ಮುಂಬಯಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಧಾನ ಮಾತುಕತೆ ಯಶಸ್ವಿಯಾಗಲಿದೆ ಎಂಬ ಭರವಸೆಯ ಪರಿಣಾಮ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಬುಧವಾರ (ಮಾರ್ಚ್ 16) 1,000ಕ್ಕೂ ಅಧಿಕ ಅಂಕಗಳಷ್ಟು ಏರಿಕೆಯೊಂದಿಗೆ ಮತ್ತೆ 56,000 ಅಂಕಕ್ಕೆ ಏರುವ ಮೂಲಕ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ಭಾರತದ ರಾಜಕೀಯದಲ್ಲಿ ಫೇಸ್ ಬುಕ್ ನ ಹಸ್ತಕ್ಷೇಪಕ್ಕೆ ಕೇಂದ್ರ ಕಡಿವಾಣ ಹಾಕಲಿ: ಸೋನಿಯಾ
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 1,039.80 ಅಂಕ ಏರಿಕೆಯಾಗಿದ್ದು, 56,816.65 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 312.35 ಅಂಕಗಳಷ್ಟು ಏರಿಕೆಯೊಂದಿಗೆ 16,975.35 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.
ಆಲ್ಟ್ರಾಟೆಕ್ ಸಿಮೆಂಟ್ ಷೇರು ಶೇ.5ರಷ್ಟು ಲಾಭಗಳಿಸಿದ್ದು, ಆ್ಯಕ್ಸಿಸ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಎಚ್ ಡಿಎಫ್ ಸಿ , ಬಜಾಜ್ ಫಿನ್ ಸರ್ವ್, ಇನ್ಫೋಸಿಸ್, ಬಜಾಜ್ ಫೈನಾನ್ಸ್ ಷೇರುಗಳು ಕೂಡಾ ಲಾಭಗಳಿಸಿದೆ.
ಮತ್ತೊಂದೆಡೆ ಸನ್ ಫಾರ್ಮಾ ಹಾಗೂ ಪವರ್ ಗ್ರಿಡ್ ಷೇರುಗಳು ನಷ್ಟ ಕಂಡಿದೆ. ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಟೋಕಿಯೋ, ಸಿಯೋಲ್, ಹಾಂಗ್ ಕಾಂಗ್ ಮತ್ತು ಶಾಂಘೈ ಷೇರುಪೇಟೆ ಸೆನ್ಸೆಕ್ಸ್ ಲಾಭದೊಂದಿಗೆ ವಹಿವಾಟು ಕೊನೆಗೊಂಡಿದೆ.