ಪಾಟ್ನಾ: ಮಹಾಘಟಬಂಧನ್ ಕೂಟ ಕೇಂದ್ರ ಮಾಜಿ ಸಚಿವ ಶರದ್ ಯಾದವ್ ಅವರ ಎಲ್ ಜೆಡಿಯನ್ನು ಆರ್ ಜೆಡಿ ಮತ್ತು ಕಾಂಗ್ರೆಸ್ ನಿರ್ಲಕ್ಷಿಸಿದ್ದು, ಇದೀಗ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಲ್ ಜೆಡಿ 51 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸಿದೆ.
ಬಿಹಾರ ಚುನಾವಣೆಯ ಮೊದಲ ಹಂತದಲ್ಲಿ ಕೇವಲ ಕುರ್ಥಾ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಲು ಪಕ್ಷ ನಿರ್ಧರಿಸಿದ್ದು, ಎರಡು ಮತ್ತು ಮೂರನೇ ಹಂತದಲ್ಲಿ ಒಟ್ಟು 50 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಎಲ್ ಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಶ್ರೀವಾಸ್ತವ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರ್ಧಾರ ತೆಗೆದುಕೊಳ್ಳಲು ವಿಳಂಬವಾಗಿತ್ತು. ಅದಕ್ಕೆ ಕಾರಣ ಶರದ್ ಯಾದವ್ ಅವರು ಅನಾರೋಗ್ಯಕ್ಕೊಳಗಾಗಿದ್ದದ್ದು. ಈ ಸಂದರ್ಭದಲ್ಲಿ ನಮಗೆ ಮೊದಲ ಹಂತದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಶರದ್ ಯಾದವ್ ಅವರ ರಾಜಕೀಯ ಕೊಡುಗೆಯನ್ನು ರಕ್ಷಿಸುವ ನಿಟ್ಟಿನಲ್ಲಿ ನಾವು ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗಿದೆ. ಮಧ್ಯಪ್ರದೇಶದ ನಿವಾಸಿ ಶರದ್ ಯಾದವ್ ಅವರು ಸಮಾಜವಾದಿ ಮುಖಂಡರಾಗಿದ್ದಾರೆ. ಬಿಹಾರದಲ್ಲಿ ಶರದ್ ಅವರು ಲಾಲು ಪ್ರಸಾದ್ ಅಥವಾ ನಿತೀಶ್ ಕುಮಾರ್ ಅವರ ನೆರವಿನೊಂದಿಗೆ ಚುನಾವಣೆಯಲ್ಲಿ ಸ್ಪರ್ಧೆಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದರು. ಸರ್ಕಾರಿ ಹುದ್ದೆಯಲ್ಲಿ ಹಿಂದುಗಳಿದ ಜಾತಿಗೆ ಮೀಸಲಾತಿ ನೀಡಬೇಕೆಂಬ ಮಂಡಲ್ ಆಯೋಗದ ಚಳವಳಿ ಸಂದರ್ಭದಲ್ಲಿಯೇ ಶರದ್ ಲಾಲು ಪ್ರಸಾದ್, ನಿತೀಶ್ ಕುಮಾರ್ ಜತೆ ಕೈಜೋಡಿಸಿದ್ದರು. ನಿತೀಶ್ ಕುಮಾರ್ ಅವರ ಜೆಡಿಯು ಭಾರತೀಯ ಜನತಾ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿದ್ದರ ಹಿನ್ನೆಲೆಯಲ್ಲಿ ಶರದ್ ಯಾದವ್ 2018ರಲ್ಲಿ ಬಿಹಾರದಲ್ಲಿ ಲೋಕ್ ತಾಂತ್ರಿಕ್ ಜನತಾ ದಳ ಪಕ್ಷವನ್ನು ಸ್ಥಾಪಿಸಿದ್ದರು.
ಜಾತ್ಯತೀತ ನಿಲುವನ್ನು ಹೊಂದಿರುವ ಶರದ್ ಯಾದವ್ ಅವರ ನೂತನ ಪಕ್ಷ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಖಾತೆ ತೆರೆಯುಲಿದೆಯಾ ಎಂಬುದನ್ನು ಕಾದುನೋಡಬೇಕಾಗಿದೆ.