Advertisement

ಶರತ್‌ ಸಾವು ಆಸ್ಪತ್ರೆಗೆ ಹರಿದುಬಂದ ಜನಸ್ತೋಮ

02:15 AM Jul 09, 2017 | Harsha Rao |

ಮಂಗಳೂರು: ಆರ್‌ಎಸ್‌ಎಸ್‌ ಕಾರ್ಯಕರ್ತ ಸಜೀಪ ಮುನ್ನೂರಿನ ಶರತ್‌ ಮಡಿವಾಳ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಹಾಗೂ ಮೆರವಣಿಗೆಯಲ್ಲಿ ಭಾಗವಹಿಸಲು ಶನಿವಾರ ಬೆಳಗಿನಿಂದಲೇ ಖಾಸಗಿ ಆಸ್ಪತ್ರೆಯಲ್ಲಿ ಹಿಂದೂ ಸಂಘಟನೆಗಳು ಕಾರ್ಯಕರ್ತರು, ಬಿಜೆಪಿ ನಾಯಕರು ಸಹಿತ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು.

Advertisement

ದುಷ್ಕರ್ಮಿಗಳಿಂದ ಕಳೆದ ಮಂಗಳವಾರ ರಾತ್ರಿ ಮಾರಣಾಂತಿಕ ಹಲ್ಲೆಗೊಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಶರತ್‌ ಅವರು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಂಜೆ ಮೃತಪಟ್ಟಿದ್ದರು.

ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಶುಕ್ರವಾರ ರಾತ್ರಿಯೇ ನಡೆಸಿ ಬಳಿಕ ಶವಾಗಾರದಲ್ಲಿ ಇಡಲಾಗಿತ್ತು. ಶನಿವಾರ ಬೆಳಗ್ಗೆ 10 ಗಂಟೆಗೆ ಆಸ್ಪತ್ರೆಯಿಂದ ಪುಷ್ಪಾಲಂಕೃತ ಆ್ಯಂಬುಲೆನ್ಸ್‌ ಮೂಲಕ ಸಜೀಪ ಮುನ್ನೂರು ಗ್ರಾಮದ ಕಂದೂರು ಬಳಿಯ ಆವರ ನಿವಾಸ ಪಾಡಿ ಮನೆಗೆ ವಾಹನಗಳ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. “ಬೋಲೋ ಭಾರತ್‌ ಮಾತಾಕೀ ಜೈ.. ಶರತ್‌ ಅಮರ್‌ ರಹೇ ‘ ಎಂಬ ಘೋಷಣೆಗಳೊಂದಿಗೆ ಅಲಂಕೃತ ಆ್ಯಂಬುಲೆನ್ಸ್‌ನಲ್ಲಿ ಪಾರ್ಥಿವ ಶರೀರವನ್ನು ಇಡಲಾಯಿತು. 

ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್‌, ಮಾಜಿ ಶಾಸಕರಾದ ಎನ್‌. ಯೋಗೀಶ್‌ ಭಟ್‌, ರುಕ್ಮಯ ಪೂಜಾರಿ, ವಿಧಾನಪರಿ
ಷತ್‌ ಮಾಜಿ ಸದಸ್ಯ ಕೆ.ಮೋನಪ್ಪ ಭಂಡಾರಿ, ಮಂಗಳೂರು ವಿಧಾಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್‌ ಕುಮಾರ್‌ ಶೆಟ್ಟಿ, ಉತ್ತರ ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಡಾ| ಭರತ್‌ ಶೆಟ್ಟಿ,ಬಿಜೆಪಿ ಮುಖಂಡ ರಾಜೇಶ್‌ ನಾೖಕ್‌ ಉಳಿಪಾಡಿ, ಜಿತೇಂದ್ರ ಕೊಟ್ಟಾರಿ, ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಹರೀಶ್‌ ಪೂಂಜ, ಹಿಂದೂ ಸಂಘಟನೆಗಳ ಮುಖಂಡರಾದ ಶರಣ್‌ ಪಂಪ್‌ವೆಲ್‌, ಜಗದೀಶ ಶೇಣವ, ಸತ್ಯಜಿತ್‌ ಸುರತ್ಕಲ್‌ ಮತ್ತಿತರು ಆಸ್ಪತೆಯಲ್ಲಿ ಉಪಸ್ಥಿತರಿದ್ದು, ಪಾರ್ಥಿವ ಶರೀರದ ಮೆರವಣಿಗೆ ಸಿದ್ದತೆಗಳನ್ನು ನಿರ್ವಹಿಸಿದರು.

