Advertisement
ಒಬ್ಬಳು ವಿದೇಶಿ ಮಹಿಳೆ, ಕದ್ರಿ ಗೋಪಾಲನಾಥರವರ ಬಳಿ ಸ್ಯಾಕ್ಸೋಫೋನ್ ಅಭ್ಯಾಸಕ್ಕೆಂದು ಬಂದಿದ್ದಳು. ಕದ್ರಿಯವರು ಆಕೆಗೆ, “ನೀನು ಶೃಂಗೇರಿಗೆ ಹೋಗಿ ಬಾ. ಅಲ್ಲಿ ಶಾರದಾಂಬೆ ಮತ್ತು ಗುರುಗಳ ದರ್ಶನ ಪಡೆದು, ಮತ್ತೆ ಇಲ್ಲಿಗೆ ಬಾ. ನಾನು ವಾದನ ಕಲಿಸುತ್ತೇನೆ’ ಎಂದು ಸೂಚಿಸಿದ್ದರು. “ಅಲ್ಲಿ ಅಂಥ ವಿಶೇಷ ಏನಿದೆ?’, ಅವಳ ಪ್ರಶ್ನೆ. “ನಿಮಗೆಲ್ಲಾ ವ್ಯಾಟಿಕನ್ ಸಿಟಿ ಹೇಗೆ ಪುಣ್ಯಸ್ಥಳವೋ, ನಮಗೆ ಅಂಥ ಪರಮೋಚ್ಚ ಶ್ರದ್ಧಾಕೇಂದ್ರ ಶೃಂಗೇರಿ’ ಎಂದರು.
Related Articles
Advertisement
ಕದ್ರಿಯವರಿಗೆ ಅವರ ಯೋಗ್ಯತೆಗೆ ತಕ್ಕಂತೆ ಸಾಕಷ್ಟು ಬಿರುದು ಬಾವಲಿಗಳು ಬಂದಿವೆ. ಅವುಗಳನ್ನೆಲ್ಲ ಹೆಸರಿನೊಂದಿಗೆ ಹಾಕಿಕೊಳ್ಳುವುದೆಂದರೆ ಅವರಿಗೊಂದು ಸಂಭ್ರಮ ಕೂಡ. ಕಛೇರಿಗೆ ಬರುವಾಗ ಅವರು ಧರಿಸುವ ವೇಷಭೂಷಣಗಳೇ ಅವರ ವರ್ಣರಂಜಿತ ವ್ಯಕ್ತಿತ್ವವನ್ನು ಸಾರುತ್ತಿದ್ದವು. ನಿರೂಪಕಿ ತಮ್ಮ ಹೆಸರು ಹೇಳುವಾಗ, ಬಿರುದುಗಳನ್ನೂ ಹೇಳಬೇಕು ಎನ್ನುವುದು ಅವರ ಮನದಾಸೆ. ಆದರೆ, ಶೃಂಗೇರಿಗೆ ಬಂದಾಗ, ಅವೆಲ್ಲ ಭಾವವನ್ನೂ ಕದ್ರಿ ಕಳಚಿಡುತ್ತಿದ್ದರು.
“ಶಾರದೆಯ ಮುಂದೆ, ನಾನು ಒಬ್ಬ ಸಾಮಾನ್ಯ ಮನುಷ್ಯ. ಬಿರುದು- ಬಾವಲಿ ಹೇಳುವುದು ಬೇಡ’ ಎನ್ನುವ ವಿನೀತ ಭಾವ. ಶ್ರೀಗಳ ಮುಂದೆ ಸ್ಯಾಕ್ಸ್ ನುಡಿಸುವ ಅವಕಾಶದ ಮುಂದೆ, ಜಗತ್ತಿನ ಯಾವ ವೇದಿಕೆಯೂ ಸಮವಲ್ಲ’ ಎಂದು ಕದ್ರಿ ಭಾವಿಸುತ್ತಿದ್ದರು. ವರ್ಷವಿಡೀ ಸುತ್ತಾಟ. ಸಾಕಷ್ಟು ಕಲಾವಿದರ ಒಡನಾಟ. ಹೀಗಿದ್ದರೂ, ಅವರ ನೆನಪಿನ ಶಕ್ತಿ ಮತ್ತೂಂದು ಅದ್ಭುತ. “ಸ್ಥಳೀಯ ಕಲಾವಿದರನ್ನೂ ಚೆನ್ನಾಗಿ ಗುರುತಿಟ್ಟುಕೊಳ್ಳುತ್ತಿದ್ದ ಸಹೃದಯಿ, ಕದ್ರಿ.
ಯಾರಾದರೂ ಕಛೇರಿಗೆ ಗೈರಾಗಿದ್ದರೆ, ಮರುವರ್ಷ ಬಂದಾಗ, ನೀವೇಕೆ ಅಂದು ಕಛೇರಿಗೆ ಬರಲಿಲ್ಲ ಎಂದು ಕೇಳುತ್ತಿದ್ದರು’ ಎನ್ನುತ್ತಾ, ಸ್ಥಳೀಯ ಮೃದಂಗ ವಾದಕ ನೆಭಿ ಪ್ರಭಾಕರ್, ಸ್ಯಾಕ್ಸೋ ಗಾರುಡಿಗನನ್ನು ನೆನೆಯುತ್ತಾರೆ. ಶೃಂಗೇರಿಯೆಂದರೆ, ನನಗೊಂದು ಅವ್ಯಕ್ತವಾದ ವೈಬ್ರೇಷನ್ ಎಂದು ಕದ್ರಿ ಸದಾ ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದಿದೆ. ನಾದರೂಪಿಣಿ ಶೃಂಗೇರಿ ಶಾರದೆಯ ಸಂಗೀತ ಸೇವೆಗೆ ಕದ್ರಿ ಒಂದು ಅನುಪಮ ರೂಪಕ.
ಶಾರದೆಯ ಮುಂದೆ ಇದೇ ರಾಗ…: ಶೃಂಗೇರಿಯಲ್ಲಿ ಅವರು “ಶ್ರೀಚಕ್ರರಾಜಸಿಂಹಾಸನೇಶ್ವರಿ’ ಎಂಬ ರಾಗಮಾಲಿಕೆಯ ಕೃತಿಯನ್ನು ನುಡಿಸದೇ ಇರುತ್ತಿರಲಿಲ್ಲ. ಕ್ಲಾಸ್ ಮತ್ತು ಮಾಸ್ ಅನ್ನು ಏಕಕಾಲಕ್ಕೆ ನಾದಸುಧೆಯಿಂದ ತೃಪ್ತಿಪಡಿಸುವ ಚಾಕಚಕ್ಯತೆ ಅವರದಾಗಿತ್ತು.
* ರಮೇಶ್ ಬೇಗಾರ್