ಯಾದಗಿರಿ: ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಹಾಸನ ಅಶ್ಲಿಲ ವಿಡಿಯೋಗೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಸರ್ಕಾರ ಎಸ್.ಐ.ಟಿ ತನಿಖೆಗೆ ಒಪ್ಪಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ (ಜೆಡಿಎಸ್) ಅಮಾನತು ಮಾಡಬೇಕೆಂದು ಶಾಸಕ ಶರಣಗೌಡ ಕಂದಕೂರು ಅವರು ಜೆಡಿಎಸ್ ರಾಷ್ಟ್ರಾಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರಿಗೆ ಪತ್ರ ಬರೆದಿದ್ದಾರೆ.
ಹಾಸನ ಹೆಣ್ಣು ಮಕ್ಕಳ ಜೊತೆ ಅಶ್ಲಿಲ ವಿಡಿಯೋ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ಅವರ ಹೆಸರು ತಳುಕು ಹಾಕುತ್ತಿದ್ದು, ಲೋಕಸಭೆ ಚುನಾವಣೆ ಹೊತ್ತಲ್ಲಿ ಪಕ್ಷಕ್ಕೆ ಅತ್ಯಂತ ಮುಜುಗರ ಉಂಟು ಮಾಡುವ ಘಟನೆ ಇದಾಗಿದೆ. ಹಲವು ವರ್ಷಗಳಿಂದ ರಾಜ್ಯದಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಹೊಂದಿದ ಜೆಡಿಎಸ್ ಪಕ್ಷಕ್ಕೆ ಇದು ಆಘಾತ ಸಂಗತಿಯಾಗಿದೆ. ನನಗೂ ವಯಕ್ತಿಕವಾಗಿ ಬೇಸರ ತರಿಸಿದೆ ಎಂದು ಶಾಸಕ ಕಂದಕೂರು ಪತ್ರದಲ್ಲಿ ತಿಳಿಸಿದ್ದಾರೆ.
ಜೆಡಿಎಸ್ ಪಕ್ಷದ ತತ್ವ ಸಿದ್ದಾಂತಕ್ಕೆ ಕಟಿಬದ್ಧರಾಗಿ ಹಲವು ದಶಕಗಳಿಂದ ತಾವು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರು ರಾಜಕೀಯ ರಂಗದಲ್ಲಿ ದುಡಿದಿದ್ದೀರಿ, ಹೆಣ್ಣು ಮಕ್ಕಳ ಬಗ್ಗೆ ಅಪಾರವಾದ ಗೌರವ ಇಟ್ಟುಕೊಂಡ ತಾವು ಕೂಡಲೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂತರಿಕ ತನಿಖೆ ತಂಡವನ್ನು ನಿರ್ಮಿಸಿ ಪಕ್ಷಕ್ಕೆ ಆಗಬಹುದಾದ ಅವಮಾನ ಹಾಗೂ ಮುಂದಿನ ಆರೋಪಗಳ ಬಗ್ಗೆ ಮುತುವರ್ಜಿ ವಹಿಸಬೇಕೆಂದು ಹೇಳಿದ್ದಾರೆ.
ಸರ್ಕಾರ ಈಗಾಗಲೇ ಈ ಪ್ರಕರಣವನ್ನು ಎಸ್.ಐ.ಟಿ ಗೆ ವಹಿಸಿದ್ದು, ಪಕ್ಷದ ಘನತೆಯನ್ನು ಹಾಗೂ ರಾಜ್ಯದ ತಾಯಂದಿರಿಗೆ ಸತ್ಯಾಸತ್ಯಯನ್ನು ಗೊತ್ತುಪಡಿಸಲು ಹಿರಿಯರಾದ ತಾವು ತನಿಖೆ ಸಮಿತಿ ರಚಿಸಬೇಕು, ಇಲ್ಲವಾದರೆ ಲೋಕಸಭೆ ಚುನಾವಣೆ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರಲಿದೆ ಎಂದು ಶಾಸಕ ಕಂದಕೂರು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