ತೀರ್ಥಹಳ್ಳಿ : ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಕ್ಕು ನೀಡಲು 2017ರಲ್ಲಿ ಕಾಂಗ್ರೆಸ್ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದೆ. ಆದರೆ ಬಿಜೆಪಿ ಸರ್ಕಾರ 56 ಅಧಿಸೂಚನೆಗಳ ಡಿನೋಟಿಫಿಕೇಷನ್ ಅದೇಶವನ್ನು ರದ್ದು ಮಾಡಿ ಭೂಮಿ ಸಿಗದಂತೆ ಮಾಡಿತ್ತು. ಚುನಾವಣಾ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮೂರು ತಿಂಗಳೊಳಗೆ ಭೂಮಿ ಮಂಜೂರು ಮಾಡಿಸುವ ನಾಟಕ ಇದೀಗ ಬಯಲಾಗಿದೆ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಕ್ಕುಪತ್ರ ಸಿಗಬಾರದು ಎಂದು ಕೇಂದ್ರ ಸರ್ಕಾರ ಪ್ರಸ್ತಾವನೆ ತಿರಸ್ಕರಿಸಲು ಬಿಜೆಪಿ ಮುಖಂಡರೇ ಕಾರಣ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಗಂಭೀರವಾಗಿ ಆರೋಪಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು ವಿಧಾನಸಭಾ ಚುನಾವಣೆ ಗೆಲ್ಲುವ ಭರದಲ್ಲಿ ಆರಗ ಜ್ಞಾನೇಂದ್ರ ಮತದಾರನ್ನು ದಾರಿ ತಪ್ಪಿಸಿದ್ದಾರೆ. ಕಾನು, ಗೋಮಾಳ, ಸೊಪ್ಪಿನಬೆಟ್ಟ ಪ್ರದೇಶದ ಬಗರ್‌ಹುಕುಂ ಸಾಗುವಳಿ ಮಂಜೂರು ಮಾಡಿಸುವ ಚುನಾವಣಾ ಪೂರ್ವ ಭರವಸೆಯನ್ನು ಮೊದಲಿ ನಿಭಾಯಿಸಬೇಕು. ಪ್ರದಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದು ರೈತರು, ನಿರಾಶ್ರಿತರ ಸಂಕಷ್ಟಕ್ಕೆ ಶೀಘ್ರ ಪರಿಹಾರ ನೀಡದಿದ್ದರೆ ಪ್ರತಿಭಟನೆಗೆ ಸಿದ್ಧ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.
ಸರ್ಕಾರದ ಭಾಗವಾಗಿ ಆಡಳಿತ ನಿಭಾಯಿಸಿದ ಆರಗ ಜ್ಞಾನೇಂದ್ರ ಮತ್ತು ಬಿಜೆಪಿ ನಾಯಕರು ಫಲಾನುಭವಿಗಳಿಗಿಂತ ಅವಸರದಲ್ಲಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಕ್ಯಾಬಿನೆಟ್ ಅಂಗೀಕರಿಸಿದ್ದು ಹಣಕಾಸು ಅಂಗೀಕಾರ ಬಾಕಿ ಇದೆ. ಸದ್ಯ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್‌ನಲ್ಲಿ ಸರ್ಕಾರ ನಡೆಯುತ್ತಿದ್ದು ಜುಲೈ ತಿಂಗಳ ವರೆಗೆ ಲೇಕಾನುಧಾನ ಇದೆ. ಮಧ್ಯಂತರ ಬಜೆಟ್ ಮಂಡನೆಯಾಗುವ ವರೆಗೆ ಕಾಯುವ ಸೌಜನ್ಯ ಉಳಿಸಿಕೊಳ್ಳಬೇಕು. ಕೇವಲ ಭಾವನೆಗಳ ಮೇಲೆ ಸೌಹಾರ್ದತೆ ಹಾಳು ಮಾಡುವ ಬಿಜೆಪಿಗೆ ಜನರ ಬದುಕಿನ ವಿಷಯ ಗೌಣವಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 24 ದಿನಗಳ ಕಾಲ ಕ್ಯಾಬಿನೇಟ್ ಇಲ್ಲದೆ ಸಿಎಂ ಹುದ್ದೆ ನಿಭಾಯಿಸಿದ್ದಾಗ ಗ್ಯಾರಂಟಿ ಕಾರ್ಡ್ ವಿಷಯದಲ್ಲಿರುವ ನಿಮ್ಮ ಅವಸರ ಎಲ್ಲಿ ಅಡಗಿತ್ತು ಎಂದು ಪ್ರಶ್ನಿಸಿದರು.
