ನವದೆಹಲಿ: ಹಿರಿಯ ರಾಜಕಾರಣಿ ಶರದ್ ಪವಾರ್ ಅವರು ನ್ಯಾಷನಲಿಷ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಮಂಗಳವಾರ (ಮೇ.2 ರಂದು) ಹೇಳಿದ್ದಾರೆ.
ಮಂಗಳವಾರ ತಮ್ಮ ʼಲೋಕ್ ಮೇಜ್ ಸಂಗಟಿʼಯ ಎರಡನೇ ಆವೃತ್ತಿಯ ಬಿಡುಗಡೆ ವೇಳೆ ಅವರು “ನಾನು ಎನ್‌ಸಿಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ” ಎಂದಿದ್ದಾರೆ.
ರಾಜ್ಯಸಭೆಯಲ್ಲಿ ನನ್ನ ಅಧಿಕಾರವಧಿ ಇನ್ನು ಮೂರು ವರ್ಷವಿದೆ. ಇನ್ನು ಮುಂದೆ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಈ ಮೂರು ವರ್ಷದ ಅವಧಿಯಲ್ಲಿ ರಾಜ್ಯ ಹಾಗೂ ದೇಶದ ವಿಚಾರಗಳತ್ತ ಗಮನ ಹರಿಸುತ್ತೇನೆ. ಬೇರೆ ಯಾವ ಹೆಚ್ಚಿನ ಜವಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾನು ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯುತ್ತಿದ್ದೇನೆ. ಸಾವರ್ಜನಿಕ ಜೀವನದಿಂದ ನಿವೃತ್ತಿಯಾಗುತ್ತಿಲ್ಲ ಎಂದಿದ್ದಾರೆ.
ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳುವಾಗಲೇ ವೇದಿಕೆಯಲ್ಲಿ ನೆರದಿದ್ದ ನಾಯಕರು ಸೇರಿದಂತೆ ಹಲವಾರು ಮಂದಿ ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ತಮ್ಮ ರಾಜೀನಾಮೆಯ ಬಗ್ಗೆ ಇನ್ನೊಮ್ಮೆ ಪರಿಶೀಲಿಸಿ ಎಂದು ಹೇಳಿದರು.
ಅಜಿತ್ ಪವಾರ್ ಅವರು ಬಿಜೆಪಿಯೊಂದಿಗೆ ಕೈಜೋಡಿಸುತ್ತಾರೆ ಎನ್ನುವ ಮಾತುಗಳು ಚರ್ಚೆಯಲ್ಲಿರುವಾಗಲೇ ಶರಾದ್ ಪವಾರ್ ಅವರು ಈ ನಿರ್ಧಾರ ಕೈಗೊಂಡಿರುವುದು ರಾಜಕೀಯ ಜಟಾಪಟಿಗೆ ಕಾರಣವಾಗಿದೆ.