Advertisement
ಅನಿರೀಕ್ಷಿತವಾಗಿ ಶಾಂತಿಗ್ರಾಮ ತಾಲೂಕು ರಚನೆಗೆ ಸರ್ಕಾರ ಎರಡು ದಿನಗಳ ಹಿಂದೆಯಷ್ಟೇ ಅನುಮೋದನೆ ನೀಡಿದೆ. ಶಾಂತಿಗ್ರಾಮ ತಾಲೂಕು ರಚನೆ ಹಾಸನ ಜಿಲ್ಲೆಗೆ ಬಯಸದೆ ಬಂದ ಭಾಗ್ಯ ಎನ್ನಲಡ್ಡಿಯಿಲ್ಲ. ಜಿಲ್ಲೆಯಲ್ಲಿ ದೊಡ್ಡ ಹೋಬಳಿಗಳಾಗಿರುವ ಬಾಣಾವರ, ಜಾವಗಲ್, ರಾಮನಾಥಪುರ, ಕೊಣನೂರು, ಹಳ್ಳಿ ಮೈಸೂರು, ಶ್ರವಣಬೆಳಗೊಳ ತಾಲೂಕುಗಳಾಗಿದ್ದರೆ ಯಾರೂ ಅಚ್ಚರಿ ಪಡುತ್ತಿರಲಿಲ್ಲ. ಆದರೆ ತಾಲೂಕುಗಳ ಪುನಾರಚನೆ ಯಾವುದೇ ಆಯೋಗ, ಸಮಿತಿಯ ಶಿಫಾರಸ್ಸೂ ಇಲ್ಲದೆ, ಜನರು ಬೇಡಿಕೆಯನ್ನೂ ಮಂಡಿಸದಿದ್ದರೂ ಕೇವಲ 6,997 ಜನಸಂಖ್ಯೆ ಹೊಂದಿರುವ ಹೋಬಳಿ ಕೇಂದ್ರವಾಗಿರುವ ಶಾಂತಿಗ್ರಾಮವನ್ನು ತಾಲೂಕು ಕೇಂದ್ರವಾಗಿ ಘೋಷಿಸಲು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎಚ್ .ಡಿ.ರೇವಣ್ಣ ಅವರ ಒತ್ತಾಸೆಯೇ ಕಾರಣ. ರೇವಣ್ಣ ಅವರಹೊರತುಪಡಿಸಿ ಬೇರ್ಯಾರೂ ಶಾಂತಿಗ್ರಾಮ ತಾಲೂಕು ರಚನೆಯಾಗುತ್ತದೆಯೆಂದು ನಿರೀಕ್ಷಿಸಿರಲಿಲ್ಲ. ಅಂತೂ ಅನಿರೀಕ್ಷಿತ ವರ ಶಾಂತಿಗ್ರಾಮದ ಜನರಿಗೆ ಸಿಕ್ಕಿದೆ.
Related Articles
ಹಾಸನ ತಾಲೂಕಿನ ದುದ್ದ ಹೋಬಳಿ, ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿ ಸೇರುವುದು ಖಚಿತವಾಗಿದೆ. ಈ ಎರಡು ಹೋಬಳಿಗಳು ಶಾಂತಿಗ್ರಾಮಕ್ಕೆ ಸಮೀಪದಲ್ಲಿವೆ. ಹೋಬಳಿ ಕೇಂದ್ರದಷ್ಟೇ ಮಹತ್ವದ್ದಾಗಿರುವ ಶಾಂತಿಗ್ರಾಮ ಹೋಬಳಿಯಲ್ಲಿರುವ ದೊಡ್ಡ ಗ್ರಾಮ ಮೊಸಳೆ ಹೊಸಹಳ್ಳಿಗೆ ಹೋಬಳಿ ಕೇಂದ್ರದ ಸ್ಥಾನಮಾನ ನೀಡಿ ಶಾಂತಿಗ್ರಾಮ ತಾಲೂಕಿಗೆ ಸೇರಿಸಿದರೆ ನಾಲ್ಕು ಹೋಬಳಿಗಳಾಗುತ್ತವೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ಈಗ ಮೂರು ತಾಲೂಕುಗಳ ಹೋಬಳಿಗಳು ಸೇರಿವೆ. ಹೊಳೆನರಸೀಪುರ ತಾಲೂಕಿನ ಕಸಬಾ, ಹಳೆಕೋಟೆ, ಹಾಸನ ತಾಲೂಕಿನ ದುದ್ದ, ಶಾಂತಿಗ್ರಾಮ, ಚನ್ನರಾಯಪಟ್ಟಣ ತಾಲೂಕಿನ ದಂಡಿಗನ ಹಳ್ಳಿ ಹೋಬಳಿಗಳು ಹೊಳೆನರಸೀಪುರ ವಿಧಾನಸಭಾ ವ್ಯಾಪ್ತಿಯಲ್ಲಿವೆ. ಶಾಂತಿಗ್ರಾಮ ಹೊಸ ತಾಲೂಕಾದರೆ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ಎರಡು ತಾಲೂಕುಗಳು ಸೇರುತ್ತವೆ. ತಾಲೂಕುವಾರು ಹೆಚ್ಚು ಅನುದಾನವೂ ಬರುತ್ತದೆ. ಆಡಳಿತಾತ್ಮಕ
ಗೊಂದಲಗಳಿಗೂ ತೆರೆ ಬೀಳಲಿದೆ ಎಂಬ ಉದ್ದೇಶದಿಂದಲೇ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಜಿಲ್ಲಾಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರು ಶಾಂತಿಗ್ರಾಮ ತಾಲೂಕು ರಚನೆಗೆ ಮಂಜೂರಾತಿ ಪಡೆದಿದ್ದಾರೆ.
Advertisement
ಅಧಿಕಾರ ಇದ್ದಾಗ ಅವಕಾಶ ಬಳಸಿಕೊಳ್ಳಬೇಕು: ರೇವಣ್ಣ ಅಧಿಕಾರ ಇದ್ದಾಗ ಹಿಂದೆ, ಮುಂದೆ ನೋಡದೇ ಅವಕಾಶ ಬಳಸಿಕೊಳ್ಳಬೇಕು. ಇದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ಅವರು ಶಾಂತಿಗ್ರಾಮ ಹೊಸ ತಾಲೂಕು ರಚನೆಯ ಬಗ್ಗೆ ನೀಡಿದ ಪ್ರತಿಕ್ರಿಯೆ. ಹೊಸ ತಾಲೂಕು ರಚನೆಯ ಬಗ್ಗೆ ಪ್ರತಿಕ್ರಿಯಿಸಿದ ರೇವಣ್ಣ ಅವರು, ಜನರಿಗೆ ಅನುಕೂಲವಾಗಬೇಕು. ಆ ನಿಟ್ಟಿನಲ್ಲಿ ಹೊಸ ತಾಲೂಕಿಗೆ ಹೋಬಳಿಗಳ ಸೇರ್ಪಡೆಯ ಚಿಂತಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಶಾಂತಿಗ್ರಾಮ ವೇಗವಾಗಿ ಬೆಳೆಯುತ್ತಿದೆ. ಈಗಾಗಲೇ ಕೆಎಸ್‌ಆರ್‌ಪಿ ಬೆಟಾಲಿಯನ್‌ನ ಕೇಂದ್ರ, ಶಾಂತಿಗ್ರಾಮ ಸಮೀಪವೇ ಇದೆ. ಕೃಷಿ ಕಾಲೇಜೂ ಇದೆ. ಹೊಸ ಜೈಲು ಶಾಂತಿಗ್ರಾಮ ಸಮೀಪವೇ ನಿರ್ಮಾಣವಾಗಲಿದೆ. ಶಾಂತಿ ಗ್ರಾಮಕ್ಕೆ ಹೇಮಾವತಿ ನದಿಯಿಂದಲೇ ಕುಡಿಯುವ ನೀರು ಪೂರೈಕೆ ಕಾಮಗಾರಿ ಆರಂಭವಾಗಿದೆ. ಶಾಂತಿಗ್ರಾಮದಕೆರೆಗೆ ಕಾಚೇನಹಳ್ಳಿ ಏತ ನೀರಾವರಿ ಯೋಜನೆಯಿಂದ ನೀರು ತುಂಬಿಸ ಲಾಗುವುದು. ಹಾಗಾಗಿ ಹೊಸ ತಾಲೂಕು ಕೇಂದ್ರ ಇನ್ನು 5 ವರ್ಷದೊಳಗೆ ಪಟ್ಟಣದ ರೂಪ ಪಡೆಯಲಿದೆ ಎಂದು ಎಚ್.ಡಿ. ರೇವಣ್ಣ ಅವರು ಹೇಳಿದರು.