ಮುಂಬೈ: ಷೇರುಪೇಟೆಯ ಸಂವೇದಿ ಸೂಚ್ಯಂಕ ಗುರುವಾರ (ಜುಲೈ 18) ಇದೇ ಮೊದಲ ಬಾರಿಗೆ 81,000 ಅಂಕಗಳ ಎತ್ತರಕ್ಕೆ ಏರುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಗುರುವಾರದ ದಿನಾಂತ್ಯದ ವಹಿವಾಟಿನ ವೇಳೆ 626.91 ಅಂಕಗಳ ಏರಿಕೆಯೊಂದಿಗೆ 81,343. 46 ಅಂಕಗಳ ದಾಖಲೆಯ ಎತ್ತರದೊಂದಿಗೆ ಮುಕ್ತಾಯಗೊಂಡಿದೆ.
ಇಂದು ಬೆಳಗ್ಗೆ 80,390.37 ಅಂಕಗಳಲ್ಲಿ ವಹಿವಾಟು ನಡೆದಿತ್ತು. ಎಸ್ ಎಸ್ ಇ ನಿಫ್ಟಿ 187.85 ಅಂಕಗಳ ಏರಿಕೆಯೊಂದಿಗೆ 24,800.85 ಅಂಕಗಳ ದಾಖಲೆ ಮಟ್ಟದ ಎತ್ತರದಲ್ಲಿ ವಹಿವಾಟು ಕೊನೆಗೊಂಡಿದೆ.
ಅಮೆರಿಕದ ಫೆಡರಲ್ ರಿಸರ್ವ್ ಸೆಪ್ಟೆಂಬರ್ ನಲ್ಲಿ ಫೆಡ್ (ಬಡ್ಡಿ) ದರ ಇಳಿಕೆ ಮಾಡಲಿದೆ ಎಂಬ ನಿರೀಕ್ಷೆಯ ಹಿನ್ನೆಲೆಯಲ್ಲಿ ಜಾಗತಿಕ ಷೇರುಮಾರುಕಟ್ಟೆ ಭರ್ಜರಿ ಏರಿಕೆಯೊಂದಿಗೆ ವಹಿವಾಟು ಅಂತ್ಯಗೊಂಡಿದೆ.
ಟಾಟಾ ಕನ್ಸ್ ಲ್ಟೆನ್ಸಿ ಸರ್ವಿಸಸ್ ಷೇರು ಶೇ.3.33ರಷ್ಟು ಲಾಭ ಕಂಡಿದೆ. ಬಜಾಜ್ ಫಿನ್ ಸರ್ವ್, ಇನ್ಫೋಸಿಸ್, ಮಹೀಂದ್ರ & ಮಹೀಂದ್ರ, ಟೆಕ್ ಮಹೀಂದ್ರ, ಹಿಂದೂಸ್ತಾನ್ ಯುನಿಲಿವರ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ ಸಿಎಲ್ ಟೆಕ್ನಾಲಜಸೀಸ್ ಷೇರುಗಳು ಲಾಭ ಗಳಿಸಿದೆ.
ಮತ್ತೊಂದೆಡೆ ಏಷ್ಯನ್ ಪೇಂಟ್ಸ್, ಜೆಎಸ್ ಡಬ್ಲ್ಯು ಸ್ಟೀಲ್, ಎನ್ ಟಿಪಿಸಿ, ಅದಾನಿ ಪೋರ್ಟ್ಸ್ ಸೇರಿದಂತೆ ಹಲವು ಷೇರುಗಳು ನಷ್ಟ ಕಂಡಿದೆ. ಶಾಂಘೈ, ಹಾಂಗ್ ಕಾಂಗ್ ಷೇರುಮಾರುಕಟ್ಟೆ ಸೆನ್ಸೆಕ್ಸ್ ಏರಿಕೆಯೊಂದಿಗೆ ವಹಿವಾಟು ಮುಕ್ತಾಯಗೊಂಡಿದೆ.
ಇದನ್ನೂ ಓದಿ:Saidapur: ಕುಟುಂಬಿಕ ಕಲಹದಿಂದ ಪತ್ನಿ, ಅತ್ತೆ, ಮಾವನನ್ನೇ ಹತ್ಯೆ ಮಾಡಿದ!