ಪೊಲೀಸ್‌ ಜೀಪು ಮುಂದುಗಡೆ, ಆ ಬಳಿಕ ಪ್ರಮುಖ ಮುಖಂಡರ ಕಾರುಗಳು, ಅದರ ಹಿಂದೆ ಪಾರ್ಥಿವ ಶರೀರವಿದ್ದ ಆ್ಯಂಬುಲೆನ್ಸ್‌ , ಆಬಳಿಕ ದ್ವಿಚಕ್ರ ವಾಹನಗಳು, ಅದರ ಹಿಂದೆ ಕಾರುಗಳು ಸಾಗಿದವು. ಕುಂಟಿಕಾನ, ಕೆಪಿಟಿ, ಬಿಕರ್ನ
ಕಟ್ಟೆ, ಮರೋಳಿ ಕೈಕಂಬ , ಪಡೀಲ್‌, ಬಿ.ಸಿ.ರೋಡ್‌, ಮೆಲ್ಕಾರ್‌ ಮೂಲಕ ವಾಹನ ಮೆರವಣಿಗೆ ಸಾಗಿತು.

Advertisement

ಬಿಗು ಪೊಲೀಸ್‌ ಬಂದೋಬಸ್ತು
ಆಸ್ಪತ್ರೆಯ ಆವರಣದಲ್ಲಿ ಬಿಗು ಪೊಲೀಸ್‌ ಬಂದೋಬಸ್ತು ಆಯೋಜಿಸಲಾಗಿತ್ತು. ಉನ್ನತ ಅಧಿಕಾರಿಗಳು ಸ್ಥಳದಲ್ಲಿದ್ದಾರೆ.
ಡಿಸಿಪಿಗಳು, ಎಸಿಪಿಗಳು ನಗರದ ವಿವಿಧ ಠಾಣೆಗಳ ಇನ್ಸ್‌ಪೆಕ್ಟರ್‌ಗಳು ಉಪಸ್ಥಿತರಿದ್ದು ಬಂದೋಬಸ್ತಿನ ಮೇಲುಸ್ತುವಾರಿ ನೋಡಿಕೊಂಡರು. ಮೆರವಣಿಗೆ ಹಾದಿಯುದ್ದಕ್ಕೂ ಪೊಲೀಸರನ್ನು ನಿಯೋಜಿಸಲಾಗಿತ್ತು.

ಕಲ್ಲು ಸಂಗ್ರಹ ವೀಡಿಯೋ ವೈರಲ್‌
ಮಂಗಳೂರು
: ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಅವರ ಪಾರ್ಥಿವ ಶರೀರದ ಮೆರವಣಿಗೆ ಸಂದರ್ಭ ಬಿ.ಸಿ.ರೋಡು ಕೈಕಂಬದಲ್ಲಿ ಕಲ್ಲುತೂರಾಟ ನಡೆದಿದ್ದು, ಈ ಸಂದರ್ಭದಲ್ಲಿ  ಹೆದ್ದಾರಿಯ ಡಿವೈಡರ್‌ನಲ್ಲಿದ್ದ ಕಲ್ಲುಗಳನ್ನು ಶೇಖರಿಸಿ ಕಾರಿನೊಳಗೆ ಸಂಗ್ರಹಿಸುತ್ತಿರುವ ವೀಡಿಯೊ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಈ ವೀಡಿಯೊದಲ್ಲಿ ಕಲ್ಲು ಹೆಕ್ಕುತ್ತಿರುವವರನ್ನು ಮಾರ್ಕ್‌ ಮಾಡಿ ತೋರಿಸಲಾಗಿದ್ದು, ಅವರು ಕಲ್ಲೆಸೆತದಲ್ಲಿ ಭಾಗಿಯಾಗಿದ್ದರೇ ಎಂಬುದು ಖಚಿತವಾಗಿಲ್ಲ.

