ನಿರ್ದೇಶಕ ಚಂದ್ರಮೋಹನ್ ಅವರ “ಡಬ್ಬಲ್ ಇಂಜನ್’ ಚಿತ್ರ ಮುಂದಿನ ವಾರ ಬಿಡುಗಡೆಯಾಗುತ್ತಿದೆ. ಚಿತ್ರವೆಲ್ಲಾ ಮುಗಿದ ಮೇಲೆ ನಟ ಶರಣ್ ಅವರಿಗೊಮ್ಮೆ ತೋರಿಸಬೇಕು ಅಂತ ಚಿಕ್ಕಣ್ಣ ಮತ್ತು ನಿರ್ದೇಶಕರು ನಿರ್ಧರಿಸಿ, ಶರಣ್ ಅವರಿಗೆ ಚಿತ್ರದ ಕೆಲ ದೃಶ್ಯ ತೋರಿಸಿದಾಗ, ಸ್ವತಃ ಶರಣ್ ಅವರೇ, ಈ ಚಿತ್ರಕ್ಕೆ ನಾನು ಹಿನ್ನೆಲೆ ಧ್ವನಿ ಕೊಡ್ತೀನಿ. ಅದು ಇನ್ನಷ್ಟು ಮಜವಾಗಿರುತ್ತೆ ಅಂತ ಹೇಳಿ ಚಿತ್ರಕ್ಕೆ ವಾಯ್ಸ ಕೊಡುವ ಮೂಲಕ ಚಿಕ್ಕಣ್ಣ ಮತ್ತು ನಿರ್ದೇಶಕರನ್ನು ಪ್ರೋತ್ಸಾಹಿಸಿದ್ದಾರೆ.
ಇತ್ತೀಚೆಗೆ ಶರಣ್ ಬಾಲಾಜಿ ಸ್ಟುಡಿಯೋಗೆ ತೆರಳಿ, ಚಿತ್ರಕ್ಕೆ ಧ್ವನಿಯಾಗಿದ್ದಾರೆ. ಅದು ಇಡೀ ಚಿತ್ರದ ಪಾತ್ರಗಳ ಪರಿಚಯ ಮತ್ತು ಕಥೆಯ ಹೂರಣದ ಎಳೆಯನ್ನು ಬಿಚ್ಚಿಡುವಂತಹ ಮಾತುಗಳು ಶರಣ್ ಅವರಿಂದ ಕೇಳಿಸುತ್ತವೆ. “ಚಿತ್ರ ಶುರುವಾಗುವುದೇ ಶರಣ್ ಅವರ ಹಿನ್ನೆಲೆ ಧ್ವನಿ ಮೂಲಕ. ಆರಂಭವಷ್ಟೇ ಅಲ್ಲ, ಅಂತ್ಯದಲ್ಲೂ ಶರಣ್ ಅವರ ಮಾತುಗಳು ಕೇಳಿಬರಲಿವೆ.
ಅಂದಹಾಗೆ, ಶರಣ್ ಅವರ ಈ ಹಿನ್ನೆಲೆ ಧ್ವನಿ, ಸುಮಾರು ಐದು ನಿಮಿಷಗಳ ಕಾಲ ಬರಲಿದ್ದು, ಅವರ ಮಾತುಗಳಲ್ಲೂ ಹಾಸ್ಯವಿದೆ, ಮೌಲ್ಯಗಳಿವೆ. ಚಿತ್ರ ನೋಡಿದಾಗ, ನಮಗೂ ಇದಕ್ಕೊಂದು ಹಿನ್ನೆಲೆ ಧ್ವನಿ ಇದ್ದರೆ ಚೆನ್ನಾಗಿರುತ್ತೆ ಅನಿಸಿತ್ತು. ಅದೇ ವೇಳೆಗೆ ಶರಣ್ ಅವರು ಸಹ, ಚಿತ್ರಕ್ಕೆ ಹಿನ್ನೆಲೆ ಧ್ವನಿ ಕೊಡುವುದಾಗಿ ಹೇಳಿದ್ದರಿಂದ ಕೂಡಲೇ ಒಂದಷ್ಟು ತಯಾರಿ ನಡೆಸಿ, ಚಿತ್ರಕ್ಕೆ ಪೂರಕವಾದ ಮಾತುಗಳನ್ನು ಪೋಣಿಸಿ ಅವರಿಂದ ಹೇಳಿಸಲಾಗಿದೆ’ ಎನ್ನುತ್ತಾರೆ ಚಂದ್ರಮೋಹನ್.
“ಡಬ್ಬಲ್ ಇಂಜನ್’ನ ವಿಶೇಷತೆ ಅಂದರೆ, ಇಲ್ಲಿ ಹಾಸ್ಯಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಹಾಸ್ಯದ ಮೂಲಕ ತಿಳಿ ಸಂದೇಶವೂ ರವಾನಿಸಲಾಗಿದೆ. ಚಿತ್ರದಲ್ಲಿ ಸುಮನ್ ರಂಗನಾಥ್, ಚಿಕ್ಕಣ್ಣ, ದತ್ತಣ್ಣ, ಸಾಧು ಕೋಕಿಲ, ಅಚ್ಯುತ್ ಕುಮಾರ್, ಸುಚೇಂದ್ರ ಪ್ರಸಾದ್ ಇತರರು ನಟಿಸಿದ್ದಾರೆ. ವೀರ್ ಸಮರ್ಥ್ ಸಂಗೀತವಿದೆ. ಸೂರ್ಯ ಎಸ್.ಕಿರಣ್ ಛಾಯಾಗ್ರಹಣವಿದೆ. ಎಸ್.ಆರ್.ಎಸ್. ಗ್ರೂಪ್ ಬ್ಯಾನರ್‌ನಡಿ ಗೆಳೆಯರು ಸೇರಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.