ನರೇಂದ್ರ ಮೋದಿ ವಿದೇಶಗಳಲ್ಲಿ ಸಮಾನತಾವಾದಿ ಮಹಾತ್ಮಗಾಂಧಿಯನ್ನು ಹೊಗಳುತ್ತಾರೆ. ಭಾರತದಲ್ಲಿ ಮಾತ್ರ ಗೋಡ್ಸೆ, ಸಾವರ್ಕರ್‌ರನ್ನು ವಿಜೃಂಬಿಸುತ್ತಾರೆ. 9 ವರ್ಷಗಳ ಹಿಂದೆ ನರೇಂದ್ರ ಮೋದಿ ನೀಡಿದ ಭರವಸೆಗಳು ಇಂದಿಗೂ ಜನರಿಗೆ ತಲುಪಿಲ್ಲ. 2014ರಲ್ಲಿ ಗಜಗರ್ಭ ಧರಿಸಿದ ಪ್ರಧಾನಿ ಪ್ರತಿಯೊಂದು ಕುಟುಂಬಕ್ಕೆ 15 ಲಕ್ಷ, 18 ಕೋಟಿ ಜನರಿಗೆ ಉದ್ಯೋಗವಕಾಶ, ರೈತರ ಖಾತೆಗೆ ಹಣ, ಕುಡಿಯುವ ನೀರು ಯಾವಾಗ ನೀಡುತ್ತಾರೆ ಎಂದು ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.
“ರೂ 20 ಕೋಟಿ ಅಭಿವೃದ್ಧಿ ಹಣ ಗ್ಯಾರಂಟಿ ಯೋಜನೆಗೆ ಬಳಸುವ ಅವಶ್ಯಕತೆ ಇಲ್ಲ. ಚುನಾವಣೆ ಗೆಲ್ಲಲು ಅವಸರದಲ್ಲಿ ತಾಂತ್ರಿಕ ದೋಷದಿಂದ ಕೂಡಿದ್ದ ಟೆಂಡರ್ ಪ್ರಕ್ರಿಯೆ ನಡೆದಿದೆ. ಅದರಿಂದ ನಡೆದ ಕಳಪೆ ಕಾಮಗಾರಿಗಳ ತನಿಖೆಗೆ ಆರಗ ಜ್ಞಾನೇಂದ್ರ ಒಪ್ಪಿಗೆ ನೀಡುತ್ತಾರಾ” ಎಂದು ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್.ಎಂ. ಮಂಜುನಾಥ ಗೌಡ ಪ್ರಶ್ನಿಸಿದರು..
ಪತ್ರಿಕಾಗೋಷ್ಟಿಯಲ್ಲಿ ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಎಸ್. ವಿಶ್ವನಾಥ ಶೆಟ್ಟಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶೀಲ ಶೆಟ್ಟಿ, ಉಪಾಧ್ಯಕ್ಷ ರೆಹಮತ್ ಉಲ್ಲಾ ಅಸಾದಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಟಿ.ಎಲ್. ಸುಂದರೇಶ್ ಇದ್ದರು.
ಇದನ್ನೂ ಓದಿ: ಕಾಣದ ಕೈಗಳು ನನಗೆ ಟಿಕೆಟ್ ತಪ್ಪಿಸಿದ್ದವು: ಮಾಜಿ ಶಾಸಕ ಎಸ್.ರಾಮಪ್ಪ