ಬೆಂಗಳೂರು: ಶರಾವತಿ ಹಿನ್ನೀರಿನ ಕಾಷ್ಠಶಿಲ್ಪ ಕಲೆ ಉದ್ಯಾನನಗರಿಯಲ್ಲಿ ಅನಾವರಣಗೊಂಡಿದೆ. ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಬುಧವಾರ ಆರಂಭವಾದ, ಏ.30ರವರೆಗೆ ನಡೆಯುವ “ದಿ ವರ್ಲ್ಡ್ ಆ್ಯಫ್ಟರ್ ನ್ಯೂಕ್ಲಿಯರ್ ವಾರ್’ ಛಾಯಾಚಿತ್ರ ಪ್ರದರ್ಶನದಲ್ಲಿ ಮರದ ತುಂಡುಗಳ ರಂಗೋಲಿ ಕಣ್ಮನ ಸೆಳೆಯುತ್ತಿದೆ.
ಶ್ರೀಧರ್ ತುಮರಿ ಅವರ ಕ್ಯಾಮೆರಾಗಳಲ್ಲಿ ಸೆರೆಯಾದ ನೀರು, ಒಣಗಿದ ಭೂಮಿ, ಒಣಗಿದ ಮರದ ತುಂಡುಗಳು ಪಶ್ಚಿಮ ಘಟ್ಟದ ಅಳಿವಿನ ಬಗ್ಗೆ ಎಚ್ಚರಿಕೆ ನೀಡುತ್ತಿವೆ. ಸೂರ್ಯಾಸ್ತದ ಕೆಂಬಣ್ಣ ತುಂಬಿಕೊಂಡು ನಿಂತ ಮರದ ಚೆಕ್ಕೆ ಭವಿಷ್ಯದ ಅಪಾಯವನ್ನು ತೆರೆದಿಟ್ಟರೆ, ನೀರಿನೊಳಗೆ ಮತ್ತೆ ಚಿಗುರಲು ಪ್ರಯತ್ನಿಸುತ್ತಿರುವ ದಿಮ್ಮಿಯೊಳಗಿನ ಹಸಿರು, ಭವಿಷ್ಯದ ಭರವಸೆ ಮೂಡಿಸುವಂತಿದೆ.
ಹಿರೋಶಿಮಾ ನಾಗಸಾಕಿಯಲ್ಲಿ ಅಣುಬಾಂಬ್ ದಾಳಿಯಾದಾಗ ಮನುಷ್ಯನ ತಲೆ ಬುರುಡೆಯೊಂದೆ ಮರಳುಗಾಡಿನಲ್ಲಿ ಬಿದ್ದಂತೆ ಕಾಣುವ ಮರದ ದಿಮ್ಮಿಯ ಚಿತ್ರ, ಅಲಂಕಾರಿಕ ಸಾಮಗ್ರಿ, ನೃತ್ಯದ ಭಂಗಿಗಳಂತೆ ಕಾಣುವ ಒಣಗಿದ ಮರದ ಪೊಟರೆಗಳ ಚಿತ್ರಗಳು ಗಮನ ಸೆಳೆಯುತ್ತಿವೆ.
ಕಲಾವಿದರ ಕುಂಚದಲ್ಲಿ ಮೂಡುವಂತಹ ಅಮೂರ್ತ (ಅಬ್‌ಸ್ಟ್ರಾಕ್ಟ್) ಚಿತ್ರಗಳ ರಚನೆಯನ್ನು ಶ್ರೀಧರ್, ಕ್ಯಾಮೆರಾ ಕಣ್ಣಲ್ಲಿ ಮಾಡಿದ್ದಾರೆ. ಒಣಗಿ ಬಿರುಕು ಬಿಟ್ಟ ಧರೆ, ಒಣಗಿದ ಮರದ ಚಿತ್ರ ಜೀವ ಸಂಕುಲದ ಕೊನೇ ಹಂತ ಸೂಚಿಸಿದರೆ, ಉದಯಿಸುತ್ತಿರುವ ಸೂರ್ಯನೆದುರು ನಿಂತ ಮರದ ತುಂಡಿನ ಚಿತ್ರ ಬದುಕಿನ ಆಶಾಕಿರಣದ ಸಂಕೇತದಂತಿದೆ.
ದಿಮ್ಮಿಗಳ ಮೇಲೆ ನೆರಳು ಬೆಳಕಿನಾಟದ ಚಿತ್ರಗಳು ಬಣ್ಣ ಬಣ್ಣದ ರಂಗೋಲಿ ಬಿಟ್ಟಂತೆ ಕಾಣುತ್ತವೆ. ಅಲ್ಲಿಯೂ ಇರಲಾರೆ ಇಲ್ಲಿಗೂ ಬರಲಾರೆ ಎಂದು ಬಿಂಬಿಸುವ ನೀರು ಮತ್ತು ನೆಲದ ಮೇಲಿರುವ ಮರದ ತುಂಡುಗಳ ಚಿತ್ರಗಳು ಮನಸೆಳೆಯುತ್ತಿವೆ. ಹಿನ್ನೀರಿನ ಮರದ ತುಂಡುಗಳು ತಮ್ಮ ಮೂಲಸ್ವರೂಪವನ್ನೇ ಬದಲಿಸಿಕೊಂಡು ವಿಕಾರಗೊಂಡು ಅಮೂರ್ತ ರೂಪ ತಾಳಿರುವುದನ್ನು ಸೆರೆಹಿಡಿದಿರುವುದು ಛಾಯಾಗ್ರಾಹಕರ ಅಭಿವ್ಯಕ್ತಿಗೆಗೆ ಕನ್ನಡಿಯಾಗಿದೆ.
ಸುಂದರವಾಗಿ ಕಾಣಿಸುವ ದೃಶ್ಯಗಳಲ್ಲಿ ನಾವು ಬಾಹ್ಯ ಸೌಂದರ್ಯವನ್ನಷ್ಟೇ ಸವಿಯಲು ಸಾಧ್ಯ. ವಸ್ತುವಿನ ಒಳತಿರುಳನ್ನು ಗ್ರಹಿಸುವ ಅಮೂರ್ತಕಲ್ಪನೆಗಳಿಗೆ ರೂಪುಕೊಟ್ಟು ಕೇವಲ ಬಾಹ್ಯ ಸೌಂದರ್ಯಕ್ಕೆ ಸೀಮಿತವಾಗಿರದೆ ವೈಚಾರಿಕ ಚಿಂತನೆಗೆ ನೂಕುವ ಪರಿಣಾಕಾರಿ ದೃಶ್ಯಗಳ ಕಲಾತ್ಮಕ ಪ್ರದರ್ಶನ ಇದಾಗಿದೆ.