ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಸದ್ಯಕ್ಕೆ ಮಿಂಚುತ್ತಿರುವ ನಟಿ ಶಾನ್ವಿ ಶ್ರೀವಾತ್ಸವ್, ಇದೀಗ ವಿದೇಶದಲ್ಲೂ ಸದ್ದು ಮಾಡಿದ್ದಾರೆ! ಹೌದು, ಶಾನ್ವಿ ಸದ್ದಿಲ್ಲದೆಯೇ ಚೀನಾ ಭಾಷೆಯ ವೆಬ್ಸೀರೀಸ್ವೊಂದರಲ್ಲಿ ಅಭಿನಯಿಸಿದ್ದಾರೆ. “ದಿ ಡಾರ್ಕ್ ಲಾರ್ಡ್’ ಹೆಸರಿನ ಚಿತ್ರದಲ್ಲಿ ಶಾನ್ವಿ ನಟಿಸಿ ಬಂದಿದ್ದಾರೆ.
ಅದು 11 ಎಪಿಸೋಡ್ಗಳ ವೆಬ್ಸೀರಿಸ್ ಆಗಿದ್ದು, ಸುಮಾರು ಏಳು ಎಪಿಸೋಡ್ಗಳಲ್ಲಿ ಶಾನ್ವಿ ಕಾಣಿಸಿಕೊಳ್ಳಲಿದ್ದಾರೆ. ಮಲೇಶಿಯನ್ ನಿರ್ದೇಶಕ ಚಾಂಗ್ ನಿರ್ದೇಶನದ “ದಿ ಡಾರ್ಕ್ ಲಾರ್ಡ್’, ಚೈನೀಸ್ ಟಿವಿಯಲ್ಲಿ ಪ್ರಸಾರವಾಗಲಿದೆ. ಭಾರತೀಯ ರಾಣಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶಾನ್ವಿ, ಆ ಪಾತ್ರಕ್ಕಾಗಿ ಚೀನಾ ಭಾಷೆಯನ್ನು ಕಲಿತಿದ್ದಾರೆ ಎಂಬುದು ವಿಶೇಷ.
ಭಾಷಾಂತಕಾರರ ನೆರವು ಪಡೆದು ಸ್ವತಃ ಚೀನಾ ಭಾಷೆ ಕಲಿತು ಕ್ಯಾಮೆರಾ ಮುಂದೆ ನಿಂತಿದ್ದಾರೆ ಶಾನ್ವಿ. ಅದೊಂದು ಭಾರತ ಹಾಗೂ ಚೀನಾಗೆ ಸಂಬಂಧಿಸಿದ ಕಥೆಯಾಗಿದ್ದು, ಶಾನ್ವಿ ಇತ್ತೀಚೆಗೆ ಚೀನಾಗೆ ಹೋಗಿ ಆ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡು ಬಂದಿದ್ದಾರೆ.
ಇನ್ನೊಂದು ವಿಷಯವೆಂದರೆ, ಬಾಲಿವುಡ್ನ ಹಾಟ್ ನಟಿ ಸನ್ನಿ ಲಿಯೋನ್ ಅವರನ್ನು ಮೊದಲು ನಿರ್ದೇಶಕ ಚಾಂಗ್ ಅವರು ಆಯ್ಕೆ ಮಾಡಿದ್ದರು. ಆ ಬಳಿಕ ಆ ಪಾತ್ರಕ್ಕೆ ಸನ್ನಿ ಲಿಯೋನ್ ಅಷ್ಟಾಗಿ ಸರಿಹೊಂದುವುದಿಲ್ಲ ಎಂದೆನಿಸಿ, ಆ ನಿರ್ದೇಶಕರು ಶಾನ್ವಿ ಶ್ರೀವಾತ್ಸವ್ ಅವರನ್ನು ಕೇಳಿಕೊಂಡಿದ್ದರು.
ಪಾತ್ರ ಹಾಗೂ ಕಥೆ ಕೇಳಿದ ಶಾನ್ವಿ, ಒಪ್ಪಿಕೊಂಡು ನಟಿಸಿದ್ದಾರೆ. ಅಂದಹಾಗೆ, ಭಾರತೀಯ ರಾಣಿಯಾಗಿ ಚೈನಾದಲ್ಲಿ ಟ್ರಾವೆಲ್ ಮಾಡೋದೇ ಆ ಚಿತ್ರದ ಕಥೆಯಂತೆ. ಅದೇನೆ ಇರಲಿ, ಮೆಲ್ಲನೆ ವಿದೇಶಕ್ಕೆ ಹಾರಿ, ಅಲ್ಲಿನ ಚಿತ್ರದಲ್ಲಿ ನಟಿಸಿರುವ ಶಾನ್ವಿ, ಈಗ ಮತ್ತಷ್ಟು ಬೇಡಿಕೆ ಹೆಚ್ಚಿಸಿಕೊಂಡಿರುವುದಂತೂ ನಿಜ.