕತ್ತಲದೊಳು ಕೂತಿತ್ತಾ ನನ ಕಂಡು ಬಂತಾ, ಹೋಗುತಿಹುದು ಕಾಯ ವ್ಯರ್ಥ; ಇದರ ಅರ್ಥ ತಿಳಿದವ ಯೋಗಿ ಸಮರ್ಥ, ಮೂಕನಾಗಿರಬೇಕು ಈ ಜಗದೊಳು ಜ್ವಾಕ್ಯಾಗಿರಬೇಕು, ನಾಯಿ ಬಂದಾವೋ ಬೆನ್ನು ಹತ್ತಿ ತೊಗಲ ಮ್ಯಾಲ್ಯಾಗಿನ ಹಾಲು ಕುಡಿದು; ನೀವು ಹಗಣ ಮಾಡುತೀರಿ ನಾಡೆಲ್ಲ… ಮುಂತಾದ ಶರೀಫ‌ರ ಅಪರಿಚಿತ ಪದ್ಯಗಳು ತೆರೆಯ ಮೇಲೆ ರಾರಾಜಿಸಿದವು. 

ನಿಜ ಬದುಕಿನಲ್ಲೂ ಲವಲವಿಕೆಯ ಸತಿ-ಪತಿಗಳಾಗಿರುವ ರಂಗಕರ್ಮಿಗಳಾದ ರಾಜಗುರು-ನಯನಾ ಸೂಡಾ ದಂಪತಿ, ರಂಗದ ಮೇಲೂ ಶರೀಫ‌ ಹಾಗೂ ಫಾತಿಮಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಎರಡನೆಯ ವಿಶೇಷ. ನಾಟಕ ಅಂತ್ಯದಲ್ಲಿ ಶರೀಫ‌ಜ್ಜ ದೇಹತ್ಯಾಗ ಮಾಡಿದ ಎನ್ನುವುದನ್ನು, ಬೆಳಕಿನ ಲೋಕಕ್ಕೆ ಪಯಣಿಸಿದ ಎನ್ನುವರ್ಥ ಬರುವಂತೆ ಬೆಳಕಿನ ವ್ಯವಸ್ಥೆ ಮಾಡಿ ಅದರ ಛಾಯೆಯನ್ನು ರಂಗದ ಮೇಲೆ ಕಾಣಿಸಿದ್ದು ಮೂರನೆಯ ವಿಶೇಷ ಹಾಗೂ ವಿನೂತನ ಸೃಜನಾತ್ಮಕ ಪ್ರಯತ್ನ. 

ಶರೀಫ‌ ನಾಟಕದ ಕೆಲವು ದೃಶ್ಯಗಳು ಪ್ರೇಕ್ಷಕರ ಮನ ಕಲಕಿದವು. ಗುರು ಗೋವಿಂದ ಭಟ್ಟರು ಅಡ್ಡಾಡಿದ ಹಾದಿಯಲ್ಲಿ ಚಪ್ಪಲಿ ಹಾಕಿ ನಡೆಯಲಾರೆ ಎನ್ನುವ ಶಿಷ್ಯ ಶರೀಫ‌ನ ಗುರುಭಕ್ತಿ, ಶರೀಫ‌ನ ಬದುಕಿನ ಬಡತನವನ್ನು ಕಟ್ಟಿಕೊಟ್ಟ ದೃಶ್ಯಗಳು, ಗೋವಿಂದಭಟ್ಟರ ಸನಾತನಿ ಶಿಷ್ಯರು ಗೋವಿಂದ ಭಟ್ಟರನ್ನು ಆಡಿಕೊಂಡು ನಗುವಾಗ ಶರೀಫ‌ ಸಿಟ್ಟಾಗುವ ಪರಿ, ಶರೀಫ‌, ನಾಗಲಿಂಗಸ್ವಾಮಿಗಳ ಮೌಡ್ಯವನ್ನು ದೂರ ಮಾಡಿ ಗೆಳೆತನ ಸಂಪಾದಿಸುವ ದೃಶ್ಯ, ಗೋವಿಂದ ಭಟ್ಟರು ಹಾಗೂ ಪತ್ನಿ ಫಾತಿಮಾ ದೇಹ ಬಿಟ್ಟಿದ್ದನ್ನು ಅಂತಬೋìಧೆಯಲ್ಲಿ ಅರಿತುಕೊಳ್ಳುವ ಶರೀಫ‌ನ ಸಂಕಟ, ಕೊನೆಯಲ್ಲಿ ಶರೀಫ‌ಜ್ಜ ದೇಹತ್ಯಾಗ ಮಾಡುತ್ತೇನೆ ಎಂದಾಗ ಊರಿಗೆ ಊರೇ ರೋದಿಸುವ ದೃಶ್ಯ ನಾಟಕ ಮುಗಿದ ನಂತರವೂ ಕಾಡುತ್ತದೆ. 

ಗೋವಿಂದ ಭಟ್ಟ, ಶರೀಫ‌ರನ್ನು ಮೊದಲ ಬಾರಿಗೆ ಕಂಡಾಗ “ನಿನ್ನಪ್ಪ ಯಾರು?’ ಎನ್ನುತ್ತಾರೆ. ಶರೀಫ‌ ಅದಕ್ಕೆ ಉತ್ತರಿಸಿ, “ನಿನ್ನ ಅಪ್ಪನೇ ನನಗೂ ಅಪ್ಪ’ ಎನ್ನುತ್ತಾನೆ. ಇದು ನಾಟಕದಲ್ಲಿ ವೀಕ್ಷ$ಕರನ್ನು ಆಕರ್ಷಿಸಿದ ಗೋವಿಂದ ಭಟ್ಟರು ಹಾಗೂ ಶರೀಫ‌ನ ನಡುವಿನ ಜನಪ್ರಿಯ ಸಂಭಾಷಣೆ. ಮಂಜುನಾಥ ಬೆಳಕೆರೆ ರಚಿಸಿದ ಈ ರಂಗರೂಪದ ವಿನ್ಯಾಸ, ನಿರ್ದೇಶನ ಹಾಗೂ ಸಂಗೀತ- ರಾಜಗುರು ಹೊಸಕೋಟೆ, ವಸ್ತ್ರವಿನ್ಯಾಸ ನಿರ್ವಹಿಸಿದ್ದು ನಯನ ಸೂಡಾ. ಸಾತ್ವಿಕ ಹಾಗೂ ರಂಗಪಯಣ ತಂಡದ ಕಲಾವಿದರು ರಂಗದ ಮೇಲೆ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡರು. ಶರೀಫ‌ಜ್ಜನ ಗದ್ದುಗೆ, ಸಾಂಬ್ರಾಣಿ ಹೊಗೆ ಹಾಗೂ ಸದಾ ಆರದ ಪ್ರಣತಿ ರಂಗದ ಮೇಲೆ ಪ್ರಯೋಗಿಸಲ್ಪಟ್ಟ ಇನ್ನೊಂದು ವಿಶೇಷ. 

Advertisement

ವಿಭಾ (ವಿಶ್ವಾಸ್‌ ಭಾರದ್ವಾಜ್‌)

Advertisement

Udayavani is now on Telegram. Click here to join our channel and stay updated with the latest news.

Next