ಮುಂಬಯಿ: ಉದ್ಯಮಿ ವಿಜಯ್ ಮಲ್ಯರನ್ನು ಇಂಗ್ಲೆಂಡ್‌ನಿಂದ ಗಡೀಪಾರು ಮಾಡಿದರೆ ನೇರವಾಗಿ ಮುಂಬಯಿನ ಆರ್ಥರ್ ರೋಡ್ ಜೈಲಿನಲ್ಲಿರುವ ಪೀಟರ್ ಮುಖರ್ಜಿ ಇರುವ ಪಕ್ಕದ ಕೋಣೆ ಸೇರಲಿದ್ದಾರೆ!
ಹೀಗೆಂದು ಹೇಳಿದ್ದು ಮುಂಬಯಿ ಜೈಲಿನ ಅಧಿಕಾರಿಗಳು. ಈಗಾಗಲೇ ಪೀಟರ್ ಮುಖರ್ಜಿ ವಾಸವಿರುವ ಪಕ್ಕದ ಕೋಣೆ ಯನ್ನು ಮಲ್ಯಗೆ ನಿಗದಿಗೊಳಿಸಲಾಗಿದೆ. ನಾದಿನಿ ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಪೀಟರ್ ಮುಖರ್ಜಿಯನ್ನು ಕಳೆದ ಕೆಲವು ತಿಂಗಳಿನಿಂದ ಆರ್ಥರ್ ರೋಡ್ ಜೈಲಿನಲ್ಲಿ ಇಡಲಾಗಿದೆ.
ಇಬ್ಬರು ಅಥವಾ ಮೂವರ ಜತೆಗೆ ಬ್ಯಾರಕ್ ನಂಬರ್ 2 ಕೋಣೆಯಲ್ಲಿ ಮಲ್ಯ ಇರಬೇಕಾಗುತ್ತದೆ. ಅಲ್ಲದೆ ಈ ಕೋಣೆಯ ಸಮೀಪದಲ್ಲೇ ಎನ್‌ಸಿಪಿ ಮುಖಂಡ ಛಗನ್ ಭುಜಬಲ್ ಕೂಡ ಇದ್ದಾರೆ. ಈ ಹಿಂದೆ ಅಂಧಾ ಸೆಲ್ (ಕತ್ತಲ ಕೋಣೆ)ನಲ್ಲಿ ಮಲ್ಯರನ್ನು ಇಡಲಾಗುತ್ತದೆ ಎಂದು ಹೇಳಲಾಗಿತ್ತಾದರೂ, ಇದನ್ನು ಜೈಲಿನ ಡಿವೈಎಸ್‌ಪಿ ತಳ್ಳಿಹಾಕಿದ್ದಾರೆ.
ಮಲ್ಯ ಗಡೀಪಾರು ಪ್ರಕರಣದ ವಿಚಾರಣೆ ವೆಸ್ಟ್‌ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಡೆಸುತ್ತಿದ್ದು, ಡಿಸೆಂಬರ್ 4ರಿಂದ ವಿಚಾರಣೆ ಆರಂಭವಾಗಲಿದೆ. ಮಲ್ಯಗೆ ಜೀವ ಬೆದರಿಕೆ ಇದೆ ಎಂಬ ಆರೋಪವನ್ನು ವಿಚಾರಣೆ ವೇಳೆ ತಳ್ಳಿಹಾಕಲಾಗುತ್ತದೆ. ಭಾರತಕ್ಕೆ ಗಡೀಪಾರು ಮಾಡಿದರೆ ಮಲ್ಯ ಜೀವಕ್ಕೆ ಅಪಾಯವಿದೆ ಅಲ್ಲದೆ ಭಾರತದ ಜೈಲುಗಳಲ್ಲಿ ಮಾನವ ಹಕ್ಕು ಉಲ್ಲಂಘನೆ ನಡೆಯುತ್ತಿದೆ ಎಂಬ ಕಾರಣ ನೀಡಿ ಈವರೆಗೆ ಗಡೀಪಾರನ್ನು ತಡೆಯಲಾಗಿದೆ. ಈಗಾಗಲೇ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಲಂಡನ್‌ಗೆ ತೆರಳಿ ಮಲ್ಯ ಗಡೀಪಾರಿಗೆ ಅಗತ್ಯ ತಯಾರಿ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಭಾರತದಲ್ಲಿ ಮಲ್ಯ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂಬುದನ್ನು ಸಾಬೀತುಗೊಳಿಸಲೂ ತನಿಖಾ ತಂಡ ಸಂಪೂರ್ಣ ತಯಾರಿ ಮಾಡಿಕೊಂಡಿದ್ದು, ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಿದೆ.