ಮುಂಬಯಿ: ರಷ್ಯಾ, ಉಕ್ರೇನ್ ನಡುವಿನ ಯುದ್ಧ ಮುಂದುವರಿದ ಪರಿಣಾಮ ಸೋಮವಾರ (ಮಾರ್ಚ್ 07) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 1,491ದಷ್ಟು ಭಾರೀ ಪತನ ಕಂಡಿದ್ದು, ಇದರಿಂದ ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
ಇದನ್ನೂ ಓದಿ:ಇದು ಬೊಮ್ಮಾಯಿ ಬಜೆಟ್ ಅಲ್ಲ,ಆರ್ ಎಸ್ ಎಸ್ ಬಜೆಟ್: ಕಲಾಪದಲ್ಲಿ ಸಿದ್ದರಾಮಯ್ಯ ಕಿಡಿ
ಮುಂಬಯಿ ಷೇರುಪೇಟೆಯ ವಹಿವಾಟಿನಲ್ಲಿ ಇಂದು ಸೆನ್ಸೆಕ್ಸ್ 1,966.71 ಅಂಕಗಳಷ್ಟು ಮಹಾಪತನ ಕಂಡಿದ್ದು, 52,367.10 ಅಂಕಗಳಲ್ಲಿ ವಹಿವಾಟು ನಡೆಸಿತ್ತು. ಕೊನೆಗೆ 1,491.06 ಅಂಕಗಳಷ್ಟು ನಷ್ಟದೊಂದಿಗೆ 52,842.75 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಅದೇ ರೀತಿ ಎನ್ ಎಸ್ ಇ ನಿಫ್ಟಿ 382.20 ಅಂಕಗಳಷ್ಟು ಕುಸಿತ ಕಂಡಿದ್ದು, 15,863.15 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ರಷ್ಯಾ, ಉಕ್ರೇನ್ ಯುದ್ಧದ ಪರಿಣಾಮ ಕಚ್ಛಾ ತೈಲದ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಷೇರುಪೇಟೆ ಹೂಡಿಕೆದಾರರ ಮೇಲೆ ಪರಿಣಾಮ ಬೀರಿರುವುದಾಗಿ ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ.
ಸೆನ್ಸೆಕ್ಸ್ ಕುಸಿತದ ಪರಿಣಾಮ ಇಂಡಸ್ ಇಂಡ್ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಮಾರುತಿ ಸುಜುಕಿ, ಬಜಾಜ್ ಫೈನಾನ್ಸ್, ಬಜಾಜ್ ಫಿನ್ ಸರ್ವ್, ಆಲ್ಟ್ರಾ ಟೆಕ್ ಸಿಮೆಂಟ್ ಮತ್ತು ಮಹೀಂದ್ರ ಆ್ಯಂಡ್ ಮಹೀಂದ್ರ ಷೇರುಗಳು ಭಾರೀ ನಷ್ಟ ಕಂಡಿದೆ.
ಮತ್ತೊಂದೆಡೆ ಭಾರ್ತಿ ಏರ್ ಟೆಲ್, ಎಚ್ ಸಿಎಲ್ ಟೆಕ್ನಾಲಜೀಸ್, ಟಾಟಾ ಸ್ಟೀಲ್ ಮತ್ತು ಇನ್ಫೋಸಿಸ್ ಷೇರುಗಳು ಲಾಭಗಳಿಸಿದೆ. ಇನ್ನುಳಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಹಾಂಗ್ ಕಾಂಗ್, ಶಾಂಘೈ ಮತ್ತು ಟೋಕಿಯೋ ಷೇರುಪೇಟೆ ಸೆನ್ಸೆಕ್ಸ್ ನಷ್ಟ ಕಂಡಿದೆ.