Advertisement

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ: ಕಂದಾಯ ಸಚಿವ ಅಶೋಕ್‌ರಿಗೆ ಒತ್ತಾಯ

04:25 PM Apr 13, 2022 | Suhan S |

ಸಾಗರ: ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಗೊಳಿಸಿ, ನಾಡಿಗೆ ವಿದ್ಯುತ್ ನೀಡಲು ತಮ್ಮ ಸರ್ವಸ್ವವನ್ನು ಕಳೆದುಕೊಂಡ ಕುಟುಂಬಗಳು ವಾಸಿಸುವ ಜಮೀನಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಮಂಗಳವಾರ ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

Advertisement

ತಾಲೂಕಿನ ಕರೂರು ಭಾರಂಗಿ ಹೋಬಳಿಯ ಸಾವಿರಾರು ಕುಟುಂಬ ನಾಡಿಗೆ ವಿದ್ಯುತ್ ನೀಡಲು ಮಡೆನೂರು ಮತ್ತು ಲಿಂಗನಮಕ್ಕಿ ಆಣೆಕಟ್ಟು ನಿರ್ಮಾಣ ಸಂದರ್ಭದಲ್ಲಿ ತಮ್ಮ ಮನೆ ಜಮೀನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ನಿರಾಶ್ರಿತರಾದ ಕುಟುಂಬಗಳನ್ನು ಜಿಲ್ಲೆಯ ಬೇರೆಬೇರೆ ಕಡೆ ತಂದು ಬಿಡಲಾಗಿದೆ. ಹೀಗೆ ನಿರ್ವಸತಿಗರಾದ ಕುಟುಂಬಗಳ ಅಲ್ಲಲ್ಲೇ ನೆಲೆ ಕಂಡುಕೊಂಡಿದ್ದು ಅವರು ವಾಸಿಸುವ ಮನೆ ಮತ್ತು ಜಮೀನಿಗೆ ಈತನಕ ಹಕ್ಕುಪತ್ರ ನೀಡಿಲ್ಲ. ಹಕ್ಕುಪತ್ರ ಇಲ್ಲದೆ ಇರುವುದರಿಂದ ಶರಾವತಿ ಮುಳುಗಡೆ ಸಂತ್ರಸ್ತ ಕುಟುಂಬಗಳು ಸರ್ಕಾರಿ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕರು ತಿಳಿಸಿದರು.

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ನನ್ನನ್ನು ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳ ಸಭೆ ನಡೆಸಲಾಗಿದೆ. ಸಭೆಯಲ್ಲಿ ಸರ್ವೇ ನಡೆಸಲು ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ವೇಗಾಗಿ ವಿಶೇಷ ತಂಡವೊಂದನ್ನು ರಚನೆ ಮಾಡಬೇಕು ಎಂದರು.

ಶಿವಮೊಗ್ಗ ಅಥವಾ ಸಾಗರದಲ್ಲಿ ಹಿರಿಯ ಅಧಿಕಾರಿ ನೇತೃತ್ವದಲ್ಲಿ ಕಚೇರಿ ತೆರೆದು, ಅರಣ್ಯ ಇಲಾಖೆ, ಸರ್ವೇ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲೆಯಲ್ಲಿರುವ ಶರಾವತಿ ಮುಳುಗಡೆ ಸಂತ್ರಸ್ತರ ಸರ್ವೇ ಮಾಡಿಸಬೇಕು. ಜಿಲ್ಲಾದ್ಯಂತ ಸಂಚರಿಸಲು ಸುಸಜ್ಜಿತ ವಾಹನವನ್ನು ನೀಡಬೇಕು. ತಕ್ಷಣ ಶರಾವತಿ ಮುಳುಗಡೆ ಸಂತ್ರಸ್ತರ ಹಕ್ಕು ರಕ್ಷಿಸುವ ನಿಟ್ಟಿನಲ್ಲಿ ಸಚಿವರು ಗಮನ ಹರಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಕಂದಾಯ ಸಚಿವ ಆರ್. ಅಶೋಕ್ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next