“ಮಂಗಳೂರು ಮುಸ್ಲಿಮ್ಸ್‌’ ಫೇಸ್‌ಬುಕ್‌ ಪೇಜ್‌ ವಿರುದ್ಧ ದೂರು
ಮಂಗಳೂರು
: “ಮಂಗಳೂರು ಮುಸ್ಲಿಮ್ಸ್‌’ ಫೇಸ್‌ಬುಕ್‌ ಖಾತೆಯು ಕೋಮುದ್ವೇಷ, ಕೊಲೆ, ಬೆದರಿಕೆ ಬರಹ ಪ್ರಕಟಿಸಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಫೇಸ್‌ಬುಕ್‌ ಖಾತೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್‌ ಚೌಟ ಶನಿವಾರ ಬಂದರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಶುಕ್ರವಾರ ಶರತ್‌ ಸಾವಿಗೀಡಾದ ಅನಂತರ “ಎ.ಜೆ. ಆಸ್ಪತ್ರೆಯಲ್ಲಿ ಒಂದು ವಿಕೆಟ್‌ ಪತನ. ಇನ್ನು ಕಲ್ಲಡ್ಕದಲ್ಲಿ ಯಾವಾಗ?’ ಎಂದು ಮಂಗಳೂರು ಮುಸ್ಲಿಮ್ಸ್‌ ಫೇಸ್‌ಬುಕ್‌ ಖಾತೆಯಲ್ಲಿ ಬರೆಯಲಾಗಿತ್ತು. ಇದು ಕೋಮುದ್ವೇಷ ಹರಡುವ ಹಾಗೂ ಕಲ್ಲಡ್ಕದಲ್ಲಿ ಇನ್ನೊಂದು ಹತ್ಯೆ ನಡೆಸುವ ಯೋಜನೆಯನ್ನು ಇಟ್ಟುಕೊಂಡಿರುವುದಕ್ಕೆ ನಿದರ್ಶನವಾಗಿದೆ. ಅಲ್ಲದೇ, ಆರ್‌ಎಸ್‌ಎಸ್‌ ಮುಖಂಡ ಡಾ | ಪ್ರಭಾಕರ ಭಟ್‌ ಕಲ್ಲಡ್ಕ ಅವರ ವಿರುದ್ಧ ಕೊಲೆ ಬೆದರಿಕೆಯನ್ನೂ ಈ ಪೇಜ್‌ನಲ್ಲಿ ಹಾಕಲಾಗಿತ್ತು. ಈ ಹಿಂದೆ ಎಸ್‌ಡಿಪಿಐ ಮುಖಂಡ ಅಶ್ರಫ್‌ ಕೊಲೆಯಾದಾಗ ಇದೇ ಖಾತೆಯಲ್ಲಿ “ಕೊಲೆಗೆ ಪ್ರತೀಕಾರ ಮಾಡದೆ ಮರಣ ಹೊಂದಲಾರೆವು’ ಎಂದು ಬರೆಯಲಾಗಿತ್ತು. ಆದ್ದರಿಂದ ಈ ಫೇಸ್‌ಬುಕ್‌ನ ಸದಸ್ಯನಿಗೆ ಶರತ್‌ ಕೊಲೆಯ ಒಳಸಂಚಿನ ಅರಿವು ಇರುವುದು ಸ್ಪಷ್ಟವಾಗುತ್ತದೆ ಎಂದು ದೂರಿನಲ್ಲಿ ಬ್ರಿಜೇಶ್‌ ಅವರು ತಿಳಿಸಿದ್ದಾರೆ.
ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ. ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next