ಮುಂಬಯಿ: ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ದುರ್ಬಲ ವಹಿವಾಟು ಹಾಗೂ ವಿದೇಶಿ ಬಂಡವಾಳದ ಹೊರಹರಿವು, ಡೆಲ್ಟಾಗಿಂತ ಅಪಾಯಕಾರಿ ತಳಿ ಬೋಟ್ಸ್ ವಾನಾ ವೈರಸ್ ಸೋಂಕು ಪತ್ತೆಯಾದ ಪರಿಣಾಮ ಶುಕ್ರವಾರ(ನವೆಂಬರ್ 26) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 1400ಕ್ಕೂ ಅಧಿಕ ಅಂಕ ಇಳಿಕೆಯಾಗಿದ್ದು, ಹೂಡಿಕೆದಾರರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ.
ಇದನ್ನೂ ಓದಿ:ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 10,549 ಕೋವಿಡ್ ಪ್ರಕರಣ ಪತ್ತೆ, ಚೇತರಿಕೆ ಪ್ರಮಾಣ ಶೇ.98
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಆರಂಭಿಕ ಹಂತದಲ್ಲಿಯೇ 1,408.29 ಅಂಕ ಕುಸಿತಗೊಂಡಿದ್ದು, 57,315 ಅಂಕಗಳೊಂದಿಗೆ ವಹಿವಾಟು ಆರಂಭಿಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 426 ಅಂಕಗಳಷ್ಟು ಇಳಿಕೆಯಾಗಿದ್ದು, 17,110 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.
ಮಾರುತಿ, ಬಜಾಜ್ ಫಿನ್ ಸರ್ವ್, ಕೋಟಕ್ ಬ್ಯಾಂಕ್, ಎಚ್ ಡಿಎಫ್ ಸಿ, ಬಜಾಜ್ ಫೈನಾನ್ಸ್ ಮತ್ತು ಟಾಟಾ ಸ್ಟೀಲ್ ಷೇರುಗಳು ಶೇ.3ರಷ್ಟು ನಷ್ಟ ಕಂಡಿದೆ. ಮತ್ತೊಂದೆಡೆ ಡಾ.ರೆಡ್ಡೀಸ್, ಸನ್ ಫಾರ್ಮಾ ಷೇರುಗಳು ಲಾಭಗಳಿಸಿವೆ.
ಗುರುವಾರ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 454.10 ಅಂಕ ಏರಿಕೆಯೊಂದಿಗೆ 58,795 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿತ್ತು. ಎನ್ ಎಸ್ ಇ ನಿಫ್ಟಿ 121.20 ಅಂಕ ಏರಿಕೆಯೊಂದಿಗೆ 17,536.25 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿತ್ತು.